ಶುಕ್ರವಾರ, ಏಪ್ರಿಲ್ 3, 2020
19 °C
ಕೊಳ್ಳೇಗಾಲ: ಸ್ವಚ್ಛತೆ ಇಲ್ಲ, ಶೌಚಾಲಯದ ಕೊರತೆ ಪ್ರಯಾಣಿಕರಿಗೆ ತೊಂದರೆ

ಇದು ಅವ್ಯವಸ್ಥೆ‌ಯ ಬಸ್‌ ನಿಲ್ದಾಣ

ಪ್ರಜಾವಾಣಿ ವಾರ್ತೆ/ಅವಿನ್‌ ಪ್ರಕಾಶ್‌ Updated:

ಅಕ್ಷರ ಗಾತ್ರ : | |

Deccan Herald

ಕೊಳ್ಳೇಗಾಲ: ಪ್ರಯಾಣಿಕರ ಅನುಕೂಲಕ್ಕಾಗಿ ಪಟ್ಟಣದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಬಸ್‌ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದೆ.

ಪಟ್ಟಣದ ಬೆಂಗಳೂರು ರಸ್ತೆಯ ಬಸವೇಶ್ವರ ಮಿಲ್ ಸಮೀಪವಿರುವ ತಾತ್ಕಾಲಿಕ ಬಸ್ ನಿಲ್ದಾಣವನ್ನು ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಇಲ್ಲಿ ಯಾವುದೇ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸದೇ ಇರುವುದರಿಂದ ಪ್ರಯಾಣಿಕರು ಪ್ರತಿ ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇದ್ದರೂ ಇಲ್ಲದ ಶೌಚಾಲಯ: ದಿನನಿತ್ಯ ಈ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು ಬರುತ್ತಾರೆ. ಆದರೆ, ನಿಲ್ದಾಣದಲ್ಲಿ ಇರುವುದು ಮೂರು ಶೌಚಾಲಯಗಳು ಮಾತ್ರ. ಮ್ಯಾನ್‌ಹೋಲ್‌ ಭರ್ತಿಯಾಗಿರುವುದರಿಂದ 20 ದಿನಗಳಿಂದ ಈ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ. ಹಾಗಾಗಿ, ಪ್ರಯಾಣಿಕರು ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಶೌಚಾಲಯದ ಸೌಲಭ್ಯ ‌ಇಲ್ಲದಿರುವುದರಿಂದ, ಪುರುಷರು ಅನಿವಾರ್ಯವಾಗಿ ಬಯಲನ್ನೇ ಆಶ್ರಯಿಸುತ್ತಿದ್ದಾರೆ. ಮಹಿಳೆಯರು ಶೌಚಕ್ಕೆ ಹೋಗಲು ಸಾಧ್ಯವಾಗದೆ ಮುಜುಗರ ಅನುಭವಿಸುವಂತಹ ಪರಿಸ್ಥಿತಿ ಇದೆ.

ಸ್ಥಳೀಯ ಆಡಳಿತದ ಕಾರ್ಯ ವೈಖರಿಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಯಾಣಿಕರು, ತಕ್ಷಣವೇ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಸ್ವಚ್ಛತೆ ಮರೀಚಿಕೆ: ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಡೆಗಣಿಸಲಾಗಿದೆ. ಪ್ರಯಾಣಿಕರು ಎಲ್ಲೆಂದರಲ್ಲಿ ತಿಂಡಿ, ತಿನಿಸುಗಳ ಪ್ಲಾಸ್ಟಿಕ್‌ ಪೊಟ್ಟಣಗಳನ್ನು ಎಸೆಯುತ್ತಿದ್ದಾರೆ.

ಆಸನದ ವ್ಯವಸ್ಥೆ ಇಲ್ಲ

ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇಲ್ಲ. ಪ್ರಯಾಣಿಕರು ನಿಲ್ದಾಣದ ಮಧ್ಯದಲ್ಲೇ ಕುಳಿತುಕೊಳ್ಳುತ್ತಾರೆ. 

ಬೆಂಗಳೂರು ಮತ್ತು ಮಹದೇಶ್ವರ ಬೆಟ್ಟಕ್ಕೆ ಹೋಗುವ ಬಸ್‌ಗಳು ಮಾತ್ರ ಬರುತ್ತವೆ. ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಮತ್ತು ಹಬ್ಬಗಳಂದು ವಿಶೇಷ ಪೂಜೆ ನಡೆಯುವ ದಿನ ತಾತ್ಕಾಲಿಕ ಬಸ್ ನಿಲ್ದಾಣಲ್ಲಿ ಕಾಲು ಹಾಕುವುದಕ್ಕೂ ಜಾಗ ಇರುವುದಿಲ್ಲ. 

ನಿಲ್ದಾಣದಲ್ಲಿ ನೆರಳಿನ ವ್ಯವಸ್ಥೆ (ಶೆಡ್) ಮಾಡಿದ್ದಾರೆ. ಆದರೆ, ಅಲ್ಲಿ ಪ್ರಯಾಣಿಕರು ತಮ್ಮ ವಾಹನಗಳನ್ನು ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ನಿಲ್ಲುವುದಕ್ಕೆ ಆಗುತ್ತಿಲ್ಲ. ಮಳೆ, ಬಿಸಿಲಿಗೆ ನಿಲ್ಲಬೇಕಾದ ಸ್ಥಿತಿ ಇದ್ದು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು