ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ | ನೆಕ್ಕುಂದಿಕೆರೆ ಅಭಿವೃದ್ಧಿಗೆ ₹48.69 ಕೋಟಿ: ಸಚಿವ ಎಂ.ಸಿ.ಸುಧಾಕರ್

Published 5 ಫೆಬ್ರುವರಿ 2024, 16:16 IST
Last Updated 5 ಫೆಬ್ರುವರಿ 2024, 16:16 IST
ಅಕ್ಷರ ಗಾತ್ರ

ಚಿಂತಾಮಣಿ: ‘ನಗರದ ನೆಕ್ಕುಂದಿಕೆರೆಯನ್ನು ₹48.69 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಭಕ್ತರಹಳ್ಳಿ ಅರಸೀಕೆರೆ ಮತ್ತು ಎತ್ತಿನಹೊಳೆ ನೀರನ್ನು ಸಂಗ್ರಹಿಸಿ ನಗರದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಲಾಗುವುದು’ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ನೆಕ್ಕುಂದಿಕೆರೆಯಲ್ಲಿ ಹೂಳು ತೆಗೆಯುವುದು, ಕೆರೆಯ ಕೋಡಿಯಿಂದ ಚಿಕ್ಕರೆಡ್ಡಿಕೆರೆಗೆ ಸಂಪರ್ಕ ಕಲ್ಪಿಸುವ ಪೋಷಕ ಕಾಲುವೆಯ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ಭಕ್ತರಹಳ್ಳಿ-ಅರಸೀಕೆರೆಯು 37 ಎಂ.ಎಲ್.ಡಿ ನೀರಿನ ಸಾಮರ್ಥ್ಯ ಹೊಂದಿದೆ. ಅದನ್ನು 100 ಎಂ.ಎಲ್.ಡಿ ಗೆ ಏರಿಕೆ ಮಾಡಿ ಹೊಸ ಕೆರೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ವಿನ್ಯಾಸ ಮತ್ತು ಯೋಜನೆಯನ್ನು ರೂಪಿಸಲಾಗಿದೆ’ ಎಂದರು.

‘ಕೆರೆಯಲ್ಲಿ ದಶಕಗಳಿಂದಲೂ ಹೂಳು ಸಂಗ್ರಹವಾಗಿದ್ದು, ಸಮೀಕ್ಷೆಯ ಅಂದಾಜಿನಂತೆ 14 ಲಕ್ಷ ಕ್ಯೂಬಿಕ್ ಮೀಟರ್‌ನಷ್ಟು ಹೂಳು ತೆಗೆಯಬೇಕಾಗಿದೆ. ಹೂಳು ಒಳ್ಳೆಯ ಫಲವತ್ತಾದ ಮಣ್ಣಾಗಿದ್ದು, ಸುತ್ತಮುತ್ತಲ ರೈತರು ತಮ್ಮ ಹೊಲಗದ್ದೆಗಳಿಗೆ ಸಾಗಿಸಿಕೊಂಡು ಫಲವತ್ತಾಗಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಚಿಂತಾಮಣಿ ನಗರವು ವೇಗವಾಗಿ ಬೆಳೆಯುತ್ತಿದೆ. ಮಳೆಯ ಕೊರತೆ ಸಂದರ್ಭದಲ್ಲೂ ನೀರಿಗೆ ತೊಂದರೆಯಾಗದಂತೆ, ಮುಂದಿನ 30 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಆಗಿನ ಅವಶ್ಯಕತೆಗೆ ಅನುಗುಣವಾಗಿ ನೀರಿನ ಸಂಗ್ರಹಣೆಗೆ ಬೇಕಾದ ವಿನ್ಯಾಸ ತಯಾರಿಸಲಾಗಿದೆ. ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು’ ಎಂದರು.

‘ನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿರುವ ಮತ್ತೊಂದು ನೈಸರ್ಗಿಕ ಮೂಲ ಕನಂಪಲ್ಲಿ ಕೆರೆಯ ಸಾಮರ್ಥ್ಯ 16-17 ಎಂ.ಎಲ್.ಡಿ ಆಗಿದ್ದು, ಅದನ್ನು 35 ಎಂ.ಎಲ್.ಡಿಗೆ ಹೆಚ್ಚಿಸಲಾಗುವುದು. ಈ ಯೋಜನೆಗಳನ್ನು 10 ವರ್ಷಗಳ ಹಿಂದೆ ಮಾಡಬೇಕೆಂದು ಚಿಂತನೆ ನಡೆಸಲಾಗಿತ್ತು. ಆಗ ನಾನು ವಿರೋಧಪಕ್ಷದ ಶಾಸಕನಾಗಿದ್ದರಿಂದ ಅವಕಾಶ ಸಿಗಲಿಲ್ಲ. ಈಗ ಅವಕಾಶ ದೊರೆತಿದ್ದು ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು’ ಎಂದರು.

‘2006ರಲ್ಲೇ ನೆಕ್ಕುಂದಿಕೆರೆಯ ಹೂಳು ತೆಗೆಯಲು ಮತ್ತು ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ವಾಟರ್ ಫಿಲ್ಟರ್ ಟ್ರೀಟ್‌ಮೆಂಟ್ ಪ್ಲಾಂಟ್ ಮಾಡಲು ₹4 ಕೋಟಿ ಮಂಜೂರು ಮಾಡಿಸಿದ್ದೆ. 2012ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಹಿರಿಯ ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ಮಾಡಿಸಲಾಗಿತ್ತು. ಕೊನೆಯ ಹಂತದಲ್ಲಿ ಕೆರೆಗಳನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಕೈಬಿಡುವಂತಾಯಿತು’ ಎಂದು ತಿಳಿಸಿದರು.

‘ರಾಜಕೀಯ ಬದಲಾವಣೆಗಳಿಂದ ನಂತರದ 10 ವರ್ಷಗಳಲ್ಲಿ ನೆಕ್ಕುಂದಿಕೆರೆ ಸಂಪೂರ್ಣವಾಗಿ ಹಾಳಾಗಿದೆ. ಕೆರೆಯಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದವರು ಕೆರೆಯಲ್ಲಿದ್ದ ಒಳಚರಂಡಿಯ ಚೆಂಬರ್‌ಗಳನ್ನು ಒಡೆದು ಹಾಕಿದ್ದಾರೆ. ಕೆರೆಯಲ್ಲಿ ಗಿಡ ಬೆಳೆದು ಅನಾಥವಾಗಿದೆ’ ಎಂದು ವಿಷಾದಿಸಿದರು.

‘ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ನಗರವಾಸಿಗಳಿಗೆ ವಾಯುವಿಹಾರಕ್ಕೆ ಸೂಕ್ತ ವಾತಾವರಣ ನಿರ್ಮಾಣದ ಯೋಜನೆಯು ಇದೆ. ಅಧಿಕಾರಕ್ಕೆ ಬಂದ 9 ತಿಂಗಳಿನಲ್ಲೇ ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿದ್ದ ಬಹುತೇಕ ಯೋಜನೆಗಳ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮಕೈಗೊಳ್ಳಲಾಗಿದೆ’ ಎಂದರು.

ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭೆ ಸದಸ್ಯರಾದ ರಾಣಿಯಮ್ಮ, ಜಗದೀಶ್, ಹರೀಶ್, ಜಗನ್ನಾಥ್, ರಾಜಾಚಾರಿ, ಕುರುಟಹಳ್ಳಿ ಕೃಷ್ಣಮೂರ್ತಿ, ವಿ.ಅಮರ್, ಶ್ರೀನಿವಾಸ್, ಬಾಬುರೆಡ್ಡಿ, ಬಿಕ್ಕನಹಳ್ಳಿ ಶಿವಣ್ಣ, ಉಮೇಶ್, ತ್ಯಾಗರಾಜ್, ಲೋಕೇಶ್, ವೆಂಕಟಗಿರಿಕೋಟೆ ಸುರೇಶ್, ಶಿವಣ್ಣ, ಗಿರಿಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT