ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ: ಶಿಕ್ಷಕಿ ವೀಣಾ

ಸಮಯದ ಕರೆ- ಸಕಾರಾತ್ಮಕ ಬದಲಾವಣೆ ಕುರಿತು ಕಾರ್ಯಾಗಾರ
Published 25 ಜನವರಿ 2024, 4:58 IST
Last Updated 25 ಜನವರಿ 2024, 4:58 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಇದರಿಂದ ದೃಷ್ಟಿಕೋನ ಬದಲಾಗಿ ಆಂತರಿಕ ನೆಮ್ಮದಿ ಸಿಗುತ್ತದೆ’ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿರಸಿ ರಾಜಯೋಗ ಶಿಕ್ಷಣ ಕೆಂದ್ರದ ಶಿಕ್ಷಕಿ ವೀಣಾ ಬುಧವಾರ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಸಂಜೀವಿನಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸಮಯದ ಕರೆ- ಸಕಾರಾತ್ಮಕ ಬದಲಾವಣೆ’ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಪರಿವರ್ತನೆ ಜಗದ ನಿಯಮ. ಇದರಲ್ಲಿ ಹಲವು ವಿಧಗಳಿವೆ. ಕೆಲವು ಸಾರಿ ಮೇಲ್ಮುಖವಾಗಿ ಬದಲಾವಣೆ ಆಗುತ್ತಿದ್ದರೆ, ಕೆಲವು ಸಂದರ್ಭದಲ್ಲಿ ಪರಿವರ್ತನೆ ಇಳಿಮುಖವಾಗುತ್ತದೆ. ಇವತ್ತು ಜಗತ್ತು ಹೊರಮುಖವಾಗಿ ವೇಗವಾಗಿ ಬದಲಾವಣೆ ಆಗುತ್ತಿದೆ. ನಮ್ಮ ವಸ್ತ್ರ, ಜೀವನ ಶೈಲಿ, ಊಟ ತಿಂಡಿ ಎಲ್ಲವೂ ಬದಲಾಗುತ್ತಿದೆ’ ಎಂದರು. 

‘ದಶಕದ ಅವಧಿಯಲ್ಲಿ ನಾವು ಅಚ್ಚರಿಪಟ್ಟುಕೊಳ್ಳುವಷ್ಟು ಜಗತ್ತು ಬದಲಾಗಿದೆ. ಮನುಷ್ಯನಿಗೆ ಬದಲಾವಣೆ ಬೇಕಾಗಿದ್ದರೂ, ಸುಲಭವಾಗಿ ಒಪ್ಪುವುದಿಲ್ಲ. ಹಿಂದೇಟು ಹಾಕುತ್ತೇವೆ’ ಎಂದರು.

‘ಈಗ ನೈತಿಕತೆ ಕಳೆದುಕೊಳ್ಳುತ್ತಿದ್ದೇವೆ. ಮನೆಗಳು ದೊಡ್ಡದಾಗುತ್ತಿವೆ. ಮನಸ್ಸು ಚಿಕ್ಕದಾಗುತ್ತಿದೆ. ನಮ್ಮ ಮಾತು, ವ್ಯವಹಾರದಲ್ಲೂ ಬದಲಾವಣೆಗಳಾಗಬೇಕು’ ಎಂದು ವೀಣಾ ಹೇಳಿದರು. 

ನಕಾರಾತ್ಮಕ ಚಿಂತನೆ ಬೇಡ: ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಮಾತನಾಡಿ, ‘ಮನುಷ್ಯ ತನ್ನಲ್ಲಿರುವ ನಕಾರಾತ್ಮಕ ಅಂಶಗಳನ್ನು ಹೊರ ಹಾಕಿ ಉತ್ತಮ ಜೀವನ ನಡೆಸಲು ಸಕರಾತ್ಮಕ ಚಿಂತನೆ ಮಾಡಬೇಕು’ ಎಂದರು. 

‘ಸಕರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಹೊಸತನ ಬರುತ್ತದೆ. ನಕಾರಾತ್ಮಕವಾಗಿ ಯೋಚಿಸುತ್ತಿದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ’ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ದಾನೇಶ್ವರಿ ಅವರು ಮಾತನಾಡಿದರು. 

ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೊನ್ನಸ್ವಾಮಿ, ಚಂಪಕಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವೆಂಕಟೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ನಿವೇದಿತಾ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ, ಮಲ್ಲು ಸಂಜೀವಿನಿ ಟ್ಟಸ್ಟ್‌ನ ಸತೀಶ್ ಕುಮಾರ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT