ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಸಿ.ಟಿ.ರವಿ ವಿಶ್ವಾಸ

ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌ ಮೆರವಣಿಗೆ, ನಾಮಪತ್ರ
Last Updated 25 ಏಪ್ರಿಲ್ 2018, 10:47 IST
ಅಕ್ಷರ ಗಾತ್ರ

ಬೇಲೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಮಂಗಳವಾರ ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌ ಸೇರಿದಂತೆ ಎಂಟು ಜನರು ನಾಮಪತ್ರ ಸಲ್ಲಿಸಿದರು.

ಚನ್ನಕೇಶವ ದೇವಾಲಯದ ಬಳಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಸಹಸ್ರಾರು ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದ ಬಿಜೆಪಿ ಅಭ್ಯರ್ಥಿ ಎಚ್‌.ಕೆ.ಸುರೇಶ್‌ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ  ಸಲ್ಲಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಸಿ.ಟಿ. ರವಿ ‘ಬೇಲೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಹಾಸನ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದೆ. 1996 ಫಲಿತಾಂಶ ಮರುಕಳಿಸಲಿದೆ. ಜೆಡಿಎಸ್‌ ಜೊತೆ ಬಿಜೆಪಿ ಯಾವುದೇ ರೀತಿಯ ಒಳ ಒಪ್ಪಂದ ಮಾಡಿಕೊಂಡಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್‌ನವರೇ ನಾಲ್ಕು ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಬೇಲೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಹೆಚ್ಚಿನ ಆಕಾಂಕ್ಷಿಗಳು ಇದ್ ದಕಾರಣ ಟಿಕೆಟ್‌ ಘೋಷಣೆ ವಿಳಂಬವಾಯಿತು. ಬಿಜೆಪಿಯ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಮ್ಮತದಿಂದ ಅಭ್ಯರ್ಥಿಯ ಗೆಲುವಿಗೆ ಹೋರಾಟ ನಡೆಸಲಿದ್ದಾರೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್‌, ಮುಖಂಡರಾದ ರೇಣುಕುಮಾರ್‌, ಪರ್ವತಯ್ಯ, ಜಿ.ಕೆ.ಕುಮಾರ್‌, ನವಿಲೆ ಅಣ್ಣಪ್ಪ, ಕಾಂತರಾಜ್‌ ಮತ್ತಿತರರು ಇದ್ದರು.

ಭಿನ್ನಮತ: ಬಿಜೆಪಿ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ವಂಚಿತರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಆಕಾಂಕ್ಷಿಗಳಾಗಿದ್ದ ಕೊರಟಿಕೆರೆ ಪ್ರಕಾಶ್‌, ಇ.ಎಚ್‌.ಲಕ್ಷ್ಮಣ್‌, ಸುರಭಿ ನಾಮಪತ್ರ ಸಲ್ಲಿಕೆ ವೇಳೆ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

8 ನಾಮಪತ್ರ ಸಲ್ಲಿಕೆ: ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಮಂಗಳವಾರ ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾದವು.

ಎಚ್‌.ಕೆ.ಸುರೇಶ್‌, ತೊಳಚಾ ನಾಯಕ, ಎಚ್‌.ಬಿ.ಚಂದ್ರಕಾಂತ್‌, ಎನ್‌.ಆರ್‌.ಅರುಣ್‌, ಪರ್ವತೇಗೌಡ, ಡಿ. ನಾಗೇಂದ್ರಪ್ಪ, ಝಾಕೀರ್‌ ಪಾಷಾ, ಬಿ.ವೈ.ವಸಂತಕುಮಾರ್‌ ನಾಮಪತ್ರ ಸಲ್ಲಿಸಿದರು. ಇಲ್ಲಿಯವರೆಗೆ ಒಟ್ಟು 12 ಜನರು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT