ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

151 ಡಿಜಿ ವಿಕಸನ ಕೇಂದ್ರ ಸ್ಥಾಪನೆ ಗುರಿ

ಗ್ರಾಮೀಣ ಯುವಜನರು, ವಿದ್ಯಾರ್ಥಿಗಳ ಕಲಿಕೆಗೆ ವರದಾನ
Last Updated 14 ಫೆಬ್ರುವರಿ 2023, 5:16 IST
ಅಕ್ಷರ ಗಾತ್ರ

ಚಿಂತಾಮಣಿ: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಡಿಜಿಟಲ್ ತಂತ್ರಜ್ಞಾನ ಕೌಶಲ ತರಬೇತಿ ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಡಿ.ಜಿ ವಿಕಸನ ಕೇಂದ್ರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಸಹಯೋಗದಡಿ ಈ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯು ರಾಜ್ಯದಾದ್ಯಂತ ಕಾರ್ಯರೂಪಕ್ಕೆ ಬಂದಿದ್ದು 7,400 ಗ್ರಾಮ ಪಂಚಾಯಿತಿಗಳಲ್ಲಿ ಕೇಂದ್ರ ತೆರೆಯುವ ಗುರಿ ಹೊಂದಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 151 ಕೇಂದ್ರ ತೆರೆಯುವ ಗುರಿ ಇದೆ. ಮೊದಲ ಹಂತದಲ್ಲಿ 67 ಗ್ರಾಮ ಪಂಚಾಯಿತಿ ಗಳಲ್ಲಿ ಯೋಜನೆ ಜಾರಿಗೊಂಡಿದೆ. ಚಿಂತಾಮಣಿ ತಾಲ್ಲೂಕಿನ ಭೂಮಿಶೆಟ್ಟಿ ಹಳ್ಳಿ, ಸಂತೇಕಲ್ಲಹಳ್ಳಿ, ಕೋರ್ಲಪರ್ತಿ, ಆನೂರು, ಕುರುಬೂರು, ಪರೆಮಾಚನ ಹಳ್ಳಿ, ಊಲವಾಡಿ ಗ್ರಾಮ ಪಂಚಾಯಿತಿ ಯಲ್ಲಿ ಡಿ.ಜಿ. ವಿಕಸನ ಕೇಂದ್ರಗಳನ್ನು ಆರಂಭಿಸಲಾಗಿದೆ.

‘ಭೂಮಿಶೆಟ್ಟಹಳ್ಳಿ ಮತ್ತು ಸಂತೇ ಕಲ್ಲಹಳ್ಳಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ಚಟುವಟಿಕೆ ನಡೆಯುತ್ತಿವೆ. ಉಳಿದ 5 ಪಂಚಾಯಿತಿಗಳಿಗೆ ಪರಿಕರ ಒದಗಿಸಲಾಗಿದೆ’ ಎಂದು ಶಿಕ್ಷಣ ಫೌಂಡೇಷನ್‌ನ ಜಿಲ್ಲಾ ಸಂಯೋಜಕ ಜಿ. ಕುಮಾರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮಗಳಲ್ಲಿ ವಿಶೇಷವಾಗಿ 12 ವರ್ಷದಿಂದ ಈ ಸೇವೆ ಲಭ್ಯವಿವೆ. 25 ವರ್ಷದ ಯುವಕರಿಗೆ ಇಂಟರ್ ನೆಟ್, ಜಿ–ಮೇಲ್, ಗೂಗಲ್ ಡ್ರೈವ್, ಸಾಫ್ಟ್‌ವೇರ್, ಹಾರ್ಡ್‌ವೇರ್, ಕಮ್ಯುನಿಕೇಷನ್, ಇನ್ ಪರ್ಮೇಷನ್, ಆನ್‌ಲೈನ್, ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಡಿಜಿಟಲ್ ತಂತ್ರಜ್ಞಾನ ಕೌಶಲ ತರಬೇತಿ ನೀಡಲಾಗುತ್ತದೆ. ಪ್ರತಿ ಭಾನುವಾರ 2 ಗಂಟೆ ತರಬೇತಿ ನೀಡಲಾಗುತ್ತದೆ.

ಗ್ರಾಮ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಪೂರಕವಾಗಿ ಸ್ಮಾರ್ಟ್ ಟಿವಿ, 4 ಆ್ಯಂಡ್ರಾಯಿಡ್ ಮೊಬೈಲ್, ಕ್ರೋಮ್ ಬುಕ್ (ಮಿನಿ ಲ್ಯಾಪ್‌ಟಾಪ್), ಡೆಲ್ ಬೋರ್ಡ್, ಮಾನಿಟರ್ ಹಾಗೂ ಇತರೆ ಪರಿಕರ ಒದಗಿಸಲಾಗಿದೆ. ಜಿಲ್ಲಾ ಪಂಚಾಯಿತಿಯಿಂದಲೇ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಆ್ಯಂಡ್ರಾಯಿಡ್ ಟಿ.ವಿ, ಮಿನಿ ಲ್ಯಾಪ್ ಟಾಪ್ ಹಾಗೂ ಮೊಬೈಲ್‌ಗಳಿಗೆ ನಿತ್ಯ ಜೀವನದಲ್ಲಿ ವಿವಿಧ ಕೌಶಲ ಅಭಿವೃದ್ಧಿಗೆ ಪೂರಕವಾಗುವ 6 ಮಾದರಿಗಳನ್ನು ‘ಶಿಕ್ಷಣ ಪೀಡಿಯಾ' ಎಂಬ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.

ಶಿಕ್ಷಣ ಪೀಡಿಯಾ ತಂತ್ರಾಂಶದಲ್ಲಿ ಶೈಕ್ಷಣಿಕ, ಕೌಶಲ, ಕಥೆ ಎಂಬ ಮೂರು ಭಾಗಗಳಿರುತ್ತವೆ. 8, 9, 10ನೇ ತರಗತಿ ಮತ್ತು ದ್ವಿತೀಯ ಪಿಯುನ ಶೈಕ್ಷಣಿಕ ಸಾಲಿನ ಪಠ್ಯಕ್ರಮ ಲಭ್ಯವಿರುತ್ತದೆ. ಡಿಎಸ್‌ಟಿಯಲ್ಲಿನ ಡಿಜಿಟಲ್ ಕೌಶಲ, ಇದಕ್ಕೆ ಸಂಬಂಧಪಟ್ಟ ವಿಡಿಯೊ ಪಾಠ, ನೋಟ್ಸ್, ಪ್ರಶ್ನೋತ್ತರವನ್ನು ವಿದ್ಯಾರ್ಥಿಗಳು ಕಲಿಯಬಹುದಾಗಿದೆ.

ಇದಕ್ಕಾಗಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅವರಿಗೊಂದು ಕಾರ್ಡ್ ನಂಬರ್ ನೀಡಲಾಗುತ್ತದೆ. ಕಾರ್ಡ್ ನಂಬರ್ ದಾಖಲು ಮಾಡಿದರೆ ಶಿಕ್ಷಣ ಪೀಡಿಯಾ ತೆರೆದುಕೊಳ್ಳುತ್ತದೆ. ಪ್ರೌಢಶಾಲಾ ಹಂತದಲ್ಲಿ ಇಂಗ್ಲಿಷ್‌, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಪಿಯು ವಿಷಯಗಳ ಪಠ್ಯವಿರುತ್ತದೆ.

ಶಾಲೆ ಆರಂಭಕ್ಕೆ ಮುನ್ನ ಅಥವಾ ಶಾಲೆ ನಂತರ ವಿದ್ಯಾರ್ಥಿಗಳು ವಿಕಸನ ಕೇಂದ್ರಗಳಲ್ಲಿ ಅಭ್ಯಾಸ ಮಾಡಬಹುದು. ಸಾಕಷ್ಟು ಹೊಸ ವಿಷಯ, ಪದ್ಧತಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ. ಇದುವರೆಗೆ 1,318 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ.

ಕೌಶಲ ವಿಭಾಗದಲ್ಲಿ 6 ಮಾದರಿಗಳಿರುತ್ತವೆ. ಕಥೆ ವಿಭಾಗದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆ ಕಥೆಗಳಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ತಯಾರಿ ಮಾಡಿಕೊಳ್ಳಬಹುದು. ಟಿ.ವಿ ಮಾನಿಟರ್ ಮೂಲಕ ನೋಟ್ಸ್ ತಯಾರಿಸಿಕೊಳ್ಳಬಹುದು. ಗ್ರಾಮೀಣ ಯುವಕರು ಬಿಡುವಿನ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬಹುದು.

ರೈತರಿಗೆ ತರಬೇತಿ: ಆಗ್ರೋ ಟೆಕ್ ಕಂಪನಿ ಸಹಯೋಗದಡಿ ರೈತರಿಗೆ ಕೃಷಿ ಕೌಶಲ ತರಬೇತಿ ಆರಂಭಿಸಲಾಗಿದೆ. ಪ್ರತಿ ಶನಿವಾರ ಬೆಳಿಗ್ಗೆ 11ರಿಂದ 12ಗಂಟೆವರೆಗೆ ಮಣ್ಣು ಪರೀಕ್ಷೆ, ಬಿತ್ತನೆಬೀಜ, ರೋಗ, ಕೊಯ್ಲು, ಮಾರುಕಟ್ಟೆ, ವಿವಿಧ ಬೆಳೆಗಳ ಮಾಹಿತಿ ಹೀಗೆ ಒಂದೊಂದು ದಿನ ಒಂದೊಂದು ವಿಷಯ ಕುರಿತು ತರಬೇತಿ ನೀಡಲಾಗುತ್ತದೆ. ರೈತರು ಬೆಳೆ ಮತ್ತು ಮಾರುಕಟ್ಟೆ ಮಾಹಿತಿ, ಜಾನುವಾರು ಮಾಹಿತಿ ಪಡೆಯಬಹುದು.

‘ಗ್ರಾಮ ಡಿಜಿ ವಿಕಸನ ಕೇಂದ್ರಗಳಿಂದ ವಿದ್ಯಾರ್ಥಿಗಳು, ಯುವಜನರಿಗೆ ಹಾಗೂ ರೈತರಿಗೆ ತುಂಬಾ ಅನುಕೂಲವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT