ಚರಂಡಿ ವ್ಯವಸ್ಥೆ ಇಲ್ಲ, ರಸ್ತೆಯಲ್ಲೇ ಕೊಚ್ಚೆ ನೀರು

7
ಕೆಂಪನಪುರ ಗ್ರಾಮ ಪಂಚಾಯಿತಿಗೆ ಸೇರಿದ ನಡುಕಲಮೋಳೆಯ ದುಃಸ್ಥಿತಿ

ಚರಂಡಿ ವ್ಯವಸ್ಥೆ ಇಲ್ಲ, ರಸ್ತೆಯಲ್ಲೇ ಕೊಚ್ಚೆ ನೀರು

Published:
Updated:
Deccan Herald

ಸಂತೇಮರಹಳ್ಳಿ: ಮನೆಗಳ ಮುಂಭಾಗ, ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು, ಕೊಳಚೆ ನೀರನ್ನು ತುಳಿದು ತಿರುಗಾಡುತ್ತಿರುವ ನಿವಾಸಿಗಳು, ಗುಂಡಿ ಬಿದ್ದ ಸಂಪರ್ಕ ರಸ್ತೆ...

ಸಂತೇಮರಹಳ್ಳಿ ಸಮೀಪದ ಕೆಂಪನಪುರ ಗ್ರಾಮ ಪಂಚಾಯಿತಿಗೆ ಸೇರಿದ ನಡುಕಲಮೋಳೆಯ ಸ್ಥಿತಿ ಇದು. 

ಗ್ರಾಮದ ಯಾವ ಭಾಗದಲ್ಲಿಯೂ ಚರಂಡಿ ಹಾಗೂ ರಸ್ತೆಯ ವ್ಯವಸ್ಥೆ ಉತ್ತಮವಾಗಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆಯೇ ವಿನಾ, ಸಮಸ್ಯೆ ಬಗೆಹರಿದಿಲ್ಲ.

ಅಪೂರ್ಣ ಕಾಮಗಾರಿ: ಗ್ರಾಮದಲ್ಲಿ ಅಪೂರ್ಣಗೊಂಡಿರುವ ಚರಂಡಿ ಕಾಮಗಾರಿಯೇ ಸಮಸ್ಯೆಗೆ ಮೂಲ ಕಾರಣ. ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಸಂಪರ್ಕ ಕಲ್ಪಿಸುವಂತಹ ಚರಂಡಿ ನಿರ್ಮಿಸಿಲ್ಲ. ಇದರ ಪರಿಣಾಮವಾಗಿ ಮನೆಗಳ ಮುಂಭಾಗ ಚರಂಡಿ ನೀರು ಹರಿಯುತ್ತಿದೆ. ನಿವಾಸಿಗಳು ಅನಿವಾರ್ಯವಾಗಿ ಕೊಳಚೆ ನೀರನ್ನು ತುಳಿದು ಮನೆಗಳ ಹೊಸ್ತಿಲು ದಾಟಬೇಕಾಗಿದೆ.

ಮನೆಗಳ ಮುಂಭಾಗ ನಿಂತಿರುವ ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳು ರೋಗದ ಭಯದಲ್ಲಿದ್ದಾರೆ. ಮಳೆಗಾಲ ಆಗಿರುವುದರಿಂದ ಚರಂಡಿ ನೀರು ಹಾಗೂ ಮಳೆಯ ನೀರಿನ ಜೊತೆಗೆ ರಸ್ತೆಯು ಕೊಚ್ಚೆಮಯವಾಗಿದೆ. ಇದರಿಂದ ದ್ವಿಚಕ್ರ ವಾಹನಗಳು ಹಾಗೂ ಜನ ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆ ಬದಿ ನಿರ್ಮಿಸಿರುವ ಕುಡಿಯುವ ನೀರಿನ ತೊಂಬೆಯಿಂದ ಹೊರ ಬರುವ ನೀರು ಹರಿಯಲೂ ಚರಂಡಿ ವ್ಯವಸ್ಥೆ ಮಾಡಿಲ್ಲ.

ಅವೈಜ್ಞಾನಿಕವಾಗಿ ನಿರ್ಮಿಸಿರುವ ತೊಂಬೆಯಿಂದ ಹರಿಯುತ್ತಿರುವ ನೀರು ರಸ್ತೆ ಹಾಗೂ ನಿವೇಶನಗಳತ್ತ ನುಗ್ಗುತ್ತಿದೆ ಎಂದು ನಿವಾಸಿಗಳು ದೂರುತ್ತಾರೆ.

‌ಗ್ರಾಮದ ಬಡಾವಣೆಯಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯಿತಿಯವರು ಹೊಸದಾಗಿ ಚರಂಡಿ ನಿರ್ಮಿಸಿ ಬಡಾವಣೆಯ ಸಮಸ್ಯೆ ಬಗೆಹರಿಸಬೇಕು ಹಾಗೂ ಪಾಲ ಸೇತುವೆಯನ್ನು ದುರಸ್ತಿಪಡಿಸಬೇಕು ಎಂದು ಮರಿಸ್ವಾಮಿ ಹಾಗೂ ಮಹದೇವಶೆಟ್ಟಿ ಒತ್ತಾಯಿಸಿದರು.

ಸಮಸ್ಯೆಗಳ ಸರಮಾಲೆ

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪಾಲ ಸೇತುವೆ ಕುಸಿದು ಬಿದ್ದಿದೆ. ಇದನ್ನು ದುರಸ್ತಿಗೊಳಿಸಿಲ್ಲ. ಇದರಿಂದ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅನನುಕೂಲವಾಗಿದೆ. ರಸ್ತೆಯನ್ನೂ ಸರಿಪಡಿಸಿಲ್ಲ. ಪಾಲ ಸೇತುವೆಯ ಕಲ್ಲುಗಳು ಕುಸಿದು ಎಷ್ಟೋ ವರ್ಷಗಳಾಗಿವೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಬೀಳುವವರ ಸಂಖ್ಯೆ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ಕೆಲವರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿರುವ ನಿದರ್ಶನಗಳೂ ಇವೆ.

ಗ್ರಾಮದವರ ಈ ಸಮಸ್ಯೆಗೆ ಸಂಬಂಧಪಟ್ಟರು ಇದುವರೆಗೂ ಗಮನ ಹರಿಸಿಲ್ಲ. ರಸ್ತೆ ಸಮಸ್ಯೆ ಬಗೆಹರಿಸುವಂತೆ ನಿವಾಸಿಗಳು ಹಲವಾರು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !