ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ವಿತರಣೆ ವಿಳಂಬ ಬೇಡ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಏಕ್‌ರೂಪ್ ಕೌರ್ ಸೂಚನೆ
Last Updated 9 ಸೆಪ್ಟೆಂಬರ್ 2022, 2:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ಯಾವುದೇ ರೀತಿಯ ವಿಳಂಬ ಮಾಡದೇ ತಕ್ಷಣವೇ ಪರಿಹಾರ ನೀಡಬೇಕು. ತುರ್ತು ಕ್ರಮ ವಹಿಸಬೇಕು ಎಂದು ಆರ್ಥಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಡಾ.ಏಕ್‌ರೂಪ್ ಕೌರ್ ಅಧಿಕಾರಿ
ಸೂಚಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಳೆ ಹಾನಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಧಿಕಾರಿಗಳು ಮಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ, ಮಾಹಿತಿ ಕಲೆಹಾಕಿ ಪರಿಹಾರ್ ಪೋರ್ಟಲ್ ನಲ್ಲಿ ನಮೂದಿಸುವ ಕಾರ್ಯ ಪೂರ್ಣಗೊಳಿಸಬೇಕು. ಜೊತೆಗೆ ಮುಂದಿನ ದಿನದಲ್ಲಿ ಉಂಟಾಗುವ ಮಳೆ ಸಮಸ್ಯೆ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಬೆಳೆ ಹಾನಿ ಹೊರತುಪಡಿಸಿ ರಸ್ತೆ, ಸೇತುವೆ, ವಿದ್ಯುತ್ ಕಂಬ, ಸರ್ಕಾರಿ ಕಟ್ಟಡಗಳ ದುರಸ್ತಿ ಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಾಜಕಾಲುವೆ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯಲು ಎಲ್ಲಾ ರೀತಿಯ ಕ್ರಮ ತೆಗದುಕೊಳ್ಳಬೇಕು. ಯಾವುದೇ ಕೆರೆ ಏರಿ ಸೋರಿಕೆ ಹಾಗೂ ಬಿರುಕು ಬೀಡದಂತೆ ದುರಸ್ತಿ ಮಾಡಿಸಬೇಕು ಸೂಚಿಸಿದರು.

ಹಾನಿಯಾದ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಹಾನಿಗೊಳಗಾದ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿದರು.

ಅಧಿಕ ಮಳೆಯಾಗಿರುವ ಹಿನ್ನಲೆಯಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಮನೆಯ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ ಡಿಡಿಟಿ ಪೌಡರ್ ಸಿಂಪಡಿಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸುರಕ್ಷತಾ ಕ್ರಮ ತೆಗೆದುಕೊಳ್ಳಲು ಆರೋಗ್ಯ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದರು.

ಸಭೆಗೂ ಮುನ್ನ ಜಲಾವೃತವಾಗಿದ್ದ ಬೀಡಗಾನಹಳ್ಳಿ ಸಮೀಪದ ಸರ್ವಿಸ್ ರಸ್ತೆಗೆ ಭೇಟಿ ನೀಡಿ ವಿಕ್ಷೀಸಿ ಮಾಹಿತಿ ಪಡೆದರು. ನಂತರ ಕೊತ್ತನೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ನೀರು ನುಗ್ಗಿರುವ ಪ್ರದೇಶ ಹಾಗೂ ಹಾನಿಯಾದ ಮನೆಗಳ ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಪರಿಹಾರ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ವಾಪಸಂದ್ರ ಅಂಡರ್ ಪಾಸ್ ಸಮೀಪದ ರಸ್ತೆ ಹಾನಿ ಹಾಗೂ ಬೆಳೆ ಹಾನಿ ವೀಕ್ಷಿಸಿ ನಂತರ ಪಟ್ರೇನಹಳ್ಳಿ ಅಮಾನಿ ಗೋಪಾಲಕೃಷ್ಣ ಕೆರೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಾನಿಯಾದ ಬೆಳೆ ವೀಕ್ಷಣೆ ಮಾಡಿದರು.

ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಪೋಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ತಹಶೀಲ್ದಾರ್ ಗಣಪತಿಶಾಸ್ತ್ರಿ ಹಾಜರಿದ್ದರು.

ಮಳೆ ಹಾನಿ ವಿವರ

ಜಿಲ್ಲೆಯಲ್ಲಿ ಸೆ.1 ರಿಂದ 7 ರವರೆಗೆ 201.4 ಮಿ.ಮೀ ಮಳೆಯಾಗಿದೆ. ಸೆ.6 ರಂದು ಒಂದೇ ದಿನ ವಾಡಿಕೆಗಿಂತ ಶೇ 76.79 ರಷ್ಟು ಅಧಿಕ ಮಳೆ ಸುರಿದಿದೆ. ಇದರಿಂದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳು, ಜಾನುವಾರು ಜೀವಕ್ಕೆ ಹಾನಿ, ರಸ್ತೆ, ವಿದ್ಯುತ್ ಕಂಬ, ಅಂಗನವಾಡಿ ಕಟ್ಟಡ, ಶಾಲಾ ಕಟ್ಟಡ, ಮನೆಗಳಿಗೆ ಹಾನಿಯಾಗಿದೆ.

242.8 ಹೆಕ್ಟೇರ್‌ ನಷ್ಟು ಕೃಷಿ ಬೆಳೆ, 1129.08 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಒಂಬತ್ತು ಮನೆ ಸಂಪೂರ್ಣ ಕುಸಿದಿದೆ. 137 ಮನೆಗಳಿಗೆ ಹಾನಿಯಾಗಿದೆ. 116 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇದಲ್ಲದೇ 256 ವಿದ್ಯುತ್ ಕಂಬಗಳು, 10 ವಿದ್ಯುತ್ ಪರಿವರ್ತಕಗಳು, 22 ಸೇತುವೆಗಳು, 23 ಅಂಗನವಾಡಿಗಳಿಗೆ ಹಾನಿಯಾಗಿದೆ. 25 ಜಾನುವಾರು ಜೀವಕ್ಕೆ ಹಾನಿಯಾಗಿದೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT