ಮೇದಾರರ ಜೀವನಕ್ಕೆ ಮೊರವೇ ಆಧಾರ! ಬಾಗಿನ ಅರ್ಪಣೆಗೆ ಮೊರಕ್ಕೆ ಹೆಚ್ಚಿನ ಬೇಡಿಕೆ

7
ಸ್ವರ್ಣಗೌರಿ ಹಬ್ಬ

ಮೇದಾರರ ಜೀವನಕ್ಕೆ ಮೊರವೇ ಆಧಾರ! ಬಾಗಿನ ಅರ್ಪಣೆಗೆ ಮೊರಕ್ಕೆ ಹೆಚ್ಚಿನ ಬೇಡಿಕೆ

Published:
Updated:
Deccan Herald

ಚಾಮರಾಜನಗರ: ಗೌರಿ–ಗಣೇಶ ಹಬ್ಬದ ಮೊದಲ ದಿನ ಸ್ವರ್ಣಗೌರಿಗೆ ಮೊರದ ಬಾಗಿನ ಅರ್ಪಿಸಲಾಗುತ್ತದೆ. ನಂತರ ಅವುಗಳನ್ನು ಮುತ್ತೈದೆಯರಿಗೆ ನೀಡುವುದು ಸಂಪ್ರದಾಯ. ಹಾಗಾಗಿ, ಗಣೇಶನ ಹಬ್ಬದ ಸಂದರ್ಭದಲ್ಲಿ ಮೊರಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. 

ಮೊರ, ಬುಟ್ಟಿಗಳನ್ನು ಸಿದ್ಧಪಡಿಸುವುದನ್ನೇ ಕಾಯಕ ಮಾಡಿಕೊಂಡಿರುವ ಮೇದಾರ ಸಮುದಾಯದವರಿಗೆ ಈಗ ಬೇಡಿಕೆ ಹೆಚ್ಚು. ಪಟ್ಟಣದಲ್ಲಿ ಒಂದು ಸುತ್ತು ಹೊಡೆದರೆ, ಮೇದಾರರು ಮೊರವನ್ನು ಸಿದ್ಧಪಡಿಸುತ್ತಿರುವುದನ್ನು ಕಾಣಬಹುದು.

ಪಟ್ಟಣದ ಮೇದಾರ ಬೀದಿಯಲ್ಲಿ ಅಲ್ಲಲ್ಲಿ ಇದೇ ದೃಶ್ಯ ಕಾಣಬಹುದು. ಹಲವು ಕುಟುಂಬಗಳು ಮೊರದ ತಯಾರಿಕೆಯಲ್ಲಿ ತೊಡಗಿವೆ‌.

ಮೇದಾರರ ಜೀವನ

ಮೊರ ತಯಾರಿಕೆ ಮತ್ತು ಮಾರಾಟ ಮೇದಾರ ಸಮುದಾಯದವರ ಜೀವನ ಪ್ರತಿ ಗೌರಿ ಹಬ್ಬದ ಎರಡು ದಿನಗಳ ಮೊದಲು ಮೊರಗಳನ್ನು ಸಿದ್ಧಪಡಿಸಿ ಸಂತೆ, ನಗರ ಪ್ರದೇಶಗಳಿಗೆ ಹೋಗಿ ಮಾರಾಟ ಮಾಡುತ್ತಾರೆ.

ಈ ಹಬ್ಬದ ಮೂರು ದಿನ ಮಾತ್ರ ಮೊರಗಳಿಗೆ ಬೇಡಿಕೆ ಇರುತ್ತದೆ. ಉಳಿದ ದಿನಗಳಲ್ಲಿ ಯಾರೊಬ್ಬರೂ ಸಮೀಪ ಬರುವುದಿಲ್ಲ ಎನ್ನುತ್ತಾರೆ ತಯಾರಕರು.

ವಿಧಾನ

ಸ್ವರ್ಣಗೌರಿ ಹಬ್ಬದ ಬಾಗಿನಕ್ಕೆ ಹೊಸ ಮೊರಗಳನ್ನು ಹಬ್ಬದ ಹಿಂದಿನ ಅಮಾವಾಸ್ಯೆಗೆ ಮೊದಲು ತೊಳೆದು ಒಣಗಿಸಿ ಅರಿಶಿನ ಹಚ್ಚುತ್ತಾರೆ. ಹಿರಿಯರು ಹಾಗೂ ಕಿರಿಯರಿಗಾಗಿ ಎರಡು ಜೊತೆ ದೊಡ್ಡ ಮೊರ, ಒಂದು ಜೊತೆ ಸಣ್ಣಮೊರ ನೀಡಲು ಸಿದ್ದಪಡಿಸುತ್ತಾರೆ.

ಪಟ್ಟಣದ ಮೇದಾರ ಬೀದಿಯಲ್ಲಿ ಮಾತ್ರವೇ ಮೊರ ತಯಾರಾಗುತ್ತದೆ. ಇಲ್ಲಿ ಒಟ್ಟು 40 ಕುಟುಂಬಗಳಿವೆ. ಇವರಲ್ಲಿ 50 ಮಂದಿ ಮೊರ ತಯಾರಿಕೆಯಲ್ಲಿ ಬದುಕು ಸವೆಸುತ್ತಿದ್ದಾರೆ. ಉಳಿದವರು ಕೂಲಿಗೆ ಹೋಗುತ್ತಾರೆ. 

ಮೊರಕ್ಕೆ ಬೇಕಾದ ಬಿದಿರುಗಳನ್ನು ಕೊಡಗಿನಿಂದ ತರಲಾಗುತ್ತದೆ. ಈ ವರ್ಷ ಕೊಡಗಿನಲ್ಲಿ ಪ್ರವಾಹ ಬಂದಿರುವುದರಿಂದ ಲಭ್ಯವಿರುವ ಬಿದಿರಿನಲ್ಲಿ ಮೊರ ತಯಾರಿಸುತ್ತಿದ್ದೇವೆ ಎಂದು ಹೇಳುತ್ತಾರೆ  ಎಂದು ಹೇಳುತ್ತಾರೆ ತಯಾರಕರು.

ಒಂದು ಬಿದಿರು ಬಂಬುಗೆ ₹ 300 ನೀಡಿ ಖರೀದಿ ಮಾಡುತ್ತಾರೆ. ಇದರಿಂದ 15ರಿಂದ 20 ಮೊರಗಳನ್ನು ತಯಾರಿಸಬಹುದು. ದಿನವೊಂದಕ್ಕೆ ಇಬ್ಬರು 10ರಿಂದ 15 ಮೊರಗಳನ್ನು ಸಿದ್ಧಪಡಿಸಬಹುದು. 

ಹಬ್ಬದ ಸಮಯದಲ್ಲಿ ಚಿಕ್ಕ ಮೊರ ಜೊತೆಗೆ ₹ 50, ದೊಡ್ಡ ಮೊರ ಜೊತೆಗೆ ₹ 100 ದರ ಇದೆ. ಬೇರೆ ದಿನಗಳಲ್ಲಿ ₹ 30ರಿಂದ ₹ 50ಕ್ಕೆ  ಮಾರಾಟವಾಗುತ್ತದೆ ಎನ್ನುತ್ತಾರೆ ಮಾರಾಟಗಾರರು.

‘ಕಷ್ಟಕರ ಜೀವನ’

ಮಾರುಕಟ್ಟೆಯಲ್ಲಿ ಈಗ ಪ್ಲಾಸ್ಟಿಕ್‌ ಮೊರಗಳು ಲಭ್ಯವಿರುವುದರಿಂದ ಬಿದಿರನ ಮೊರಕ್ಕೆ ಬೇಡಿಕೆ ಇಲ್ಲದಂತಾಗಿದೆ. ಇದರಿಂದಾಗಿ  ಇವರು ಸಿದ್ಧಪಡಿಸುವ ಮೊರಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಹಾಗಾಗಿ ಈಗ ಜೀವನ ಇನ್ನಷ್ಟು ಕಷ್ಟಕರವಾಗಿದೆ ಎಂದು ಮೇದಾರರು ಅಳಲು ತೋಡಿಕೊಂಡರು.

‘ನನಗೀಗ 70 ವರ್ಷ. 15 ವರ್ಷಗಳಿಂದ ಮೊರ ತಯಾರಿಸುತ್ತಿದ್ದೇನೆ. ಹಿಂದೆ ಮನೆಗಳಲ್ಲಿ ಅಕ್ಕಿ ಕೇರುವುದಕ್ಕೆ ಹಾಗೂ ಇನ್ನಿತರ ಉಪಯೋಗಗಳಿಗೆ ಮೊರದ ಅವಶ್ಯಕತೆ ಇತ್ತು. ಆದರೀಗ ಪ್ಲಾಸ್ಟಿಕ್‌ ಮೊರ ತಯಾರಿಕೆಯಿಂದ ನಮ್ಮ ಕಸುಬಿಗೂ ಪೆಟ್ಟು ಬಿದ್ದಿದೆ. ಬದುಲು ಕಷ್ಟಕರವಾಗಿದೆ’ ಎಂದು ಮೇದಾರ ಬೀದಿಯ ಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆದರೆ, ಹಬ್ಬದ ದಿನಗಳಲ್ಲಿ ಬಾಗಿನ ಅರ್ಪಣೆಗೆ ಪ್ಲಾಸ್ಟಿಕ್‌ ಮೊರ ಬಳಸುವುದಿಲ್ಲ ಹಾಗಾಗಿ, ಈ ಸಂದರ್ಭದಲ್ಲಿ ಮೊರಕ್ಕೆ ಬೇಡಿಕೆ ಇರುತ್ತದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !