ಮಂಗಳವಾರ, ಸೆಪ್ಟೆಂಬರ್ 21, 2021
24 °C
ಮನೆಗೆ ತ್ಯಾಜ್ಯ ನೀರು ನುಗ್ಗುವ ಭೀತಿ, ಕೆಟ್ಟು ನಿಂತ ಮೋಟಾರ್‌ ಪಂಪ್‌

ಹೆಗ್ಗವಾಡಿಪುರ: ಚರಂಡಿ ವ್ಯವಸ್ಥೆ ಇಲ್ಲ, ಕುಡಿಯಲು ನೀರೂ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಗ್ಗವಾಡಿಪುರ ಗ್ರಾಮದಲ್ಲಿ ಮನೆಗಳ ಮುಂಭಾಗ ಚರಂಡಿ ಮುಚ್ಚಿರುವುದು

ಸಂತೇಮರಹಳ್ಳಿ:  ಕಾಮಗಾರಿ ನಡೆಸುವಾಗ ಚರಂಡಿಯನ್ನು ಅಪೂರ್ಣವಾಗಿ ನಿರ್ಮಿಸಿದ ಪರಿಣಾಮ ಚರಂಡಿಯ ನೀರು ಮುಂದೆ ಹೋಗದಿರುವುದರಿಂದ ಸಮೀಪದ  ಹೆಗ್ಗವಾಡಿಪುರ ಗ್ರಾಮ ನಿವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ.

ಚರಂಡಿ ನೀರು ಸಮರ್ಪಕವಾಗಿ ಹರಿಯದೇ ಇರುವುದರಿಂದ, ತ್ಯಾಜ್ಯ ನೀರು ಮನೆಗಳ ಒಳಗ್ಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವರ್ಷದಿಂದ ಈ ಸಮಸ್ಯೆ ಇದ್ದು, ಸಂಬಂಧಪಟ್ಟವರು ಇತ್ತ ಗಮನ ಹರಿಸಿಲ್ಲದೇ ಇರುವುದರಿಂದ ಗ್ರಾಮಸ್ಥರ ತೊಂದರೆ ಬಗೆಹರಿದಿಲ್ಲ.

₹30 ಲಕ್ಷ ವೆಚ್ಚ:  ಗ್ರಾಮದಲ್ಲಿ ವರ್ಷದ ಹಿಂದೆ ಆಗಿನ ಶಾಸಕರ ಅನುದಾನದಲ್ಲಿ ₹ 30 ಲಕ್ಷ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸಲು ಹಣ ಬಿಡುಗಡೆ ಗೊಳಿಸಲಾಯಿತು. ಕಾಮಗಾರಿಯನ್ನು ಆರಂಭಿಸಿ ಚರಂಡಿಯನ್ನು ಸಮರ್ಪಕವಾಗಿ ನಿರ್ಮಿಸದೇ ಇರುವುದರಿಂದ 200 ಮೀಟರ್ ಉದ್ದದ ಚರಂಡಿಯಲ್ಲಿ ತ್ಯಾಜ್ಯ ನೀರು ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ. ಮನೆಗಳಿಂದ ಹೊರ ಬಂದ ತ್ಯಾಜ್ಯನೀರು ಮುಂದೆ ಹರಿಯದೇ ಮನೆಗಳ ಮುಂಭಾಗವೇ ನಿಲ್ಲುವಂತಹ ಪರಿಸ್ಥಿತಿ ಉಂಟಾಗಿದೆ.

ಕೆಲವು ನಿವಾಸಿಗಳು ತಮ್ಮ ಮನೆಗಳ ಮುಂಭಾಗ ಚರಂಡಿಯನ್ನು ಮುಚ್ಚಿದ್ದಾರೆ. ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರು ದುರ್ವಾಸನೆ ಬೀರುತ್ತಿದೆ. ಪ್ಲಾಸ್ಟಿಕ್‌ಗಳು, ಬಾಟಲಿಗಳು ಬಿದ್ದು ಅನೈರ್ಮಲ್ಯ ಉಂಟಾಗಿದೆ. ಈ ಜಾಗವನ್ನು ಸೊಳ್ಳೆಗಳು, ಕ್ರಿಮಿ ಕೀಟಗಳು ಅವಾಸಸ್ಥಾನ ಮಾಡಿ ಕೊಂಡಿರುವುದರಿಂದ ನಿವಾಸಿಗಳು ರೋಗ ರುಜಿನಗಳ ಭೀತಿಯನ್ನು ಎದುರಿಸಬೇಕಾಗಿದೆ.

ಚರಂಡಿಯಲ್ಲಿ ನಿಂತಿರುವ ಹೂಳನ್ನು ತೆಗೆಸಲು ಗ್ರಾಮ ಪಂಚಾಯಿತಿಯವರು ಮುಂದಾಗಿಲ್ಲ. ಸಮಸ್ಯೆ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಅವರು ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು
ದೂರಿದ್ದಾರೆ.

ಕೆಟ್ಟು ಹೋದ ಮೋಟಾರ್‌, ಕುಡಿಯಲು ನೀರಿಲ್ಲ:  ಚರಂಡಿ ಸಮಸ್ಯೆಯ ಜೊತೆಗೆ ನೀರಿನ ಸಮಸ್ಯೆಯೂ ಇಲ್ಲಿನ ಜನರನ್ನು ಬಾಧಿಸುತ್ತಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿ ಮೋಟಾರ್ ಕೆಟ್ಟು ನಿಂತು 2 ತಿಂಗಳು ಕಳೆದಿವೆ. ಮೋಟಾರ್ ದುರಸ್ತಿಗೊಳಿಸಿ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಇನ್ನೂ ಕಲ್ಪಿಸಿಲ್ಲ. ಕಿರುನೀರು ಸರಬರಾಜು ಘಟಕದ ತೊಂಬೆ, ನೀರು ಕಾಣದೇ ಅನಾಥವಾಗಿ ನಿಂತಿದೆ. ಈ ಭಾಗದ ನಿವಾಸಿಗಳು ಕುಡಿಯುವ ನೀರು ತುಂಬಿಕೊಳ್ಳಲು ಪಕ್ಕದ ಬಡಾವಣೆಗೆ ಅಲೆದಾಡಬೇಕಾಗಿದೆ.

ಕೆಟ್ಟು ನಿಂತಿರುವ ಕೊಳವೆ ಬಾವಿಯ ಮೋಟಾರ್‌ ಅನ್ನು ದುರಸ್ತಿಗೊಳಿಸಬೇಕು. ಜತೆಗೆ ಚರಂಡಿಯನ್ನು ಸಮರ್ಪಕವಾಗಿ ನಿರ್ಮಿಸಿ ಮನೆಗಳಿಂದ ಹೊರ ಹೋಗುವ ನೀರು ಚರಂಡಿಯಲ್ಲಿ ಸರಾಗವಾಗಿ ಹರಿದುಹೋಗುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವಾಸಿಗಳಾದ ನೀಲಮ್ಮ, ರತ್ನಮ್ಮ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

ಬಡಾವಣೆಯಲ್ಲಿ ಉಂಟಾಗಿರುವ ಚರಂಡಿ ಸಮಸ್ಯೆಯನ್ನು ಸರ್ವೆಯರ್ ಮೂಲಕ ಬಗೆಹರಿಸಿ ಚರಂಡಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮೇಗೌಡ ಅವರು ಹೇಳಿದ್ದಾರೆ.

ಕೊಳವೆ ಬಾವಿ ಮೋಟಾರ್‌ಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಕರೆದು ಹೊಸ ಮೋಟಾರ್ ಖರೀದಿಸಿ ಬಡಾವಣೆಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಮಹದೇವ್ ಹೆಗ್ಗವಾಡಿಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು