ಮಹದೇಶ್ವರನ ಸನ್ನಿಧಿಯಲ್ಲಿ ಭಕ್ತರಿಗೆ ಮುಜುಗರ, ಪುರುಷರ ಶೌಚಾಲಯಕ್ಕೆ ಮಹಿಳೆಯರ ಫಲಕ

7
ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲ

ಮಹದೇಶ್ವರನ ಸನ್ನಿಧಿಯಲ್ಲಿ ಭಕ್ತರಿಗೆ ಮುಜುಗರ, ಪುರುಷರ ಶೌಚಾಲಯಕ್ಕೆ ಮಹಿಳೆಯರ ಫಲಕ

Published:
Updated:
Deccan Herald

ಮಹದೇಶ್ವರ ಬೆಟ್ಟ: ಇಲ್ಲಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪುರುಷರು ಹಾಗೂ ಮಹಿಳೆಯರು ಒಂದೇ ಶೌಚಾಲಯಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಈಗ ಜಾತ್ರಾ ಸಮಯವಾಗಿರುವುದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಬೆಟ್ಟಕ್ಕೆ ಬರುತ್ತಿದ್ದು, ಮುಜುಗರ ಪಟ್ಟುಕೊಂಡೇ ಶೌಚಾಲಯಕ್ಕೆ ಹೋಗಬೇಕಾಗಿದೆ.

ಆಗಿದ್ದೇನು?: ಮಹದೇಶ್ವರ ಬೆಟ್ಟದ ಬಸ್‌ ನಿಲ್ದಾಣದಲ್ಲಿರುವ ಹಳೆಯ ಶೌಚಾಲಯವನ್ನು ಕೆಡವಿ, ಚಿಕ್ಕ ಕೆರೆಯ ಸಮೀಪದಲ್ಲಿ ಹೊಸ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ನಿಲ್ದಾಣದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ಶೌಚಾಲಯಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಟ್ಟಡದ ಒಂದು ಬದಿಯ ಗೋಡೆ ಜಖಂಗೊಂಡಿತ್ತು. ಹಾನಿಗೀಡಾಗಿದ್ದ ಗೋಡೆ, ಮಹಿಳೆಯರಿಗೆ ಮೀಸಲಾಗಿದ್ದ ಶೌಚಾಲಯದ ಭಾಗಕ್ಕೆ ಸೇರಿತ್ತು.

ಕಟ್ಟಡ ಹಾನಿಗೀಡಾಗಿ ವರ್ಷ ಕಳೆದರೂ ದುರಸ್ತಿಗೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿರಲಿಲ್ಲ. ಅಧಿಕಾರಿಗಳಿಗೆ ಮನವಿ ಮಾಡಿದರೆ, ಸಬೂಬು ಹೇಳುತ್ತಿದ್ದರೇ ವಿನಃ ಸರಿಪಡಿಸಲು ಮುಂದಾಗಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪುರುಷರ ಫಲಕದಲ್ಲಿ ಮಹಿಳೆ ಚಿತ್ರ: ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಶೌಚಾಲಯದ ಭಾಗ ಹಾನಿಗೀಡಾಗಿದ್ದರಿಂದ, ಮಹಾಲಯ ಅಮಾವಾಸ್ಯೆಯ ಪ್ರಯುಕ್ತ ನಡೆದ ಜಾತ್ರಾ ಮಹೋತ್ಸವದ ಸಮಯದಲ್ಲಿ ಪುರುಷರ ಶೌಚಾಲಯ ಎಂಬ ಫಲಕ ಇದ್ದಲ್ಲಿ ಮಹಿಳೆಯರ ಶೌಚಾಲಯ ಎಂಬ ಫಲಕ ಹಾಕಲಾಗಿದೆ. 

ಈ ಪ್ರದೇಶದ 600–700 ಮೀಟರ್‌ ವ್ಯಾಪ್ತಿಯಲ್ಲಿ ಶೌಚಾಲಯ ಇಲ್ಲದೇ ಇರುವುದರಿಂದ ಬಹಿರ್ದೆಸೆಗಾಗಿ ಪುರುಷರು, ಮಹಿಳೆಯರು ಇದೇ ಶೌಚಾಲಯವನ್ನು ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಹಿಳೆಯರ ಶೌಚಾಲಯ ಎಂದು ಬರೆದಿದ್ದರೂ, ಪುರುಷರೂ ಅದನ್ನು ಬಳಸುತ್ತಿದ್ದಾರೆ. 

ಈ ವಿಷಯದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.‌

ಭಕ್ತರ ಅಸಮಾಧಾನ

ಪ್ರಾಧಿಕಾರದ ಅಧಿಕಾರಿಗಳ ಉದಾಸೀನ ಧೋರಣೆಗೆ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿರಾರು ಜನರು ಬರುವ ಧಾರ್ಮಿಕ ಸ್ಥಳಗಳಲ್ಲಿ ಸೂಕ್ತ ಶೌಚಾಲಯ ವ್ಯವಸ್ಥೆ ಮಾಡದೇ ಇರುವುದರಿಂದ ಭಕ್ತರು ಮುಜುಗರ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಾಧಿಕಾರದ ಹೆಸರಿನಲ್ಲಿ ದೇವಾಲಯವನ್ನು ಅಭಿವೃದ್ಧಿ ಪಡಿಸುವ ಬದಲು ಹಾಳು ಮಾಡಲಾಗುತ್ತಿದೆ. ಸಾರ್ವಜನಿಕವಾಗಿ ಅಲ್ಲಲ್ಲಿ ಶೌಚಾಲಯಗಳನ್ನು ನಿರ್ಮಿಸದೆ, ಮೂಲೆಗಳಲ್ಲಿ ನಿರ್ಮಿಸಲಾಗಿದೆ. ಅಲ್ಲಿಗೆ ತೆರಳಲು ಸರಿಯಾದ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ ಎಂದು ಮೈಸೂರಿನಿಂದ ಬಂದಿದ್ದ ಭಕ್ತರಾದ ಮಂಜುಳಾ ಮತ್ತು ಶೀಲಾ ದೂರಿದರು.

ಬೆಟ್ಟದಲ್ಲಿ ಶೌಚಾಲಯಗಳನ್ನು ಹುಡುಕುವುದೇ ದೊಡ್ಡ ತಲೆನೋವು. ಚಿಕ್ಕ ಕೆರೆಯ ಬಳಿ ಇರುವ ಶೌಚಾಲಯದಲ್ಲಿ ಪುರುಷರು ತೆರಳುವ ಶೌಚಾಲಯಕ್ಕೆ ಮಹಿಳೆಯರ ಭಾವಚಿತ್ರವನ್ನು ಬಿಡಿಸಲಾಗಿದೆ. ಈ ಶೌಚಾಲಯವನ್ನು ಮಹಿಳೆಯರು ಬಳಸಬೇಕೋ ಅಥವಾ ಪುರುಷರು  ಬಳಸಬೇಕೋ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !