ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಕಲಿಕೆ ಜೊತೆ ಜೀವನ ಪಾಠ

Last Updated 14 ಮೇ 2018, 7:18 IST
ಅಕ್ಷರ ಗಾತ್ರ

ಕಲಬುರ್ಗಿ: ಪುಟಾಣಿ ಮಕ್ಕಳು ಗುಂಪುಗೂಡಿ ಅತ್ತ ಆಟದಲ್ಲಿ ಮಗ್ನವಾಗಿದ್ದರೆ, ಇತ್ತ ಚಿಣ್ಣರ ಇನ್ನೊಂದು ಗುಂಪು ಅಭಿನಯ, ಚಿತ್ರ ಬಿಡಿಸುವುರಲ್ಲಿ ತಲ್ಲೀಣ. ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ನೇಹಿತರ ಜೊತೆ ನಕ್ಕು ನಲಿಯುವ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಹೊಸ ಸಂಗತಿಗಳನ್ನು ಕಲಿಯುವ ಮಕ್ಕಳು ಮನೆಗೆ ಹೋಗಲು ಇಚ್ಛಿಸುವುದಿಲ್ಲ!

ನಗರದ ರಂಗಾಯಣ ಸಂಸ್ಥೆಯ ಆವರಣದಲ್ಲಿ ಮೂರು ವಾರದಿಂದ ನಡೆಯುತ್ತಿರುವ ಚಿಣ್ಣರ ಮೇಳ ವಿಶೇಷವಿದು. ಆಟ–ಪಾಠ ಅಲ್ಲದೇ ರಂಗಭೂಮಿ, ಸಿನಿಮಾ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬಲ್ಲ ಹಲವಾರು ವಿಷಯಗಳನ್ನು ಕಲಿಯುವ ಮಕ್ಕಳು ಮನೆಗಿಂತ ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆಯಲು ಇಷ್ಟಪಡುತ್ತಾರೆ.

ಚಿಣ್ಣರ ಮೇಳದಲ್ಲಿ ಭಾಗವಹಿಸಿರುವ 6 ರಿಂದ 13 ವರ್ಷದ ಮಕ್ಕಳು ರಂಗಭೂಮಿಯ ಎಲ್ಲಾ ಮಜಲುಗಳನ್ನು ಕಲಿಯುವುದರ ಜೊತೆಗೆ ವ್ಯಕ್ತಿತ್ವದಲ್ಲಿ ಆಗಬೇಕಿರುವ ಬದಲಾವಣೆ ಮತ್ತು ಸಮಾಜದಲ್ಲಿನ ವಿಭಿನ್ನ ಪರಿಸರ ಸಹ ಅರ್ಥ ಮಾಡಿಕೊಳ್ಳುತ್ತಿರುವುದು ವಿಶೇಷ. ಇದೆಲ್ಲವೂ ರಂಗ ಭಾಷೆಯಲ್ಲೇ ನಡೆಯುತ್ತಿರುವುದು ಗಮನಾರ್ಹ.

ಸಂಸ್ಥೆ ಆವರಣದಲ್ಲಿ ಎರಡೂ ಸಭಾಂಗಣದಲ್ಲಿ ಹಿರಿಯ ಮತ್ತು ಕಿರಿಯ ರಂಗಕರ್ಮಿಗಳು ಅಲ್ಲದೇ ಸಂಸ್ಥೆಯ ನಿರ್ದೇಶಕ ಮಹೇಶ ವಿ.ಪಾಟೀಲ ಸಹ ಮಕ್ಕಳಿಗೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡುತ್ತಾರೆ.

‘ಮಕ್ಕಳು ಸಾಮಾನ್ಯವಾಗಿ ಎರಡು ರೀತಿಯ ಪರಿಸರದಲ್ಲಿ ಬೆಳೆಯುತ್ತಾರೆ. ಒಂದು, ಶಾಲೆಯ ಪರಿಸರ. ಮತ್ತೊಂದು, ಮನೆಯ ವಾತಾವರಣ. ಕಲಿಕೆಯು ಕೆಲವೇ ವಿಷಯಕ್ಕೆ ಸೀಮಿತವಾಗಿರುತ್ತದೆ. ಮಕ್ಕಳಿಗೆ ಮಾನಸಿಕ ಮತ್ತು ಸಾಮಾಜಿಕ ಜೀವನದ ಮೇಲೆಯೂ ಅದು ಪರಿಣಾಮ ಬೀರುತ್ತದೆ’ ಎಂದು ಮಹೇಶ ವಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆ ಮತ್ತು ಶಾಲೆಯಲ್ಲಿ ಕಲಿಸಲಾರದ್ದನ್ನು ಇಲ್ಲಿ ಕಲಿಸಲು ಪ್ರಯತ್ನಿಸುತ್ತೇವೆ. ಕ್ರಿಯಾತ್ಮಕ ಚಟುವಟಿಕೆ, ರಂಗಸಜ್ಜಿಕೆ, ಹಾಡು–ನೃತ್ಯ, ಗೊಂಬೆ ಮತ್ತು ಆಕೃತಿಗಳ ನಿರ್ಮಾಣ, ಬೌದ್ಧಿಕ ಪರೀಕ್ಷೆ, ಸಮಸ್ಯೆಗೆ ಗೊಂದಲ–ಆತಂಕವಿಲ್ಲದೇ ಪರಿಹಾರ ಕಂಡುಕೊಳ್ಳುವ ಬಗೆ ಮುಂತಾದವುಗಳ ಬಗ್ಗೆ ಅವರನ್ನು ತಿಳಿಸಿ ಕೊಡುತ್ತೇವೆ’ ಎಂದು ಅವರು ಹೇಳಿದರು.

‘ಚಿಣ್ಣರ ಮೇಳದಲ್ಲಿ ಕಲಿತಿದ್ದು ಮಕ್ಕಳಿಗೆ ದೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ. ಅಲ್ಲದೇ ಕ್ರಮೇಣ ಅವರ ಜೀವನಶೈಲಿ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಶಾಲಾ ಪರೀಕ್ಷೆಯಲ್ಲಿ ಕೆಲವರು ಹೆಚ್ಚು ಅಂಕ ಗಳಿಸಿದ್ದು ಮತ್ತು ಜೀವನದಲ್ಲಿ ಶಿಸ್ತು ರೂಢಿಸಿಕೊಂಡ ಹಲವಾರು ಉದಾಹರಣೆಗಳಿವೆ’ ಎಂದು ಅವರು ತಿಳಿಸಿದರು.

ಮಕ್ಕಳ ಸಂಭ್ರಮ ಕಂಡು ಪೋಷಕರಿಗೆ ಖುಷಿ

ತಾಯಂದಿರ ದಿನಾಚರಣೆ ಪ್ರಯುಕ್ತ ಭಾನುವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರೂ ಸಹ ಪಾಲ್ಗೊಂಡಿದ್ದರು. ಶಿಬಿರಾರ್ಥಿ ಸಾಂಚಿ ಅವರ ತಂದೆ ರವಿಕುಮಾರ ಮಾತನಾಡಿ, ‘ನನ್ನ ಮಗಳಿಗೆ ರಂಗಾಯಣದ ಚಿಣ್ಣರ ಮೇಳ ತುಂಬಾ ಇಷ್ಟ. ಎರಡನೇ ವರ್ಷವೂ ಪಾಲ್ಗೊಂಡಿದ್ದು, ಆಕೆಯ ವ್ಯಕ್ತಿತ್ವದಲ್ಲಿ ಉತ್ತಮ ಬದಲಾವಣೆ ಗಮನಿಸಿದ್ದೇನೆ’ ಎಂದರು.

‘ನನ್ನ ಮಗಳು ‘ಅರ್ಹ’ ದಿನವೂ ಹೊಸ ಹೊಸ ನಾಟಕದ ಸಂಭಾಷಣೆ ಹೇಳುತ್ತಾಳೆ. ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಾಳೆ. ಆಕೆಯಲ್ಲಿನ ಬದಲಾವಣೆ ಸಂತೋಷ ತಂದಿದೆ’ ಎಂದು ಪೂಜಾ ತಿಳಿಸಿದರು.

**
ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮೇ 20ರಂದು ಮಕ್ಕಳು ಎರಡು ನಾಟಕಗಳನ್ನು ಪ್ರದರ್ಶಿಸುವರು. ಅವರಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ನೀಡಲಾಗಿದೆ
– ಮಹೇಶ ವಿ.ಪಾಟೀಲ, ನಿರ್ದೇಶಕ, ರಂಗಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT