ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಪ್ರತ್ಯಕ್ಷವಾದ ‘ಬಂಗಾರದ ದುಂಬಿ’

Last Updated 24 ಏಪ್ರಿಲ್ 2017, 6:50 IST
ಅಕ್ಷರ ಗಾತ್ರ

ಯಳಂದೂರು: ಇದು ಬಹು ಅಪ ರೂಪದ ದುಂಬಿ ಪ್ರಭೇದ. ಅರ್ಥಾತ್‌ ಚಿನ್ನದ ಬಣ್ಣದ ದುಂಬಿ. ದೇಹ ಮತ್ತು ಕಾಲಿನ ರಚನೆ ಬಂಗಾರದ ವರ್ಣದಿಂದ ಗಮನ ಸೆಳೆಯುವ ಇದು ಇತ್ತೀಚೆಗೆ ಯಳಂದೂರು ಪಟ್ಟಣದ ಮನೆಯಲ್ಲಿ ಕಂಡು ಬಂದಿತು.

ದೇಹವನ್ನು ಆವರಿಸಿರುವ ಆಮೆ ಚಿಪ್ಪಿನಂತಹ ಪಾರದರ್ಶಕ ರಕ್ಷಾ ಕವಚ ಹಾಗೂ ಅಪಾಯದ ಸುಳಿವು ಸಿಕ್ಕಲ್ಲಿ ತನ್ನ ದೇಹದಲ್ಲಿ ಕೆಂಪು ವರ್ಣದ ಸಿಂಚನ ಮೂಡಿಸುವುದು ಇದರ ವಿಶೇಷಗಳಲ್ಲಿ ಒಂದು.

ಇಂಗ್ಲಿಷಿನಲ್ಲಿ ‘ಗೋಲ್ಡನ್ ಟಾರ್ಟಾಯ್ಸ್ ಬೀಟಲ್’ ಎಂದು ಕರೆಯಲಾಗುವ ಇದರ ಮೂಲ ಉತ್ತರ ಅಮೆರಿಕ.

‘ಕ್ರೈಸೊಮೆಲಿಡೆ’ ಕುಟುಂಬಕ್ಕೆ ಸೇರಿದೆ. ವೈಜ್ಞಾನಿಕವಾಗಿ ‘ಕ್ಯಾರಿಡೊ ಟೆಲ್ಲಾ ಸೆಕ್ಷ್‌ಪುನ್ಕ್ಟಾಟೊ’ (charido tella sexpunctato) ಎನ್ನಲಾಗಿದೆ. ‘ಗೋಲ್ಡ್‌ಬಗ್‌’ ವಿಶೇಷಣವೂ  ಇದಕ್ಕಿದೆ. ಸಿಹಿ ಆಲೂಗೆಡ್ಡೆ, ಎಳೆಯ ಎಲೆ, ಮುಂಜಾನೆ ಹೂಗಳು ಇವುಗಳ ನೆಚ್ಚಿನ ಆಹಾರ.

ತುಂಬ ಸೂಕ್ಷ್ಮವಾದ ಇವುಗಳ ಇರುವಿಕೆ ಪತ್ತೆ ಹಚ್ಚುವುದು ಕಷ್ಟ. ಇವುಗಳ ಉದ್ದ 5 ರಿಂದ 7 ಮಿಲಿ ಮೀಟರ್ ಮಾತ್ರ. ಕಪ್ಪು ಬಣ್ಣದ ಚುಕ್ಕಿಗಳ ಸಂಯೋಜನೆಯಿಂದ ಗಮನ ಸೆಳೆಯುತ್ತವೆ. ಒಂದು ಜೊತೆ ಮೀಸೆ (ಆಂಟ್ಯಾನ) ಮತ್ತು ಕಾಲುಗಳ ಅಂಚು ಕಪ್ಪಾಗಿವೆ.  ಯಾರಾದರೂ ಸ್ಪರ್ಶಿಸಿದರೆ ಇಲ್ಲವೇ ತೊಂದರೆ ಕಂಡು ಬಂದರೆ ದೇಹ ಕೆಂಬಣ್ಣಕ್ಕೆ ಹೊರಳುತ್ತದೆ.

ಹೆಣ್ಣು ವಂಶೋಭಿವೃದ್ಧಿ ಕಾಲಕ್ಕೆ ಗಂಡಿನೊಡನೆ ಕೂಡುತ್ತದೆ. ಮೇ ಜೂನ್‌ ನಡುವೆ ಎಲೆಗಳ ತಳ ಭಾಗದಲ್ಲಿ ಹಳದಿ ವರ್ಣದ ತತ್ತಿ ಇಡುತ್ತದೆ. 5ರಿಂದ 10 ದಿನಗಳಲ್ಲಿ ಮರಿಗಳು ಹೊರ ಬರುತ್ತವೆ. 2ರಿಂದ 3 ವಾರಗಳಲ್ಲಿ ಪ್ಯೋಪದ ರೂಪ ಪಡೆಯುತ್ತದೆ. ಇಂತಹ ಸಂದರ್ಭ ತನ್ನ ಸಂತಾನವನ್ನು ಇತರ ಪರ ಭಕ್ಷಕ ಕೀಟಗಳಿಂದ ಜತನದಿಂದ ಕಾಪಾಡುತ್ತದೆ ಎನ್ನುತ್ತಾರೆ ಕೀಟ ತಜ್ಞರು.

ಮನೆಯ ಸುತ್ತಲು ಪೊದೆ ಸಸ್ಯ ಗಳಿಂದ ಆವರಿಸಿದೆ. ಹಸಿರು ವರ್ಣದ ದುಂಬಿ ಇಲ್ಲಿ ಸಾಮಾನ್ಯವಾಗಿ ಕಾಣಸಿಗು ತ್ತದೆ. ಆದರೆ, ಇಂತಹ ಪಾರದರ್ಶಕ ಕವಚದ ರಚನೆಯ ದುಂಬಿಯನ್ನು ಮೊದಲ ಸಲ ನಮ್ಮ ಮನೆಯಲ್ಲಿ ಕಂಡು ಬಂದಿದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯೆ ಶಿಲ್ಪಾ ರಂಗನಾಥ್.

‘ಇದರ ದೇಹದಲ್ಲಿನ ನೀರಿನ ವ್ಯತ್ಯಾಸಕ್ಕೆ ಬಣ್ಣ ಬದಲಿಸುವ ಮೂಲಕ ಪ್ರತಿಕ್ರಿಯಿಸುತ್ತದೆ. ಸಂಶೋಧನೆಯ ಸಂದರ್ಭದಲ್ಲೂ ಕೆಂಬಣ್ಣ ಮೂಡುವು ದನ್ನು ಗುರುತಿಸಲಾಗಿದೆ. ಆದರೂ, ನಿಖರ ಕಾರಣ ತಿಳಿದು ಬಂದಿಲ್ಲ’ ಎನ್ನುತ್ತಾರೆ ಬಿಆರ್‌ಟಿಯ ಅಶೋಕ ಪರಿಸರ ಸಂರಕ್ಷಣ ಸಂಸ್ಥೆಯ ಡಾ.ಸಿ.ಮಾದೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT