ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಇಂತಹ ಮುಖ್ಯಮಂತ್ರಿಯನ್ನೇ ಕಂಡಿರಲಿಲ್ಲ: ಶ್ರೀನಿವಾಸ ಪ್ರಸಾದ್‌

Last Updated 26 ಅಕ್ಟೋಬರ್ 2017, 6:35 IST
ಅಕ್ಷರ ಗಾತ್ರ

ಹನೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ₹100 ರೂಪಾಯಿ ಕೆಲಸ ಮಾಡಿ ₹1000 ರೂಪಾಯಿ ಕೆಲಸ ಮಾಡಿದೆ ಎಂದು ರಾಜ್ಯದ ಜನತೆ ಮುಂದೆ ಬೊಬ್ಬೆ ಹೊಡೆಯುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ. ಶ್ರೀನಿವಾಸ್‌ ಪ್ರಸಾದ್‌ ಲೇವಡಿ ಮಾಡಿದರು.

ಕೊಳ್ಳೇಗಾಲ ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸಾಕಷ್ಟು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೆ, ಇವರೆಗೂ ರಾಜ್ಯ ಇಂತಹ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ’ ಎಂದು ಟೀಕಿಸಿದರು.

‘ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿ ಮುಂದಿನ ವರ್ಷ ನಾನೇ ಬಂದು ಇದನ್ನು ಉದ್ಘಾಟನೆ ಮಾಡುತ್ತೇನೆ, ಮುಂದಿನ ದಸರಾವನ್ನೂ ನಾನೇ ಉದ್ಘಾಟಿಸುತ್ತೆನೆ ಎಂಬ ಅತಿಯಾದ ವಿಶ್ವಾಸದಿಂದ ಮಾತನ್ನಾಡುತ್ತಿದ್ದಾರೆ. ತಮ್ಮ ಸ್ಥಾನವನ್ನು ಮಗನಿಗೆ ಬಿಟ್ಟು ಈಗ ನನ್ನ ಸ್ಪರ್ಧೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಎಂದು ಹಾರಾಡುತ್ತಿದ್ದಾರೆ’ ಎಂದು ಛೇಡಿಸಿದರು.

‘ಕೇಂದ್ರ ಸಚಿವನಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್‌ ಭವನಕ್ಕೆ ಕೊಳ್ಳೇಗಾಲದಲ್ಲಿ ಸ್ಥಳ ಹುಡುಕಿ, ಅದನ್ನು ಖರೀದಿಸಿ, ಶಂಕುಸ್ಥಾಪನೆಯನ್ನು ನಾನು ನೆರವೇರಿಸಿದ್ದೆ, ಆದರೆ 12 ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಶೌಚಾಲಯ, ಸುತ್ತುಗೋಡೆ, ಬಾಗಿಲು ಇಲ್ಲದಿರುವ ಅಪೂರ್ಣ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದರು.

ಅಂತರರಾಷ್ಟ್ರೀಯ ಅಂಬೇಡ್ಕರ್‌ ಸಮ್ಮೇಳನ ನಡೆಸಿ ₹30 ಕೋಟ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ, ಆ ಹಣವನ್ನು ಫಲಾನುಭವಿಗಳಿಗೆ ನೀಡಿದ್ದರೆ ಅವರಾದರೂ ಆರ್ಥಿಕ ಸಬಲರಾಗುತ್ತಿದ್ದರು ಎಂದರು.

ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಎಂಬುದು ಇನ್ನೂ ಅಂತಿಮವಾಗಿ ನಿರ್ಣಯವಾಗಿಲ್ಲ. ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಗೆ ನೇರ ಹಣಾಹಣಿಯಿದ್ದು ಈ ನಡುವೆ ಬಿಎಸ್‌ಪಿ ಕೊಂಚ ಪೈಪೋಟಿ ನಡೆಸಲಿದೆ. ಆದ್ದರಿಂದ ಪಕ್ಷ ಯಾರಿಗೆ ಮಣೆ ಹಾಕಿದರೂ ಕಾರ್ಯಕರ್ತರು ನಿಷ್ಠೆಯಿಂದ ದುಡಿದು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.

ಸಭೆಯಲ್ಲಿ ಬಿಜೆಪಿ ಮುಖಂಡರಾದ ದತ್ತೇಶ್‌ಕುಮಾರ್‌, ಸಿಂಗಾನಲ್ಲೂರು ರಾಜಣ್ಣ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT