ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯ

Last Updated 13 ಏಪ್ರಿಲ್ 2017, 7:08 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಹಣೆಬರಹವು ಗುರುವಾರ ಮಧ್ಯಾಹ್ನದ ವೇಳೆಗೆ ಬಯಲಾಗಲಿದೆ.
ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ. ಮೋಹನ್‌ಕುಮಾರಿ ಮತ್ತು ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ್‌ಕುಮಾರ್‌ ಸೇರಿದಂತೆ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇರುವುದು ಸ್ಪಷ್ಟ. ಪ್ರಚಾರದ ವೇಳೆಯಲ್ಲೂ ಈ ಪಕ್ಷಗಳ ನಡುವೆಯೇ ಅಬ್ಬರ ಹೆಚ್ಚಿತ್ತು.

ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ಎಚ್.ಎಸ್‌. ಮಹದೇವಪ್ರಸಾದ್‌ ಅವರ ನಿಧನದಿಂದ ತೆರವಾಗಿರುವುದು ಕ್ಷೇತ್ರ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ.
ತಾಲ್ಲೂಕು ಪಂಚಾಯಿತಿ ಆಡಳಿತ, 5 ಜಿಲ್ಲಾ ಪಂಚಾಯಿತಿ ಕ್ಷೇತ್ರ ಸೇರಿದಂತೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಗ್ರಾಮ ಪಂಚಾಯಿತಿಗಳ ಪೈಕಿ ಅರ್ಧಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಕೈಪಾಳಯದ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ. ಹಾಗಾಗಿ, ಸ್ಥಳೀಯ ಮುಖಂಡರಿಗೂ ಮೋಹನ್‌ಕುಮಾರಿ ಅವರ ಗೆಲ್ಲುವುದು ಅನಿವಾರ್ಯವಾಗಿದೆ.

ಈ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆಯೂ ಬಿಜೆಪಿ ಗೆಲುವು ಕಂಡಿಲ್ಲ. 2008 ಮತ್ತು 2013ರ ಚುನಾವಣೆ  ಯಲ್ಲಿ ಮಹದೇವಪ್ರಸಾದ್‌ ವಿರುದ್ಧವೇ ನಿರಂಜನ್‌ಕುಮಾರ್‌ ಸೋಲು ಅನುಭವಿಸಿದ್ದರು. ಬಿಜೆಪಿಯು ಈ ಉಪ ಚುನಾವಣೆಯಲ್ಲಿಯಾದರೂ ಕ್ಷೇತ್ರದಲ್ಲಿ ಖಾತೆ ತೆರೆಯಬೇಕೆಂಬ ಉತ್ಸಾಹದಲ್ಲಿದೆ.

ಹಣದ ಹೊಳೆ: ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡ ದಿನದಿಂದಲೇ ಬಿಜೆಪಿ ವರಿಷ್ಠರು ಪ್ರಚಾರಕ್ಕೆ ಚುರುಕು ನೀಡಿದ್ದರು. ಕ್ಷೇತ್ರದಲ್ಲಿ ಕಮಲ ಪಾಳಯದ ಪ್ರಚಾರದ ಅಲೆ ಹೆಚ್ಚಿತ್ತು. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೋಡ್‌ ಶೋ ನಡೆಸಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದರು. ಚುನಾವಣಾ ಪ್ರಚಾರದಲ್ಲಿ ಎರಡೂ ಪಕ್ಷಗಳು ಸಮಬಲ ಸಾಧಿಸಿದ್ದವು.

ಚುನಾವಣಾ ಆಯೋಗವು ಅಕ್ರಮಕ್ಕೆ ಕಡಿವಾಣ ಹಾಕಲು 11 ಚೆಕ್‌ಪೋಸ್ಟ್‌ ತೆರೆದಿತ್ತು. ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಅಕ್ರಮ ಚಟುವಟಿಕೆಗೆ ಕಡಿವಾಣ ಬಿದ್ದಿರಲಿಲ್ಲ. ರಾಜಕೀಯ ಪಕ್ಷಗಳಿಂದ ಹಣದ ಹೊಳೆ ಹರಿದಿದೆ. ಆದರೆ, ಮತದಾರರು ಯಾವ ಪಕ್ಷಕ್ಕೆ ಒಲವು ತೋರಿದ್ದಾರೆ ಎಂಬುದು ನಿಗೂಢವಾಗಿದೆ.

ಕ್ಷೇತ್ರದ ವ್ಯಾಪ್ತಿ 250 ಮತಗಟ್ಟೆ ತೆರೆಯಲಾಗಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿಗರು ಹೆಚ್ಚಿರುವ ಮತಗಟ್ಟೆಗಳ ವ್ಯಾಪ್ತಿ ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರು ಶೇಕಡವಾರು ಮತದಾನದ ಮೇಲೆ ಗೆಲುವಿನ ಲೆಕ್ಕಾಚಾರ ಹಾಕುತ್ತಿರುವುದು ನಡೆದಿದೆ.

ಭಾವಚಿತ್ರವಿರುವ ಮತದಾರರ ಪಟ್ಟಿ ಹಿಡಿದು ಅಳೆದು ತೂಗುವ ಕೆಲಸ ಮಾಡಿದ್ದಾರೆ. ಅಭ್ಯರ್ಥಿಗಳ ಪ್ರತಿಷ್ಠೆಗಿಂತ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಷ್ಠೆಯನ್ನು ಈ ಉಪ ಚುನಾವಣೆಯು ಸವಾಲಿಗೊಡ್ಡಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಅಬ್ಬರದ ಪ್ರಚಾರ ನಡೆಸಿದ್ದು, ಗುಟ್ಟೇನಲ್ಲ.   ಪ್ರಚಾರ, ಮತದಾರರ ಮೇಲಿನ ಪ್ರಭಾವ, ಜಾತಿ ಲೆಕ್ಕಾಚಾರವನ್ನು ಅವಲೋಕಿಸಿದರೆ ಫಲಿತಾಂಶವು ‘ಫೋಟೊ ಫಿನಿಶ್‌’ ಹಂತ ತಲುಪಿಸಿದರೂ ಅಚ್ಚರಿಪಡಬೇಕಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT