ಚಾಮರಾಜನಗರಕ್ಕೂ ಬಂತು ಚೀನಾ ಸಿಲ್ಕ್ ಶೀಟ್!

7
ಮಾಂಬಳ್ಳಿ ಗ್ರಾಮದಲ್ಲಿ ಜಿಲ್ಲೆಯ ಪ್ರಥಮ ಘಟಕ ಆರಂಭ

ಚಾಮರಾಜನಗರಕ್ಕೂ ಬಂತು ಚೀನಾ ಸಿಲ್ಕ್ ಶೀಟ್!

Published:
Updated:
Deccan Herald

ಯಳಂದೂರು: ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ರೇಷ್ಮೆನೂಲು ಬಿಚ್ಚಣಿಕೆ ಚರಿತ್ರೆಗೆ ಟಿಪ್ಪು ಕಾಲಮಾನದ ಹೆಜ್ಜೆ ಗುರುತುಗಳಿವೆ. ಅಂದು, ಗ್ರಾಮೀಣ ಅಭಿವೃದ್ಧಿ ಆರ್ಥಿಕತೆಗೆ ಒತ್ತು ನೀಡಿದ್ದ ಸುಲ್ತಾನರ ದೂರದರ್ಶಿತ್ವದ ರೇಷ್ಮೆ ರಾಟೆ ಈಗ ಆಧುನಿಕ ತಂತ್ರಜ್ಞಾನಕ್ಕೆ ಹೊರಳಿಕೊಂಡು ಅಸ್ತಿತ್ವದಲ್ಲಿದೆ. ರಾಟೆಯಿಂದ ಬಿಚ್ಚಿಕೊಳ್ಳುವ ನೂಲು ಈಗ ರೇಷ್ಮೆ ಶೀಟ್‌ಗಳ ರೂಪದಲ್ಲಿ ಊರಿನ ಹೆಸರನ್ನು ದೇಶಕ್ಕೆ ಪರಿಚಯಿಸಿದೆ.

ಚಾಮರಾಜನಗರ ಜಿಲ್ಲೆಗೆ ಇಂತಹ ಪ್ರಥಮ ರೇಷ್ಮೆ ಶೀಟ್‌ (ರೇಷ್ಮೆ ಹಾಳೆ) ಉದ್ಯಮ ಪರಿಚಯಿಸಿದವರು ಮಾಂಬಳ್ಳಿಯ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್. ಇವರು ತಮ್ಮ ಮನೆಯ ಹಿಂಭಾಗದಲ್ಲಿ ಘಟಕವನ್ನು ಸ್ಥಾಪಿಸಿದ್ದಾರೆ. ನೂರಾರು ಶ್ರಮಿಕರಿಗೆ ಉದ್ಯೋಗ ನೀಡಿದ್ದಾರೆ.

ಏನಿದು ಚೀನಾ ಸಿಲ್ಕ್ ಶೀಟ್?: ರೇಷ್ಮೆಗೂಡನ್ನು ಕುದಿಯುವ ಬಾನಿಯಲ್ಲಿಟ್ಟು ನೂಲು ಬಿಚ್ಚುವುದು ಇಲ್ಲಿನ ಸಂಪ್ರದಾಯ. ಚರಕ, ರೀಲಿಂಗ್ ಬಳಸಿ ನೂಲಿನ ಎಳೆಗಳನ್ನು ರಾಟೆಗೆ ಸುತ್ತಿ ರೇಷ್ಮೆ ಸಂಗ್ರಹಿಸುತ್ತಾರೆ.

ಆದರೆ, ಚೀನಾದಲ್ಲಿ ವಿಶೇಷ ಯಂತ್ರವೊಂದಕ್ಕೆ ಗೂಡನ್ನು ಸುರಿದು ನೇರವಾಗಿ ರೇಷ್ಮೆ ಹಾಳೆಗಳನ್ನೇ ತೆಗೆಯುವ ಕೈಗಾರಿಕೆಗಳು ವ್ಯಾಪಕವಾಗಿವೆ. ರಾಮನಗರ ಜಿಲ್ಲೆಯಲ್ಲಿ ಇಂತಹ ವಿಧಾನ ಈಗಾಗಲೇ ಬಳಕೆಯಲ್ಲಿ ಇದೆ. ಇಂತಹ ನವೀನ ತಾಂತ್ರಿಕತೆಯನ್ನು ಶಕೀಲ್ ನಮ್ಮ ಜಿಲ್ಲೆಯಲ್ಲೂ ಪರಿಚಯಿಸಿದ್ದಾರೆ.

ಲಾಭವೇನು?: ಚೀನಾದ ಯಂತ್ರದಲ್ಲಿ ಬಾಯ್ಲರ್ ಹಾಗೂ ಒಂದು ರೇಷ್ಮೆ ಶೀಟ್‌ ತೆಗೆಯುವ ವಿದ್ಯುತ್ ಚಾಲಿತ ಯಂತ್ರ ಜೋಡಿಸಲಾಗಿದೆ. ಬಾಯ್ಲರ್‌ ಮೂಲಕ ಬಿಸಿನೀರು ಯಂತ್ರಕ್ಕೆ ಸೇರುತ್ತದೆ. ಇದರಲ್ಲಿ ರೇಷ್ಮೆ ಗೂಡನ್ನು ಸುರಿಯಬೇಕು. ಚಾಲೂ ಆದಾಗ ಯಂತ್ರ ಸುತ್ತುವ ವೇಗಕ್ಕೆ ತಕ್ಕಂತೆ ನೀರು ಹಾಯಿಸಿದಾಗ 7 ರಿಂದ 8 ನಿಮಿಷದಲ್ಲಿ ಒಂದು ರೇಷ್ಮೆ ಶೀಟ್ ಹೊರಬರುತ್ತದೆ. ನಂತರ ಬಿಸಿಲಿನಲ್ಲಿ ಇದನ್ನು ಚೆನ್ನಾಗಿ ಒಣಗಿಸಬೇಕು.

‘ಕಡಿಮೆ ಅವಧಿಯಲ್ಲಿ ಶೀಟ್‌ ತಯಾರಾಗುತ್ತದೆ. ಈ ವ್ಯವಸ್ಥೆಯಲ್ಲಿ ತ್ಯಾಜ್ಯದ ಪ್ರಮಾಣದಲ್ಲೂ ಇಳಿಕೆಯಾಗುತ್ತದೆ. ಇದು ಪೊಳ್ಳು ಗೂಡುಗಳ ಬಳಕೆಗೂ ಪೂರಕ. ವೆಚ್ಚದ ಪ್ರಮಾಣವೂ ತಗ್ಗುತ್ತದೆ’ ಎನ್ನುತ್ತಾರೆ ಅಹಮ್ಮದ್‌.

‘ಮಾರುಕಟ್ಟೆಯಲ್ಲಿ  ಒಂದು ಕೆಜಿ ರೇಷ್ಮೆ ಶೀಟ್‌ಗೆ ಪ್ರಸ್ತುತ ₹ 1,200 ರಿಂದ ₹ 1,400 ಬೆಲೆ ಇದೆ. ಪೊಳ್ಳು ಗೂಡಿನಿಂದ ತಯಾರಾದ ಹಾಳೆಗೆ ಕೆಜಿಗೆ ₹ 700 ರಿಂದ ₹ 800 ಧಾರಣೆ ಇದೆ. 6 ರಿಂದ 8 ಕೆಜಿ ಗೂಡಿನಿಂದ 1 ಕೆಜಿ ತೂಕದ ರೇಷ್ಮೆಶೀಟ್ ತಯಾರಿಸಬಹುದು. ಬೆಲೆ ಮತ್ತು ಬೇಡಿಕೆಗೆ ತಕ್ಕಂತೆ ಲಾಭ ನಷ್ಟವನ್ನು ಲೆಕ್ಕಚಾರ ಹಾಕಬೇಕು’ ಎಂದು ಬಿಹಾರದ ಬಾಬುಲ್ಖಾನ್ ಮತ್ತು ನಿಸಾರ್ ಅಹಮ್ಮದ್ ಹೇಳುತ್ತಾರೆ.

ಬಿಹಾರದ ಕುಶಲಕರ್ಮಿಗಳು: ‘ಸಿಲ್ಕ್‌ಶೀಟ್‌ ತೆಗೆಯುವ ಪದ್ಧತಿ ಇಲ್ಲಿನ ಪರಿಸರಕ್ಕೆ ಹೊಸದು. ಸ್ಥಳೀಯರಿಗೂ ಈ ವೃತ್ತಿಯ ಪರಿಚಯ ಇಲ್ಲ. ಇದ್ದರೂ, ಕೌಶಲವಿಲ್ಲ. ಹಾಗಾಗಿ, ಬಿಹಾರಿಗಳನ್ನೇ ಇಂತಹ ಕೆಲಸಕ್ಕೆ ನೆಚ್ಚಿಕೊಳ್ಳಬೇಕು. ಒಂದು ಘಟಕ ಸ್ಥಾಪಿಸಲು ₹ 8 ರಿಂದ ₹ 10 ಲಕ್ಷ ಹಣ ಖರ್ಚು ತಗುಲುತ್ತದೆ. ಇಂತಹ ಹತ್ತಾರು ನವ ಉದ್ಯಮಗಳನ್ನು ವಿಸ್ತರಿಸುವ ಇರಾದೆಯೂ ಇದೆ ಎನ್ನುತ್ತಾರೆ ಮಾಂಬಳ್ಳಿ ಶಕೀಲ್ ಅಹಮ್ಮದ್‌.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !