ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿಕೊಂಡ ಹಮ್ಮಿಗೆ ಬ್ಯಾರೇಜ್‌

ತುಂಗಭದ್ರಾ ನದಿಪಾತ್ರದಲ್ಲಿ ಉತ್ತಮ ಮಳೆ ಪರಿಣಾಮ
Last Updated 26 ಮೇ 2018, 13:08 IST
ಅಕ್ಷರ ಗಾತ್ರ

ಮುಂಡರಗಿ: ಹದಿನೈದು ದಿನಗಳ ಹಿಂದಷ್ಟೇ ಡೆಡ್‌ಸ್ಟೋರೇಜ್‌ (ಬಳಸಲು ಸಾಧ್ಯವಾಗದ ನೀರು) ಮಟ್ಟ ತಲುಪಿದ್ದ ತಾಲ್ಲೂಕಿನ ಹಮ್ಮಿಗೆ ಬ್ಯಾರೇಜ್‌ನಲ್ಲಿ ಈಗ ಸಮೃದ್ಧ ಜೀವ ಜಲ. ತುಂಗಭದ್ರಾ ನದಿ ಪಾತ್ರದಲ್ಲಿ ಧಾರಾಕಾರ ಮಳೆ ಆಗಿರುವುದರಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದು ಬ್ಯಾರೇಜ್‌ನಲ್ಲಿ ಸಂಗ್ರಹವಾಗಿದೆ.

ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯಡಿ ನಿರ್ಮಾಣಗೊಂಡಿರುವ ಈ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಿ ಅದನ್ನು ಗದಗ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಪೂರೈಕೆ ಮಾಡಲಾಗುತ್ತದೆ. ಬೇಸಿಗೆಯಲ್ಲಿ ಬ್ಯಾರೇಜ್‌ನಲ್ಲಿ ನೀರು ಡೆಡ್‌ಸ್ಟೋರೇಜ್ ಮಟ್ಟ ತಲುಪಿದ್ದರಿಂದ ಗದಗ ನಗರಕ್ಕೆ 24x7 ಕುಡಿಯುವ ನೀರಿನ ಪೂರೈಕೆಗೆ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಮತದಾನದ ದಿನವೇ ಅಂದರೆ ಮೇ 12ರಂದು ಭದ್ರಾ ಜಲಾಶಯದಿಂದ ಇಲ್ಲಿಗೆ 1,500 ಕ್ಯೂಸೆಕ್ ನೀರು ಹರಿಸಲಾಗಿತ್ತು.ಆ ನೀರಿನ ಸಂಗ್ರಹವೂ ಖಾಲಿಯಾಗಿ, ಹೊಸ ಸರ್ಕಾರ ರಚನೆ ಆಗುತ್ತಿದ್ದಂತೆ ಮತ್ತೆ ನೀರಿನ ಹಾಹಾಕಾರ ಆರಂಭವಾಗುವ ಸ್ಥಿತಿ ಇತ್ತು.

ಆದರೆ, ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ, ನೀರಿನ ಬವಣೆಗೆ ಪರಿಹಾರ ಒದಗಿಸಿದೆ. ಇದರಿಂದ ಗದಗ–ಬೆಟಗೇರಿ ಅವಳಿ ನಗರ ಸೇರಿ ತುಂಗಭದ್ರಾ ನದಿ ನೀರನ್ನು ಅವಲಂಬಿಸಿರುವ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಹಮ್ಮಿಗೆ ಬ್ಯಾರೇಜಿನಲ್ಲಿ ಒಟ್ಟು 3.12 ಟಿ.ಎಂ.ಸಿ ಅಡಿ ನೀರು ಸಂಗ್ರಹ ಮಾಡಿಕೊಳ್ಳಬಹುದು. ಕಳೆದ ಒಂದು ವಾರದಿಂದ ಹಾವೇರಿ, ಮೈಲಾರ, ಕುರುವತ್ತಿ ಸೇರಿ ತುಂಗಭದ್ರಾ ನದಿ ಪಾತ್ರಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ಈಗಾಗಲೇ 1.12 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗಿದೆ. ಸದ್ಯ ಸಂಗ್ರವಿರುವ ನೀರನ್ನು ಎರಡು ತಿಂಗಳವರೆಗೆ ಬಳಸಿಕೊಳ್ಳಲು ಸಾಧ್ಯವಿದೆ.

ಈ ಬ್ಯಾರೇಜಿನ ಕೆಳ ಭಾಗದ ಪ್ರದೇಶಗಳಾದ ಸಿಂಗಟಾಲೂರ, ಕೊರ್ಲಹಳ್ಳಿ, ಹೆಸರೂರು ಮೊದಲಾದ ನದಿ ದಂಡೆಗಳ ಗ್ರಾಮಗಳ ಜನ ಹಾಗೂ ಜಾನುವಾರುಗಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಬ್ಯಾರೇಜ್‌ನಿಂದ ನದಿಗೆ ಮೇ 15ರಿಂದ ನಿತ್ಯ ನೀರು ಹರಿಸಲಾಗುತ್ತಿದೆ. ಇದರಿಂದ ನದಿ ದಂಡೆಯ ಗ್ರಾಮಗಳ ಜನರೂ ನೆಮ್ಮದಿಯಿಂದ ಇರುವಂತಾಗಿದೆ. ಬ್ಯಾರೇಜಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿರುವುದರಿಂದ ಗದಗ, ಬೆಟಗೇರಿ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ಇತರ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಕಡಿಮೆ.
**
ಕಳೆದ ವರ್ಷ ಮೇ ತಿಂಗಳಿನಲ್ಲಿ ಇಷ್ಟು ನೀರು ಸಂಗ್ರಹ ಆಗಿರಲಿಲ್ಲ. ಈ ಬಾರಿ ಮುಂಗಾರು ಪೂರ್ವದಲ್ಲೇ ಉತ್ತಮ ಮಳೆ ಆಗಿದ್ದು ನೀರಿನ ಸಂಕಟ ದೂರ ಮಾಡಿದೆ
ವಿ. ಹನುಮಂತಪ್ಪ, ಎಇಇ, ಹಮ್ಮಿಗೆ ಬ್ಯಾರೇಜ್ 

ಕಾಶೀನಾಥ ಬಿಳಿಮಗ್ಗದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT