ಮಂಜಿಫಾಲ್ಸ್‌ಗೆ ಗುರುಶಿಷ್ಯರಿಂದ ಮರುಜೀವ

3
ಬಿಳಿಗಿರಿರಂಗನ ಬನದಲ್ಲಿ ಈಗ ಜುಳು ಜುಳು ನಿನಾದ

ಮಂಜಿಫಾಲ್ಸ್‌ಗೆ ಗುರುಶಿಷ್ಯರಿಂದ ಮರುಜೀವ

Published:
Updated:
Deccan Herald

ಯಳಂದೂರು: ತಾಲ್ಲೂಕಿನ ಬಿಳಿಗಿರಿಯ ಬನದಲ್ಲಿ ಅನೇಕ ಝರಿಗಳು ಹರಿಯುತ್ತಿವೆ. ಇವುಗಳಲ್ಲಿ ಬಹುತೇಕ ಅಜ್ಞಾತವಾಗಿಯೇ ಉಳಿದಿವೆ. ಒಂದು ಕಾಲದಲ್ಲಿ ಈ ಭಾಗ ದಲ್ಲಿ ಚಿರಪರಿಚಿತ ವಾಗಿದ್ದ ಮಂಜಿಫಾಲ್ಸ್‌ ಈಗ ಮತ್ತೆ ಜಲರಾಗ ನುಡಿಸುತ್ತಿದೆ‌. ಹಸಿರು ತುಂಬಿದ ಕಣಿವೆ ನಡುವೆ ಜಿನುಗುತ್ತಿದ್ದ ಜಲಧಾರೆ ಈಗ ವೇಗವಾಗಿ ಧುಮ್ಮಿಕ್ಕುತ್ತಿದೆ.

ಇದಕ್ಕೆ ಕಾರಣರಾದವರು ಗುರು ಶಿಷ್ಯರು. ಯಳಂದೂರು ರಸ್ತೆಯ ಬೆಟ್ಟದ ಹಾದಿಯಲ್ಲಿ ತೆರಳುವಾಗ ಮಂಜಿಗುಂಡಿ ಹಾಡಿ ಇದೆ. ಇದರ ಸಮೀಪ ಎತ್ತರದ ಪಾಲವು ಗಿರಿ ಪ್ರವೇಶಕ್ಕೆ ಸ್ವಾಗತ ಕೋರುತ್ತದೆ. ಇಲ್ಲಿ ತುಸು ನಿಂತು ನಿಸರ್ಗದತ್ತ ಕಿವಿಗೊಟ್ಟು ಆಲಿಸಿದರೆ, ನೀರಿನ ಜುಳು ಜುಳು ನಿನಾದ ಕೇಳಿಸುತ್ತದೆ. ಇದೇ ಮಂಜಿಫಾಲ್ಸ್‌. ಆಳದಲ್ಲಿ ಜಲಪಾತ ಇರುವುದರಿಂದ ಇಲ್ಲಿಗೆ ಇಳಿಯುವುದು ತುಸು ಕಷ್ಟ.

ಸ್ವಚ್ಛಗೊಳಿಸಿದ ಶಿಕ್ಷಕರು: ನೀರಿನ ಝರಿಗೆ ಮರುಜೀವ ನೀಡಿದವರು ಗುರುಗಳು ಮತ್ತು ಶಿಷ್ಯರು. ತ್ಯಾಜ್ಯ, ಪ್ಲಾಸ್ಟಿಕ್‌ ಹಾಗೂ ಮದ್ಯದ ಬಾಟಲಿಗಳಿಂದಾಗಿ ನೀರಿನ ಹರಿವಿಗೆ ಅಡ್ಡಿಯಾಗಿತ್ತು. ಇದನ್ನು ನಿವಾರಿಸಿದವರು ಬಿಳಿಗಿರಿರಂಗನಬೆಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳು.

‘ಹತ್ತಾರು ವರ್ಷಗಳಿಂದ ಇಲ್ಲಿ  ಓಡಾಡುತ್ತಿದ್ದೇವೆ. ಮಂಜಿಫಾಲ್ಸ್ ಸುಮಾರು 20 ಅಡಿ ಆಳದಲ್ಲಿದೆ. ಆದರೆ, ಇದು ಇನ್ನೂ ಜನ ಸಾಮಾನ್ಯರಿಗೆ ಪರಿಚಿತವಾಗಿಲ್ಲ. ಹಾಗಿದ್ದರೂ ಇಲ್ಲಿ ಪ್ರವಾಸಿಗರು ಎಸೆದ ತ್ಯಾಜ್ಯ ತುಂಬಿತ್ತು. ಪ್ಲಾಸ್ಟಿಕ್‌, ಮದ್ಯದ ಬಾಟಲಿಗಳು ಹೆಚ್ಚಿದ್ದವು. ಎತ್ತರದ ಶಿಲಾಪದರ ಸಾಲು ಪಾಚಿ ಕಟ್ಟಿತ್ತು. ಗಾಂಧಿ ಜಯಂತಿ ದಿನ ದಂದು ಶ್ರಮದಾನ ಮಾಡುವ ಮೂಲಕ ಜಲಪಾತವನ್ನು ಸ್ವಚ್ಛ ಮಾಡಲಾಯಿತು. ಹಳೆಯ ವಿದ್ಯಾರ್ಥಿಗಳು ಈ ಕೆಲಸದಲ್ಲಿ ಕೈ ಜೋಡಿಸಿದರು’ ಎಂದು ಶಿಕ್ಷಕರಾದ ಚಂದ್ರಶೇಖರ್‌ ಮತ್ತು ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

ಮಾರ್ಗದರ್ಶಕರ ಸಹಾಯ, ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಇಲ್ಲಿಗೆ ಯಾರೂ ಪ್ರವೇಶಿಸಬಾರದು ಎಂದು ಅವರು ಎಚ್ಚರಿಸಿದರು.

ಅನುಮತಿ ಪಡೆಯುವುದು ಕಡ್ಡಾಯ:

ಬೆಟ್ಟದ ರಸ್ತೆ ಬದಿಯಲ್ಲಿ ಕಾಣುವ ಝರಿಗಳನ್ನು ವೀಕ್ಷಿಸಲು ಅಡ್ಡಿ ಇಲ್ಲ. ಆದರೆ, ಹೆಚ್ಚು ಸಮಯ ನಿಲ್ಲಬಾರದು. ಉಷ್ಣಾಂಶದಲ್ಲಿ ಏರಿಕೆ ಆಗಿರುವುದರಿಂದ ವನ್ಯಜೀವಿಗಳು ಬೀಡು ಬಿಡುವುದು ಈಗ ಸಾಮಾನ್ಯವಾಗಿದೆ. ಹಾಗಾಗಿ, ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಹುಲಿ ಸಂರಕ್ಷಿತ ಅರಣ್ಯದ ಒಳಭಾಗವನ್ನು ಪ್ರವೇಶಿಸಬಾರದು ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !