ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಚಟಗಳಿಗೆ ದಾಸರಾಗುವ ಯುವಜನ

ಹೆಚ್ಚಾದ ಗಾಂಜಾ ಸೇವನೆ, ಆನ್‌ಲೈನ್‌ ಬೆಟ್ಟಿಂಗ್‌, ಇಸ್ಪೀಟ್‌ ಆಟ
Published 15 ಡಿಸೆಂಬರ್ 2023, 4:55 IST
Last Updated 15 ಡಿಸೆಂಬರ್ 2023, 4:55 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರ ಹಾಗೂ ತಾಲ್ಲೂಕಿನಲ್ಲಿ ಗಾಂಜಾ ಸೇವನೆ, ಆನ್‌ಲೈನ್ ಜೂಜು ಹಾಗೂ ಇಸ್ಪೀಟ್‌ ಚಟಕ್ಕೆ ಯುವ ಜನರು ದಾಸರಾಗುತ್ತಿದ್ದಾರೆ. 

ದುಶ್ಚಟಗಳ ಸುಳಿಯಲ್ಲಿ ಸಿಲುಕಿ ಹೊರಬಾರಲಾರದೆ ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳೂ ನಡೆಯುತ್ತಿವೆ. ಆದರೆ, ಇವು ಠಾಣೆಯಲ್ಲಿ ದಾಖಲಾಗುತ್ತಿಲ್ಲ. ಮರ್ಯಾದೆಗೆ ಅಂಜಿ ಕುಟುಂಬಸ್ಥರು ಅನಾರೋಗ್ಯ ಅಥವಾ ಇತರೆ ಕಾರಣಗಳನ್ನು ನೀಡಿ ಪ್ರಕರಣ ಬಹಿರಂಗವಾಗಲು ಬಿಡುತ್ತಿಲ್ಲ.  

ತಾಲ್ಲೂಕಿನ ಗ್ರಾಮವೊಂದರ ಯುವಕ ಇತ್ತೀಚೆಗೆ ಅಸಹಜ ಮೃತಪಟ್ಟಿದ್ದ. ಆದರೆ, ಪ್ರಕರಣ ದಾಖಲಾಗಿರಲಿಲ್ಲ. ವಿಚಾರಿಸಿದಾಗ ಆತ ಜೂಜಿನಲ್ಲಿ ತೊಡಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದು ಬಯಲಾಗಿತ್ತು.  

ಕಾಲೇಜು ವಿದ್ಯಾರ್ಥಿಗಳೇ ಆನ್‌ಲೈನ್‌ ಜೂಜು, ಇಸ್ಪೀಟ್‌ನಲ್ಲಿ ತೊಡಗಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳುತ್ತವೆ. 15 ರಿಂದ 25 ವರ್ಷದೊಳಗಿನ ಯುವ ಜನರು ಗಾಂಜಾ ಚಟಕ್ಕೆ ಬಿದ್ದಿದ್ದಾರೆ.  ನಿರ್ಜನ ಪ್ರದೇಶ ಹಾಗೂ ಜಮೀನುಗಳ ಅಕ್ಕ ಪಕ್ಕ ಹೆಚ್ಚಾಗಿ ಯುವಕರು ಗುಂಪು ಕಟ್ಟಿಕೊಂಡು ಗಾಂಜಾ ನಶೆ ಏರಿಸಿಕೊಳ್ಳುತ್ತಿದ್ದಾರೆ. ನಗರದ ಆರ್.ಎಂ.ಸಿ ಮಾರುಕಟ್ಟೆ, ಕೆಲವು ಟೀ ಅಂಗಡಿಗಳು ಸೇರಿದಂತೆ ಅನೇಕ ಕಾಲೇಜು ಮೈದಾನಗಳನ್ನು ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ಶಾಲೆ, ಕಾಲೇಜು ಸಮೀಪದ ಚಿಲ್ಲರೆ ಅಂಗಡಿ, ಟೀ ಅಂಗಡಿ ಹಾಗೂ ಕೈಗಾಡಿಗಳಲ್ಲಿ ಗಾಂಜಾ ಮಾರಾಟವಾಗುತ್ತಿದೆ ಎಂಬ ಗುಮಾನಿ ಪೊಲೀಸರಿಗಿದೆ.

‘ಯುವಕರು ನಶೆಯಲ್ಲಿ ಬೈಕ್ ಹಾಗೂ ಕಾರುಗಳನ್ನು ಮನಬಂದತೆ ಓಡಿಸುತ್ತಿದ್ದಾರೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು. ಗಾಂಜಾ ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಬರುವುದಿಲ್ಲ. ನಮ್ಮ ಜಿಲ್ಲೆ, ತಾಲ್ಲೂಕಿನಲ್ಲೇ ಸಿಗುತ್ತಿದೆ. ತಾಲ್ಲೂಕಿನ ಮಧುವನಹಳ್ಳಿ, ದೊಡ್ಡಿಂದುವಾಡಿ, ಜಾಗೇರಿ, ಜಕ್ಕಳಿಗೆ ಹಾಗೂ ಹನೂರು ಭಾಗಗಳಿಂದ ಹೆಚ್ಚಾಗಿ ಬರುತ್ತಿದೆ. ಮಕ್ಕಳು ಈ ದುಶ್ಚಟಕ್ಕೆ ಬಲಿಯಾಗುವುದನ್ನು ತಪ್ಪಿಸಲು ಪೊಲೀಸರು, ಪೋಷಕರು, ಶಿಕ್ಷಕರು ಕಡಿವಾಣ ಹಾಕಬೇಕು’ ಎಂದು ಕನ್ನಡ ಪರ ಹೋರಾಟಗಾರ ಸಮೀವುಲ್ಲಾ ಒತ್ತಾಯಿಸಿದರು. 

ಆನ್‌ಲೈನ್‌ ಬೆಟ್ಟಿಂಗ್‌: ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಜೂಜಿನಲ್ಲೂ ಯುವ ಜನ ತೊಡಗುತ್ತಿದ್ದಾರೆ. ಬೆಟ್ಟಿಂಗ್‌ ಆ್ಯಪ್‌ಗಳ ಮೂಲಕ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ತಾಲ್ಲೂಕಿನ ಸರಗೂರು, ಸತ್ತೇಗಾಲ ಹ್ಯಾಂಡ್ ಪೋಸ್ಟ್, ಉಗನೀಯ, ಹೊಂಡರಬಾಳು, ತಿಮ್ಮರಾಜೀಪುರ, ಕುಂತೂರು, ತೇರಂಬಳ್ಳಿ, ಟಗರಪುರ, ಮಾಲಂಗಿ, ಕುಣಗಳ್ಳಿ, ಕಾಮರೆಗೆ ಹಾಗೂ ನಗರ ಕೆಲವು ಲಾಡ್ಜ್‌ಗಳಲ್ಲಿ ನಿತ್ಯವೂ ಜೂಜು ನಡೆಯುತ್ತಿದೆ. ಪೊಲೀಸರು ಈ ಗಮನಹರಿಸುತ್ತಿಲ್ಲ’ ಎಂದು ಮುಡಿಗುಂಡ ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಾಹಿತಿ ನೀಡಿ:

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್‌ಪಿ ಸೋಮೇಗೌಡ, ‘ಅಕ್ರಮ ಚಟುವಟಿಕೆಗಳಿಗೆ ನಾವು ಅವಕಾಶ ಕೊಡುವುದಿಲ್ಲ. ನಿಯಮ ಮೀರಿದವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಗಾಂಜಾ ಮಾರಾಟ, ಇಸ್ಪೀಟ್‌ , ಬೆಟ್ಟಿಂಗ್‌ ವಿರುದ್ಧ ಕ್ರಮ ಕೈಗೊಳ್ಳುತ್ತಲೇ ಇದ್ದೇವೆ.  ಮಾದಕ ದ್ರವ್ಯ ಮಾರಾಟ , ಬೆಟ್ಟಿಂಗ್‌, ಜೂಜು ನಡೆಯುತ್ತಿರುವುದು ಗಮನಕ್ಕೆ ಬಂದರೆ ಜನರು ನಮಗೆ ಮಾಹಿತಿ ನೀಡಲು ಹಿಂಜರಿಯಬಾರದು’ ಎಂದು ಹೇಳಿದರು. 

ಸೋಮೇಗೌಡ
ಸೋಮೇಗೌಡ
ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದೇವೆ. ಗಾಂಜಾ ಸಂಗ್ರಹ ಮಾರಾಟದಂತಹ ಪ್ರಕರಣಗಳನ್ನು ದಾಖಲಿಸುತ್ತಿದ್ದೇವೆ
ಸೋಮೇಗೌಡ, ಡಿವೈಎಸ್‌ಪಿ
ಅರಿವು ಮೂಡಿಸಲು ಆಗ್ರಹ
‘ದುಶ್ಷಟಗಳಿಂದಾಗುವ ಪರಿಣಾಮಗಳ ಬಗ್ಗೆ ಕಾಲೇಜು ಹುಡುಗರಿಗೆ ಯುವಕರಿಗೆ ಅರಿವು ಇಲ್ಲ. ಇಡೀ ಕುಟುಂಬದ ನೆಮ್ಮದಿಯನ್ನು ಇದು ಹಾಳು ಮಾಡುತ್ತದೆ. ಮಾದಕ ದ್ರವ್ಯ ಜೂಜಾಟಗಳ ಪರಿಣಾಮಗಳ ಬಗ್ಗೆ ಜನರಲ್ಲಿ ವಿಶೇಷವಾಗಿ ಯುವಕ ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಪೊಲೀಸರು ಆರೋಗ್ಯ ಇಲಾಖೆ ತಾಲ್ಲೂಕು ಆಡಳಿತ ಈ ಬಗ್ಗೆ ಗಮನಹರಿಸಬೇಕು’ ಎಂದು ಸಮಾಜ ಸೇವಕ ಗುರುಮೂರ್ತಿ ಹೇಳಿದರು.  ‘ಪೊಲೀಸರ ಪಾತ್ರ ಇದರಲ್ಲಿ ಹೆಚ್ಚಾಗಿದೆ. ಯುವಕರಿಗೆ ಎಲ್ಲೂ ಗಾಂಜಾ ಸೇರಿದಂತೆ ಮಾದಕದ್ರವ್ಯಗಳು ಸಿಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು‌’ ಎಂದು ಅಂಬೇಡ್ಕರ್‌ ಸೇನೆ ತಾಲ್ಲೂಕು ಅಧ್ಯಕ್ಷ ತೇಜು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT