ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಶಕ್ತಿಗೆ ರಾಜ್ಯ ಪ್ರಶಸ್ತಿ

Last Updated 20 ಮಾರ್ಚ್ 2011, 9:50 IST
ಅಕ್ಷರ ಗಾತ್ರ

ಯಳಂದೂರು: ‘ಶಿಕ್ಷಣ, ತರಬೇತಿ, ತಂತ್ರಜ್ಞಾನಕ್ಕೆ ಸಮಾನ ಅವಕಾಶ: ಮಹಿಳೆಯರಿಗೆ ಒಳ್ಳೆ ಕೆಲಸಕ್ಕೆ ಹಾದಿ’ ಮಹಿಳಾ ದಿನ-2011 ಧ್ಯೇಯ ವಾಕ್ಯ. ಈ ಹೇಳಿಕೆಯಿಂದ ಸ್ವಾವಲಂಬನೆ ಸಾಧನೆಗೆ ಸ್ಫೂರ್ತಿಗೊಂಡತಿರುವ ಯರಿಯೂರಿನ ಭ್ರಮರಾಂಭ ಸ್ತ್ರೀ ಶಕ್ತಿ ಸಂಘ ವಿವಿಧೋದ್ದೇಶದಲ್ಲಿ ಯಶಸ್ಸು ಪಡೆದು ಜಿಲ್ಲೆಗೆ ರಾಜ್ಯ ಪ್ರಶಸ್ತಿ ಗರಿ ಮುಡಿಸಿದೆ.

ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಪಾತ್ರ ಹಿರಿದು. ಹಿಂದೆ ಗೃಹ ಕೃತ್ಯಗಳಿಗೆ ಸೀಮಿತವಾಗಿದ್ದ ವನಿತೆಯರ ಕಾರ್ಯವ್ಯಾಪ್ತಿಯನ್ನು ಆರ್ಥಿಕ ಚಟುವಟಿಕೆಗೂ ವಿಸ್ತರಿಸಿದೆ. ಉಳಿತಾಯ, ಸಾಲ ವಿಸ್ತರಣೆ ಉದ್ದೇಶದಿಂದ ಸಮಾನ ಆಸಕ್ತಿ ಹೊಂದಿದ ಭಗಿನಿಯರು ಒಂದಾಗಿ ಪ್ರಾರಂಭಿಸಿದ ಭ್ರಮರಾಂಭ ಸಂಘ ಅಪೂರ್ವ ಯಶಸ್ಸು ಸಾಧಿಸಿ ಮಾದರಿಯಾಗಿದೆ. 

ತಾಲ್ಲೂಕಿನ ಯರಿಯೂರಿನ ‘ಭ್ರಮರಾಂಭ ಸ್ತ್ರೀ ಶಕ್ತಿ ಸ್ವಸಹಾಯ ಸಂಘ’ಕ್ಕೆ ಮೈಸೂರು ಕಂದಾಯ ವಿಭಾಗದ ಅತ್ಯುತ್ತಮ ಗುಂಪು ಎಂಬ ಗೌರವ ಸಂದಿದೆ. 2010-11ನೇ ಸಾಲಿನ ‘ಯಶೋಧರಮ್ಮ ದಾಸಪ್ಪ ಪ್ರಶಸ್ತಿ’ಯನ್ನು ಸಂಗದ ಸದಸ್ಯರು ಬೆಂಗಳೂರಿನಲ್ಲಿ ಸ್ವೀಕರಿಸಿದರು.

 ಕುಟುಂಬ ಹಾಗೂ ಗ್ರಾಮದ ಅಭಿವೃದ್ಧಿಗೆ ಇವರ ಸೇವೆ ಮಾದರಿಯಾಗಲಿ ಎಂದು ಮಾ.8 ಮಹಿಳಾ ದಿನದಂದು ಪ್ರಶಸ್ತಿ ಪತ್ರ/ರೂ. 25 ಸಾವಿರದ ಚೆಕ್‌ಅನ್ನು ಮುಖ್ಯಮಂತ್ರಿ ವಿತರಿಸಿದರು.

2000ದ ಜೂನ್‌ನಲ್ಲಿ 16 ಮಹಿಳೆಯರಿಂದ ಆರಂಭವಾದ ಗುಂಪು, ತಲಾ ರೂ.10ರಂತೆ ರೂ. 160 ಮೂಲ ಬಂಡವಾಳ ಹೊಂದಿತ್ತು. 10 ವರ್ಷ ನಂತರ ರೂ. 5 ಲಕ್ಷ ಸಂಗ್ರಹಿಸಿದೆ ಈ ಗುಂಪು. ಸ್ವರ್ಣ ಜಯಂತಿ ರೋಜ್ಗಾರ್ ಯೋಜನೆಯಡಿ ಪಡೆದ ರೂ.5 ಲಕ್ಷ ಸಾಲವನ್ನು ಸದಸ್ಯರು ಸಮನಾಗಿ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬರೂ ರೂ. 40 ಸಾವಿರ ಪಡೆದು ಚಿಲ್ಲರೆ ಅಂಗಡಿ, ಹೋಟೆಲ್, ಅಡಿಕೆ ಹಾಳೆಯಲ್ಲಿ ತಟ್ಟೆ,ಲೋಟ ತಯಾರಿಕೆ, ಹೈನೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಖಾರದ ಪುಡಿ ತಯಾರಿಸಿ ಇವುಗಳನ್ನು ಜಾತ್ರೆ, ಹಬ್ಬ, ಔತಣಗಳಿಗೆ ಒದಗಿಸುವುದು. ಬಾಸ್ಕೆಟ್, ಫ್ಯಾನ್ಸಿ ಉಡುಪು ಸಿದ್ಧಗೊಳಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಲಾಭವನ್ನು ಸಂಘದ ಖಾತೆಗೆ ಜಮಾ ಮಾಡುತೇವೆ’ ಎನ್ನುತ್ತಾರೆ ಪ್ರಶಸ್ತಿ ಸ್ವೀಕರಿಸಿದ ಚಂದ್ರಲತಾ.

ಹೊಸದಾಗಿ ಅಡಿಕೆ ಹಾಳೆ ತಯಾರಿಕೆ ಕಾಯಕಕ್ಕೆ ಯಂತ್ರದ ನೆರವು ದೊರೆತಿದೆ. ಈ ಯಂತ ಖರೀದಿಗೆ ಶೇ50 ರಿಯಾಯಿತಿ ಲಭಿಸಿದೆ. ನಿತ್ಯ 300 ಹಾಳೆ ಉತ್ಪಾದಿಸಬಹುದು. ಆದರೆ ನಮಗೆ ಮಾರು ಕಟ್ಟೆಯದ್ದೇ ಸಮಸ್ಯೆ ಎನ್ನುತ್ತಾರೆ ಚಂದ್ರಲತಾ.

ಗುಣಮಟ್ಟದ ಆಹಾರ ತಯಾರಿಕೆ ಕುರಿತು 2008ರಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐನವರು ತರಬೇತಿ ನೀಡಿದ್ದಾರೆ. ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ನೆರವು ನೀಡಲಾಗುವುದು. ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಪಡೆಯುವ ಆಸೆ ನಮಗಿದೆ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಮ್ಮ ಸಂಘಕ್ಕೆ ಮಾಹಿತಿನೀಡಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸದಸ್ಯೆ ಮಹದೇವಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT