ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಮ್ಮೆ ಪರೀಕ್ಷೆ ಬರೆಯುತ್ತೇನೆ

ಯುಪಿಎಸ್‌ಸಿಯಲ್ಲಿ 531ನೇ ರ‍್ಯಾಂಕ್‌ ಗಳಿಸಿದ ಅಭಿಲಾಷ ಶಶಿಕಾಂತ ಬಡ್ಡೂರ
Last Updated 29 ಏಪ್ರಿಲ್ 2018, 4:40 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ‘ಎಂಟು ತಿಂಗಳು ಗೆಳೆಯರೊಂದಿಗೆ ದೆಹಲಿಗೆ ಹೋಗಿದ್ದೆ. ಅಲ್ಲಿ ಟೆಸ್ಟ್‌ ಸಿರೀಸ್‌ ಪರೀಕ್ಷೆಗಳನ್ನು ಬರೆದ. ಅಲ್ಲಿಂದ ಬಂದು ಬೆಂಗಳೂರಿನಲ್ಲೇ ಓದಲು ಪ್ರಾರಂಭಿಸಿದೆ. ಯಾವುದೇ ಕೋಚಿಂಗ್‌ ಕ್ಲಾಸ್‌ಗೆ ಹೋಗಲಿಲ್ಲ. ಸ್ವತಃ ತಾನೇ ಓದಿದೆ...’

ಕೇಂದ್ರ ಲೋಕ ಸೇವಾ ಆಯೋಗ ನಡೆಸಿದ 2018ನೇ ಸಾಲಿನ ಪರೀಕ್ಷೆಯಲ್ಲಿ 531ನೇ ರ‍್ಯಾಂಕ್‌ ಪಡೆದಿರುವ ಸ್ಥಳೀಯ ನೇಕಾರಿಕೆ ಮನೆತನದ ಅಭಿಲಾಷ ಶಶಿಕಾಂತ ಬಡ್ಡೂರ ಅವರ ಮಾತುಗಳಿವು.

‘ನನ್ನ ಸಾಧನೆಗೆ ತಂದೆ ಶಶಿಕಾಂತ ಮತ್ತು ತಾಯಿ ಸುಲೋಚನಾ ಸಾಕಷ್ಟು ಪ್ರೋತ್ಸಾಹವನ್ನು ನೀಡಿದ್ದಾರೆ. ಮನೆಯ ಕಡೆಗೆ ಯಾವುದೇ ಚಿಂತೆ ಮಾಡದೆ ನನ್ನ ಓದು ಮತ್ತು ಸಾಧನೆಗೆ ಸಹಾಯ ಮಾಡಿದ್ದಾರೆ. ಮುಂದೆ ಮತ್ತೊಂದು ಬಾರಿ ಪರೀಕ್ಷೆಯನ್ನು ಬರೆದು ರ‍್ಯಾಂಕ್‌ ಇನ್ನಷ್ಟು ಸುಧಾರಿಸಿಕೊಳ್ಳುತ್ತೇನೆ’ ಎಂದು ಅಭಿಲಾಷ ತಮ್ಮ ಮುಂದಿನ ಪ್ರಯತ್ನದ ಬಗ್ಗೆ ಮಾಹಿತಿ ನೀಡಿದರು.

ಆಭಿಲಾಷ ಮೂಲ ಬನಹಟ್ಟಿಯವರಾಗಿದ್ದು, ಅವರ ತಂದೆ ಶಶಿಕಾಂತ ಬಡ್ಡೂರ ಮನೆತನದ ಉದ್ಯೋಗವಾಗಿರುವ ನೇಕಾರಿಕೆಯ ಜೊತೆಗೆ ಸದ್ಯ ಮುಧೋಳದ ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಸುಲೋಚನಾ ಗೃಹಿಣಿ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರರಾದರೂ ಅಭಿಲಾಷ, ಯುಪಿಎಸ್‌ಸಿಯಲ್ಲಿ ಮಾನವ ಶರೀರ ರಚನಾ ಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದು ಗಮನಾರ್ಹ.

‘1ರಿಂದ 10ನೇ ತರಗತಿಯ ಶಿಕ್ಷಣವನ್ನು ರಾಯಬಾಗದ ಮಹಾವೀರ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಪೂರೈಸಿದೆ. ನಂತರ ಧಾರವಾಡದ ಜೆಎಸ್‌ಎಸ್‌ ಕಾಲೇಜಿನಿಂದ ಪಿಯುಸಿ ಮುಗಿಸಿ, ನಂತರ ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ತಾಂತ್ರಿಕ ಸ್ವಾಯತ್ತ ಮಹಾವಿದ್ಯಾಲಯದಿಂದ ಮೆಕ್ಯಾನಿಕಲ್‌ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡೆ. ಇದೇ ವಿಭಾಗದಲ್ಲಿ ಬಂಗಾರದ ಪದಕ ಪಡೆದುಕೊಂಡೆ. ನಂತರ ಟಿಸಿಎಸ್‌ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದೆ’ ಎಂದು
ತಮ್ಮ ಹಿನ್ನೆಲೆಯನ್ನು ವಿವರಿಸಿದರು ಅಭಿಲಾಷ.

‘ಮೊದಲಿನಿಂದಲೂ ಗ್ರಾಮೀಣ ಪ್ರದೇಶ ಮತ್ತು ಗ್ರಾಮೀಣ ಜನರ ಸೇವೆಯನ್ನು ಮಾಡಬೇಕು ಎಂದು ಮಹತ್ತರ ಆಶಯ ಇತ್ತು. ಅದಕ್ಕಾಗಿ ಟಿಸಿಎಸ್‌ ನೌಕರಿಯನ್ನು ಬಿಟ್ಟು 2016ರಿಂದ ಕೇಂದ್ರ ಲೋಕಾ ಸೇವಾ ಆಯೋಗದ ಪರೀಕ್ಷೆಗೆ ತಯಾರಿ ನಡೆಸಿದೆ. ಮೊದಲ ಪ್ರಯತ್ನದಲ್ಲಿ ವಿಫಲನಾದೆ. ಎರಡನೆಯ ಪ್ರಯತ್ನದಲ್ಲಿ ಸಂದರ್ಶನದವರೆಗೂ ಹೋಗಿದ್ದೆ. ಈಗ ಮೂರನೆಯ ಪ್ರಯತ್ನದಲ್ಲಿ 531ನೇ ಸ್ಥಾನ ಬಂದಿದೆ’ ಎಂದು ಅಭಿಲಾಷ ಹೇಳಿದರು.

ವಿಶ್ವಜ ಕಾಡದೇವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT