ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಸರಬರಾಜು ಘಟಕದಲ್ಲಿ ಬೆಂಕಿ

₹4 ಕೋಟಿ ಮೌಲ್ಯದ ವಿದ್ಯುತ್‌ ಪರಿವರ್ತಕಗಳಿಗೆ ಹಾನಿ l ನಗರದ ಕೇಂದ್ರಭಾಗದ ವಿವಿಧೆಡೆ ವಿದ್ಯುತ್‌ ವ್ಯತ್ಯಯ
Last Updated 17 ಫೆಬ್ರುವರಿ 2020, 22:11 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆನಂದರಾವ್ ವೃತ್ತದಲ್ಲಿರುವ ಕೆಪಿಟಿಸಿಎಲ್‌ ವಿದ್ಯುತ್ ಸರಬರಾಜು ಉಪಕೇಂದ್ರದಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಅಂದಾಜು ₹4 ಕೋಟಿ ಮೌಲ್ಯದ ಉಪಕರಣಗಳು ಸುಟ್ಟುಹೋಗಿವೆ. ಪರಿಣಾಮ, ಬೆಂಗಳೂರು ಕೇಂದ್ರಭಾಗದ ಶೇ 90ರಷ್ಟು ಪ್ರದೇಶಗಳು ಸೋಮವಾರ ಕತ್ತಲಲ್ಲಿ ಕಾಲ ಕಳೆಯುವಂತಾಯಿತು.

ಆನಂದ್‌ರಾವ್‌ ವೃತ್ತದಲ್ಲಿರುವ ಇದು 220 ಕೆವಿ ವಿದ್ಯುತ್‌ ಸರಬರಾಜು ಉಪಕೇಂದ್ರವಾಗಿದ್ದು, ಇದರಲ್ಲಿ ನಾಲ್ಕು ವಿದ್ಯುತ್‌ ಪರಿವರ್ತಕ
ಗಳಿವೆ (ಟ್ರಾನ್ಸ್‌ಫಾರ್ಮರ್‌). ಮೊದಲು, 20 ಎಂವಿಎ ವಿದ್ಯುತ್‌ ಪರಿವರ್ತಕದ ಒಂದು ಭಾಗದಲ್ಲಿ ಶಾರ್ಟ್‌ಸರ್ಕ್ಯೂಟ್‌ ಸಂಭವಿಸಿದೆ. ಈ ವೇಳೆ ಆಯಿಲ್‌ ಸೋರಿಕೆಯಾಗಿದ್ದರಿಂದ ಉಳಿದಪರಿವರ್ತಕಗಳಿಗೂ ಬೆಂಕಿ ವ್ಯಾಪಿಸಿದೆ. ಎರಡು ಟ್ರಾನ್ಸ್‌ಫಾರ್ಮರ್‌ಗಳಿಗೆ ಸ್ವಲ್ಪ ಹಾನಿಯಾಗಿದ್ದು, ಇನ್ನೆರಡು ಸಂಪೂರ್ಣ ಭಸ್ಮವಾಗಿವೆ.

ಸ್ಥಳಕ್ಕೆ ಬಂದ ಹೈಗ್ರೌಂಡ್ಸ್‌ ಅಗ್ನಿಶಾಮಕ ದಳದ ಸಿಬ್ಬಂದಿ, ಮಧ್ಯಾಹ್ನದ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

‘ಅವಘಡದಲ್ಲಿ ಉಪಕರಣಗಳು ಮಾತ್ರ ಸುಟ್ಟಿದ್ದು, ಉಳಿದಂತೆ ಯಾವುದೇ ಪ್ರಾಣಹಾನಿ ಆಗಿಲ್ಲ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಾಗಿ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.

‘ಊಟದ ಸಮಯದಲ್ಲಿ ವಿದ್ಯುತ್‌ ಪರಿವರ್ತಕದಿಂದ ಹೊಗೆ ಬರಲಾರಂಭಿಸಿತು. ಕೆಲವು ನಿಮಿಷಗಳ ನಂತರ ಬೆಂಕಿ ಕಾಣಿಸಿಕೊಂಡಿತು. ಆಯಿಲ್‌ ಸೋರಿಕೆಯಾಗುತ್ತಿದ್ದಂತೆ ವಿದ್ಯುತ್‌ ಪರಿವರ್ತಕಗಳು ಸ್ಫೋಟಿಸತೊಡಗಿದವು. ಬೆಂಕಿ ನಿಯಂತ್ರಣಕ್ಕೆ ತರಲು ಎರಡು ತಾಸು ಕಾರ್ಯಾಚರಣೆ ನಡೆಸಬೇಕಾಯಿತು’ ಎಂದು ಕೆಪಿಟಿಸಿಎಲ್‌ನ ಮುಖ್ಯ ಎಂಜಿನಿಯರ್‌ ಒಬ್ಬರು ತಿಳಿಸಿದರು. ಬೆಸ್ಕಾಂ ನಿರ್ವಹಣೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಚ್.ಎಂ. ಶಿವಪ್ರಕಾಶ್, ‘ಅವಘಡ ಸಂಭವಿಸಿರುವ ಮಾಹಿತಿ ಬರುತ್ತಿದ್ದಂತೆ, ಆನಂದ್‌ರಾವ್‌ ಉಪಕೇಂದ್ರದ ಹತ್ತಿರ ಇರುವ ವಿಕ್ಟೋರಿಯಾ ಉಪಕೇಂದ್ರ, ಕಂಠೀರವ ಸ್ಟೇಡಿಯಂ ಹಾಗೂ ಎನ್‌.ಆರ್.ಆಸ್. ಕೇಂದ್ರಕ್ಕೆ ಶೇ 60ರಷ್ಟು ವಿದ್ಯುತ್‌ ಲೋಡ್‌ ವರ್ಗಾಯಿಸಲಾಯಿತು. ಅಲ್ಲಿಂದ ಈ ಭಾಗಗಳಿಗೆ ವಿದ್ಯುತ್‌ ಪೂರೈಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಎರಡು ವಿದ್ಯುತ್‌ ಪರಿವರ್ತಕಗಳನ್ನು ಸರಿಪಡಿಸಲಾಗಿದ್ದು, ಶೇ 80ರಷ್ಟು ಪ್ರದೇಶಗಳಿಗೆ ವಿದ್ಯುತ್‌ ಪೂರೈಸಲಾಗುತ್ತಿದೆ. ಉಳಿದ ಶೇ 20ರಷ್ಟು ಸ್ಥಳಗಳಿಗೆ ಮಂಗಳವಾರ ಬೆಳಿಗ್ಗೆ ವೇಳೆಗೆ ವಿದ್ಯುತ್‌ ಪೂರೈಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT