ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಲಕ ವೃತ್ತಿಗೆ ಕುತ್ತು; ಕೆಲಸ ಅರಸಿ ವಲಸೆ

ನಾಗಮಲೆಗೆ ಚಾರಣ ನಿರ್ಬಂಧ, 80ಕ್ಕೂ ಹೆಚ್ಚು ವಾಹನಗಳ ಓಡಾಟ ಸ್ಥಗಿತ
ಜಿ.ಪ್ರದೀಪ್‌ಕುಮಾರ್‌
Published 22 ಮೇ 2024, 6:54 IST
Last Updated 22 ಮೇ 2024, 6:54 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ನಾಗಮಲೆಗೆ ಚಾರಣ ಮಾಡುವುದಕ್ಕೆ ನಿರ್ಬಂಧ ಹೇರಿದ ಮೇಲೆ, ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತದವರೆಗೂ ಭಕ್ತರು ಮತ್ತು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಕ್ರೂಸರ್‌, ಜೀಪುಗಳನ್ನು ಚಾಲನೆ ಮಾಡುತ್ತಿದ್ದವರ ಕೆಲಸಕ್ಕೆ ಕುತ್ತು ಬಂದಿದ್ದು, ಅವರಲ್ಲಿ ಬಹುತೇಕರು ತಮಿಳುನಾಡು, ಆಂಧ್ರಪ್ರದೇಶಕ್ಕೆ ಕೂಲಿ ಅರಸಿಕೊಂಡು ಹೋಗಿದ್ದಾರೆ. 

ಮಹದೇಶ್ವರಬೆಟ್ಟದಿಂದ ನಾಗಮಲೆಗೆ 9 ಕಿ.ಮೀ ದೂರ ಇದೆ. ಬೆಟ್ಟದಿಂದ ಇಂಡಿಗನತ್ತಕ್ಕೆ ಹೋಗಿ ಅಲ್ಲಿಂದ ನಾಗಮಲೆಗೆ ಹೋಗಬೇಕು. ಇಂಡಿಗನತ್ತದವರೆಗೆ ಕಚ್ಚಾ ರಸ್ತೆ ಇದ್ದು, ಅಲ್ಲಿಗೆ 5 ಕಿ.ಮೀ ದೂರ ಇದೆ. ಅಲ್ಲಿಂದ ನಾಗಮಲೆಗೆ 4 ಕಿ.ಮೀ ದೂರ ಇದ್ದು, ಕಾಲ್ನಡಿಗೆಯಲ್ಲೇ ಕ್ರಮಿಸಬೇಕು. 

ಬೆಟ್ಟದಿಂದ ಇಂಡಿಗನತ್ತದವರೆಗೆ ಪ್ರವಾಸಿಗರು, ಭಕ್ತರನ್ನು ಜೀಪುಗಳಲ್ಲಿ ಕರೆದೊಯ್ಯುವುದೇ ಹಲವರ ಉದ್ಯೋಗವಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು 120ಕ್ಕೂ ಹೆಚ್ಚು ವಾಹನಗಳಿವೆ ಎಂದು ಹೇಳುತ್ತಾರೆ. ಸ್ಥಳೀಯರು 80 ಎಂದು ಹೇಳುತ್ತಿದ್ದಾರೆ. ರಾಜ್ಯದಾದ್ಯಂತ ಸಂರಕ್ಷಿತ ಪ್ರದೇಶಗಳಲ್ಲಿ ಚಾರಣವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಅರಣ್ಯ ಇಲಾಖೆ ತೀರ್ಮಾನ ಕೈಗೊಂಡ ಬಳಿಕ ಮಲೆ ಮಹದೇಶ್ವರ ವನ್ಯಧಾಮದ ಆಡಳಿತ ಕೂಡ ಫೆ.16ರಿಂದ ನಾಗಮಲೆಗೆ ಚಾರಣ ನಿರ್ಬಂಧಿಸಿದೆ. ಚಾರಣಕ್ಕೆ ಪೂರ್ವ ಅನುಮತಿ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬರುವರೆಗೆ ಯಾರಿಗೂ ಭೇಟಿಗೆ ಅವಕಾಶ ನೀಡದಿರಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.  

ವಾಹನ ಚಲಾಯಿಸುತ್ತಿದ್ದವರಲ್ಲಿ ಇಂಡಿಗನತ್ತ ಗ್ರಾಮದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ತುಳಸಿಕೆರೆಯವರು, ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮದವರೂ ವಾಹನಗಳನ್ನು ಹೊಂದಿದ್ದರು. 

ಚಾರಣ ನಿರ್ಬಂಧಗೊಂಡಿರುವುದರಿಂದ ಚಾಲಕರಾಗಿದ್ದವರು, ಅನಿವಾರ್ಯವಾಗಿ ಬೇರೆ ಕೆಲಸ ಮಾಡಬೇಕಾಗಿದೆ. ಆಂಧ್ರಪ್ರದೇಶದ ಕರಿಕಲ್ಲು ಕ್ವಾರಿಗಳು, ತಮಿಳುನಾಡಿನ ತಿರುಪ್ಪೂರ್‌ನಲ್ಲಿ ಬಟ್ಟೆ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ಇನ್ನೂ ಕೆಲವರು ಸ್ಥಳೀಯವಾಗಿ ಕೂಲಿ ಹುಡುಕಿಕೊಂಡಿದ್ದಾರೆ. 

ನಾಗಮಲೆಗೆ ಭಕ್ತರ ಓಡಾಟ ಇದ್ದಾಗ ಸ್ಥಳೀಯರಲ್ಲಿ ಕೆಲವರು ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದರು. ಈಗ ಅದು ಕೂಡ ನಿಂತುಹೋಗಿದೆ. 

‘ಇಂಡಿಗನತ್ತ ಮತ್ತು ನಾಗಮಲೆಗೆ ತೆರಳುವ ರಸ್ತೆಯಲ್ಲಿದ್ದ ಇತರ ಗ್ರಾಮಗಳ ಜನರು ವಾಹನ ಇರಿಸಿಕೊಂಡು, ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ನಮ್ಮ ಗ್ರಾಮದವರೂ ವಾಹನ ಹೊಂದಿದ್ದರು. ನಾಗಮಲೆ ಭೇಟಿಗೆ ಅವಕಾಶ ನೀಡದೇ ಇರುವುದರಿಂದ ಕೆಲಸ ಇಲ್ಲದಂತಾಗಿದೆ. ಯುವಕರು ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದು ತುಳಸಿಕೆರೆ ಗ್ರಾಮದ ಮುಖಂಡ ಕೆಂಪ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಏಪ್ರಿಲ್‌ 26ರಂದು ಮತದಾನದ ದಿನ ಇಂಡಿಗನತ್ತದಲ್ಲಿ ನಡೆದ ಕಹಿ ಘಟನೆ ಈ ಭಾಗದ ಜನರನ್ನು ಮತ್ತೆ ತೊಂದರೆಗೆ ಸಿಲುಕಿಸಿದ್ದು, ಕೆಲಸಕ್ಕೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ತಂದಿತ್ತಿದೆ. ಗ್ರಾಮಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೆ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ಇನ್ನೂದರೂ ಸರ್ಕಾರ ನಮಗೆ ಕನಿಷ್ಠ ಸೌಲಭ್ಯಗಳನ್ನು ನೀಡಿ, ಗೌರವಯುತ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಡಬೇಕು’ ಎಂದು ಅವರು ಮನವಿ ಮಾಡಿದರು. 

ನಾಗಮಲೆಗೆ ಹೋಗುತ್ತಿದ್ದ ಭಕ್ತರು ಪ್ರಯಾಣಿಕರು ವಾಹನದ ಟಾಪ್‌ನಲ್ಲಿ ಕುಳಿತು ಸಂಚರಿಸುತ್ತಿದ್ದರು
ನಾಗಮಲೆಗೆ ಹೋಗುತ್ತಿದ್ದ ಭಕ್ತರು ಪ್ರಯಾಣಿಕರು ವಾಹನದ ಟಾಪ್‌ನಲ್ಲಿ ಕುಳಿತು ಸಂಚರಿಸುತ್ತಿದ್ದರು
ಸಂತೋಷ್‌ಕುಮಾರ್‌
ಸಂತೋಷ್‌ಕುಮಾರ್‌
ಹೊನ್ನೂರು ಪ್ರಕಾಶ್‌
ಹೊನ್ನೂರು ಪ್ರಕಾಶ್‌

Quote - ಗ್ರಾಮಸ್ಥರಿಗೆ ವಾಹನಗಳಲ್ಲಿ ಓಡಾಡಲು ಈಗಲೂ ಅವಕಾಶ ಇದೆ. ಪ‍್ರವಾಸಿಗರನ್ನು ಮಾತ್ರ ನಿರ್ಬಂಧಿಸಲಾಗಿದೆ. ಹೊಸ ವ್ಯವಸ್ಥೆ ಬಂದ ನಂತರ ಅವಕಾಶ ಕೊಡಲಾಗುತ್ತದೆ ಜಿ.ಸಂತೋಷ್‌ಕುಮಾರ್‌ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌

Quote - ಇಂಡಿಗನತ್ತಕ್ಕೆ ವಾಹನಗಳ ಸಂಚಾರ ಸ್ಥಗಿತಗೊಂಡ ನಂತರ ಚಾಲಕರು ಬೇರೆ ಕೆಲಸಗಳನ್ನು ಹುಡುಕಿಕೊಂಡಿರುವುದು ನಿಜ. ಹೊರ ರಾಜ್ಯಗಳಿಗೂ ಹೋಗಿದ್ದಾರೆ ಹೊನ್ನೂರು ಪ್ರಕಾಶ್‌ ರೈತ ಮುಖಂಡ

Cut-off box - ಸುರಕ್ಷಿತ ನಿಯಮ ಉಲ್ಲಂಘನೆ ಆರೋಪ ಇಂಡಿಗನತ್ತಕ್ಕೆ ಸಂಚರಿಸುತ್ತಿದ್ದ ಜೀಪುಗಳು ಕ್ರೂಸರ್‌ಗಳಲ್ಲಿ ಸಂಚಾರ ಸುರಕ್ಷಿತ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂಬ ಆರೋಪಗಳೂ ಇದ್ದವು.  ‘ಕೆಲವು ವಾಹನಗಳು ವಿಮಾ ಸೌಲಭ್ಯ ಹೊಂದಿರಲಿಲ್ಲ. ಅಸುರಕ್ಷಿತವಾಗಿ ವಾಹನಗಳಲ್ಲಿ ಜನರನ್ನು ತುಂಬಲಾಗುತ್ತಿತ್ತು. ಒಂದು ಪರವಾನಗಿಯಲ್ಲಿ ಎರಡು ವಾಹನಗಳು ಓಡಾಡಿಕೊಂಡಿದ್ದವು’ ಎಂದು ಹೇಳುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.  ‘ಬೆಟ್ಟದಿಂದ ನಾಗಮಲೆ ಕಡೆಗೆ ಹೋಗುವ ರಸ್ತೆ ಅರಣ್ಯ ಪ್ರದೇಶದಲ್ಲಿದ್ದು ಕಚ್ಚಾರಸ್ತೆಯಾಗಿದೆ. ಕೊಂಚ ಹೆಚ್ಚು ಕಡಿಮೆಯಾದರೂ ದೊಡ್ಡ ಅನಾಹುತವಾಗುತ್ತದೆ. ಸುರಕ್ಷಿತ ನಿಯಮಗಳನ್ನು ಪಾಲಿಸದೆ ಸಂಚರಿಸುವುದು ಯಾವತ್ತೂ ಅಪಾಯಕಾರಿ. ಅಲ್ಲದೇ ಸಂರಕ್ಷಿತ ಪ್ರದೇಶದ ಒಳಗಡೆ ಇರುವ ನಾಗಮಲೆ ಪೂರ್ತಿ ಪ್ಲಾಸ್ಟಿಕ್‌ ಮಯವಾಗಿದೆ. ಮಹದೇಶ್ವರ ಬೆಟ್ಟ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಬೆಳೆದು ಹೋಗಿದೆ. ಕನಿಷ್ಠ ಪಕ್ಷ ನಾಗಮಲೆ ಹಾಗೂ ಅದರ ಪರಿಸರದ ಪಾವಿತ್ರ್ಯ ಕಾಪಾಡಬೇಕಾಗಿದೆ. ಅಲ್ಲಿ ಅರಣ್ಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಲ್ಲಿಗೆ ಪ್ರವಾಸಿಗರು ಭಕ್ತರು ಭೇಟಿ ನೀಡುವುದಕ್ಕೆ ಒಂದು ಸಮರ್ಪಕ ವ್ಯವಸ್ಥೆ ಜಾರಿಗೆ ತರಲು ಇಲಾಖೆ ಹೊರಟಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.  ತರಬೇತಿ: ಈ ಮಧ್ಯೆ ಅರಣ್ಯ ಇಲಾಖೆಯು ಈ ಭಾಗದಲ್ಲಿ ವಾಹನ ಓಡಿಸುವವರಿಗೆ ತರಬೇತಿಯನ್ನು ನೀಡಿದೆ.  ‘ಆಸಕ್ತರಿಗೆ ಒಂದು ಬಾರಿ ತರಬೇತಿ ನೀಡಿದ್ದೇವೆ. ಮತ್ತೆ ಕರೆಯುತ್ತಿದ್ದೇವೆ. ಯಾರೂ ಬಂದಿಲ್ಲ. ಚಾರಣಕ್ಕೆ ಅವಕಾಶ ನೀಡಲು ಸುಸಜ್ಜಿತ ವ್ಯವಸ್ಥೆ ರೂಪಿಸಲಾಗುತ್ತಿದೆ. ಚುನಾವಣೆ ಕಾರಣಕ್ಕೆ ವಿಳಂಬವಾಗಿದೆ. ಚುನಾವಣೆಯ ನಂತರ ಅದನ್ನು ಜಾರಿಗೆ ತರಲಾಗುವುದು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಜಿ.ಸಂತೋಷ್‌ಕುಮಾರ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT