ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಜಿ.ಪಂ. ಅಧ್ಯಕ್ಷ ಸ್ಥಾನ: ಅಶ್ವಿನಿ ಆಯ್ಕೆ ಖಚಿತ

ಇದೇ 30ರಂದು ಚುನಾವಣೆ, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ, ಅವಿರೋಧ ಆಯ್ಕೆ ಸಾಧ್ಯತೆ
Last Updated 26 ಮೇ 2020, 17:42 IST
ಅಕ್ಷರ ಗಾತ್ರ

ಚಾಮರಾಜನಗರ: ಶಿವಮ್ಮ ಅವರ ರಾಜೀನಾಮೆಯಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಇದೇ 30ರಂದು ಚುನಾವಣೆಯ ನಡೆಯಲಿದ್ದು, ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಆಗಿ ಒಪ್ಪಂದದಂತೆ ತೆರಕಣಾಂಬಿ ಕ್ಷೇತ್ರದ ಸದಸ್ಯೆ ಎಂ.ಅಶ್ವಿನಿ ಅವರು ಆಯ್ಕೆಯಾಗುವುದು ಖಚಿತವಾಗಿದೆ.

23 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ 14 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್‌ ಸ್ಪಷ್ಟಬಹುಮತ ಹೊಂದಿದೆ. ಬಿಜೆಪಿ ಒಂಬತ್ತು ಸ್ಥಾನಗಳನ್ನು ಹೊಂದಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದೆ.ಕಾಂಗ್ರೆಸ್‌ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಅವಿರೋಧವಾಗಿ ಆಯ್ಕೆ ನಡೆಯುವುದು ನಿಚ್ಚಳ.

ಆಂತರಿಕ ಒಪ್ಪಂದ: 2016ರಲ್ಲಿ ಚುನಾವಣೆ ನಡೆದು ಬಹುಮತ ಬಂದಾಗ, ಸದಸ್ಯರಾದ ಎಂ.ರಾಮಚಂದ್ರ, ಶಿವಮ್ಮ ಮತ್ತು ಅಶ್ವಿನಿ ಅವರು ತಲಾ 20 ತಿಂಗಳು ಅಧ್ಯಕ್ಷರಾಗುವುದು ಎಂದು ಕಾಂಗ್ರೆಸ್‌ನಲ್ಲಿ ಆಂತರಿಕ ಒಪ್ಪಂದ ಆಗಿತ್ತು. ಅದರಂತೆ ಎಂ.ರಾಮಚ.ದ್ರ ಅವರು ಮೊದಲಿಗೆ ಅಧ್ಯಕ್ಷರಾದರು. 20 ತಿಂಗಳ ನಂತರ ರಾಜೀನಾಮೆಯನ್ನೂ ನೀಡಿದರು. ಬಳಿಕ ಅವರು ಪಕ್ಷಕ್ಕೂ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.

ಪಾಳ್ಯ ಕ್ಷೇತ್ರದ ಸದಸ್ಯೆ ಶಿವಮ್ಮ ಅವರು ಎರಡನೆಯವರಾಗಿ ಅಧ್ಯಕ್ಷರಾದರು. ಅವರು 2019ರ ಅಕ್ಟೋಬರ್‌ ಅಂತ್ಯಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಪಕ್ಷದ ಮುಖಂಡರ ಮೇಲಿನ ಅಸಮಾಧಾನದಿಂದಾಗಿ ಅವರು ರಾಜೀನಾಮೆ ಕೊಡಲಿಲ್ಲ. ಎರಡು ತಿಂಗಳು ವಿಳಂಬವಾಗಿ ಒಮ್ಮೆ ರಾಜೀನಾಮೆ ಕೊಟ್ಟು, 12 ದಿನಗಳಲ್ಲಿ ವಾಪಸ್‌ ಪಡೆದರು.

ಪಕ್ಷದ ಉಳಿದ ಸದಸ್ಯರು ಅವರ ವಿರುದ್ಧ ತಿರುಗಿ ಬಿದ್ದರು. ಶಿವಮ್ಮ ಹಾಗೂ ಇತರ ಸದಸ್ಯರು ಸಾರ್ವಜನಿಕವಾಗಿ ಬೈದಾಡಿದ ಘಟನೆಯೂ ನಡೆಯಿತು. ಈ ಘಟನೆ ಪಕ್ಷದ ಮುಖಂಡರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಅಂತಿಮವಾಗಿಕೆಪಿಸಿಸಿ ವಕ್ತಾರ ಆರ್‌.ಧ್ರುವನಾರಾಯಣ, ಶಾಸಕರಾದ ಆರ್.ನರೇಂದ್ರ, ಸಿ.ಪುಟ್ಟರಂಗಶೆಟ್ಟಿ ಹಾಗೂ ಕಾಂಗ್ರೆಸ್‌ ಮುಖಂಡರು ಮಧ್ಯಪ್ರವೇಶಿಸಿ, ರಾಜೀನಾಮೆ ಕೊಡುವಂತೆ ಶಿವಮ್ಮ ಅವರನ್ನು ಮನವೊಲಿಸಿದರು. ಮಾರ್ಚ್‌ 2ರಂದು ಅವರು ಹುದ್ದೆಗೆ ರಾಜೀನಾಮೆ ನೀಡಿದರು.

ಸದ್ಯ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 30ರಂದು ಬೆಳಿಗ್ಗೆ 11.30ಕ್ಕೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ.

ಪಕ್ಷದ ಬಲವರ್ಧನೆಗೆ ಅವಕಾಶ: ಎಂ.ಅಶ್ವಿನಿ ಅವರು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತೆರಕಣಾಂಬಿ ಕ್ಷೇತ್ರದ ಸದಸ್ಯೆ. ಆ ವಿಧಾನಸಭಾ ಕ್ಷೇತ್ರ‌ಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ದೊರಕಲಿರುವುದರಿಂದ,ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಿನ್ನಡೆ ಅನುಭವಿಸಿರುವ ಪಕ್ಷದ ಬಲವರ್ಧನೆಗೆ ಅವಕಾಶವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಮುಖಂಡರಿದ್ದಾರೆ.

ಮುಂದಿನ ವರ್ಷಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ಅವಧಿ ಕೊನೆಯಾಗುವುದರಿಂದ ಅಶ್ವಿನಿ ಅವರಿಗೆ ಪಕ್ಷದ ಒಪ್ಪಂದದಂತೆ 20 ತಿಂಗಳ ಅಧಿಕಾರ ಸಿಗುವುದಿಲ್ಲ.

‘ಪಕ್ಷದ ತೀರ್ಮಾನದಂತೆ ಆಯ್ಕೆ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು, ‘ಜಿಲ್ಲಾ ಪಂಚಾಯಿತಿಯಲ್ಲಿ ನಾವು ಸ್ಪಷ್ಟ ಬಹುಮತ ಹೊಂದಿದ್ದೇವೆ. ಈಗಾಗಲೇ ತೀರ್ಮಾನವಾದಂತೆ ಎಂ.ಅಶ್ವಿನಿ ಅವರು ನಮ್ಮ ಸರ್ವಾನುಮತದ ಅಭ್ಯರ್ಥಿ. ನಮ್ಮ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT