4
ಮಾನಸ ಸರೋವರಕ್ಕೆ ಪ್ರವಾಸ; ಹವಾಮಾನ ವೈಪರೀತ್ಯದಿಂದ ತೊಂದರೆ

ಸಂಕಷ್ಟದಲ್ಲಿ ಚನ್ನಪಟ್ಟಣದ ಮೂವರು ಯಾತ್ರಿಕರು

Published:
Updated:
ಪ್ರವಾಸಕ್ಕೆ ಹೊರಟ ಯಾತ್ರಿಗಳನ್ನು ಚನ್ನಪಟ್ಟಣದಲ್ಲಿ ಬೀಳ್ಕೊಟ್ಟ ಸಂದರ್ಭ. (ಎಡದಿಂದ) ರಂಗಸ್ವಾಮಿ, ಶಿವರಾಮು, ಬೇವೂರು ರಾಮಕೃಷ್ಣ ಹಾಗೂ ಮಲ್ಲೇಶ್ ಇದ್ದಾರೆ

ರಾಮನಗರ: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಚನ್ನಪಟ್ಟಣದ ಮೂವರು ಸದ್ಯ ನೇಪಾಳದ ಸಿಮಿಕೋಟ್‌ ಪ್ರದೇಶದಲ್ಲಿ ಸಿಲುಕಿದ್ದು, ಅವರ ಕುಟುಂಬದವರನ್ನು ಆತಂಕಕ್ಕೀಡು ಮಾಡಿದೆ.

ಚನ್ನಪಟ್ಟಣದ ಬೇವೂರು ರಾಮಕೃಷ್ಣ, ಶಿವರಾಮು, ರಂಗಸ್ವಾಮಿ ಹಾಗೂ ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ಮಲ್ಲೇಶ್ ಅವರನ್ನು ಒಳಗೊಂಡ ತಂಡವು ಇದೇ 22ರಂದು ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರವಾಸ ಆರಂಭಿಸಿತ್ತು. ಶಂಕರ ಟ್ರಾವೆಲ್ಸ್ ಏಜೆನ್ಸಿಯು ತಲಾ ₨2.1 ಲಕ್ಷ ಪಡೆದು ಇವರನ್ನು 30 ದಿನದ ಪ್ರವಾಸಕ್ಕೆ ಕರೆದೊಯ್ದಿತ್ತು. ಮಾನಸ ಸರೋವರದಿಂದ ವಾಪಸ್‌ ಆಗುವ ಸಂದರ್ಭ ಪ್ರತಿಕೂಲ ಹವಾಮಾನದಿಂದಾಗಿ ಮೂವರು ಸಿಮಿಕೋಟ್‌ನಲ್ಲಿಯೇ ಉಳಿದಿಕೊಂಡಿದ್ದಾರೆ. ಅವರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್‌ ಆಗಿರುವುದು ಆತಂಕಕ್ಕೆ ಕಾರಣಾಗಿದೆ. ಪ್ರವಾಸಕ್ಕೆ ಕರೆದೊಯ್ದ ಏಜೆನ್ಸಿಯವರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರವಾಸಿಗರ ಕುಟುಂಬದವರು ದೂರಿದ್ದಾರೆ.

ಬೇವೂರು ರಾಮಕೃಷ್ಣ ಅನಾರೋಗ್ಯದ ಕಾರಣ ಪ್ರವಾಸವನ್ನು ಮೊಟಕುಗೊಳಿಸಿ ಚನ್ನಪಟ್ಟಣಕ್ಕೆ ವಾಪಸ್ ಆಗಿದ್ದರು. ಅವರು ತಮ್ಮ ಪ್ರವಾಸದ ಅನುಭವ ಹಂಚಿಕೊಂಡರು. ‘ವಿಮಾನದ ಮೂಲಕ ಬೆಂಗಳೂರಿನಿಂದ ದೆಹಲಿಗೆ ತೆರಳಿ, ಅಲ್ಲಿಂದ ನೇಪಾಳದ ಕಠ್ಮಂಡುವಿಗೆ ಹೋದೆವು. ಮೊದಲ ದಿನ ಸ್ಥಳೀಯವಾಗಿ ಸುತ್ತಾಡಿ ಬಳಿಕ ಗಂಝ್‌ ಪ್ರದೇಶಕ್ಕೆ ತೆರಳಿದೆವು. ನಂತರದ ದಿನದಲ್ಲಿ ಅಲ್ಲಿಂದ ಮಿನಿ ವಿಮಾನ ಹಾಗೂ ಹೆಲಿಕಾಪ್ಟರ್ ಮೂಲಕ ಸಿಮಿಕೋಟ್‌ ಮತ್ತು ಹಿಲ್ಸಾಗೆ ಹೋಗಿ ಬಳಿಕ ಡಾಕ್ಲಾಕೋಟ್‌ನಲ್ಲಿ ತಂಗಿದೆವು. ಅಲ್ಲಿಂದ ಮಾನಸ ಸರೋವರಕ್ಕೆ ಪ್ರವಾಸ ಬೆಳೆಸಿ, ಎರಡು ದಿನ ಸುತ್ತಾಟ ನಡೆಸಿದೆವು. ನಡುವೆ ಮಳೆ, ಚಳಿಯಿಂದಾಗಿ ತೊಂದರೆ ಅನುಭವಿಸಿದೆವು. ಕೆಲವೊಮ್ಮೆ ಊಟಕ್ಕೂ ಕಷ್ಟವಾಗಿತ್ತು’ ಎಂದು ವಿವರಿಸಿದರು.

‘ಅಷ್ಟರಲ್ಲಿ ಆಗಲೇ ನನ್ನ ಆರೋಗ್ಯ ಹದಗೆಟ್ಟಿತ್ತು. ಸ್ಥಳೀಯ ಹವಾಗುಣಕ್ಕೆ, ಊಟೋಪಚಾರಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಹೀಗಾಗಿ ಕಠ್ಮಂಡುವಿಗೆ ವಾಪಸ್ ಆಗಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದೆ. ಆದರೆ ಸ್ನೇಹಿತರು ಪ್ರವಾಸ ಮುಂದುವರಿಸಿದ್ದರು. ಅವರು ವಾಪಸ್ ಆಗುತ್ತಿದ್ದ ವೇಳೆ ಹವಾಮಾನ ವೈಪರೀತ್ಯದಿಂದ ಸಿಮಿಕೋಟ್‌ನಲ್ಲಿ ಸಿಲುಕಿದ್ದಾರೆ. ಸದ್ಯ ಅಲ್ಲಿಯೇ ಯಾತ್ರಿ ಭವನವೊಂದರಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಇದೆ. ಸೋಮವಾರ ಸಂಜೆ ಅವರೇ ಕರೆ ಮಾಡಿ ಮಾತನಾಡಿದ್ದಾರೆ. ಊಟೋಪಚಾರಕ್ಕೆ ತೊಂದರೆ ಇರುವುದಾಗಿ ಹೇಳಿಕೊಂಡಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು’ ಎಂದು ಮನವಿ ಮಾಡಿದರು.

‘ನಮ್ಮನ್ನು ಕರೆದೊಯ್ದಿದ್ದ ಟ್ರಾವೆಲ್ಸ್ ಏಜೆನ್ಸಿಯವರು ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಈಗ ಸಂಪರ್ಕಕ್ಕೂ ಸಿಗುತ್ತಿಲ್ಲ. ಸದ್ಯ ನನ್ನ ಲಗೇಜ್ ಕಠ್ಮಂಡುವಿನಲ್ಲಿಯೇ ಉಳಿದಿದೆ. ಅಗತ್ಯ ಬಿದ್ದರೆ ಮತ್ತೊಮ್ಮೆ ಅಲ್ಲಿಗೆ ಹೋಗಿ ಬರುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !