ಮಂಗಳವಾರ, ಫೆಬ್ರವರಿ 7, 2023
25 °C
ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವಿ.ಎಸ್.ಉಗ್ರಪ್ಪ ಆರೋಪ

ನರ್ಸಿಂಗ್ ಅಕ್ರಮ: ಸುಧಾಕರ್ ರಾಜೀನಾಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನರ್ಸಿಂಗ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನೈತಿಕ ಹೊಣೆಹೊತ್ತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರ್ಸಿಂಗ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿದೆ. ರಾಜ್ಯದಲ್ಲಿ 860 ನರ್ಸಿಂಗ್ ಶಾಲಾ, ಕಾಲೇಜುಗಳಿವೆ. ಇವುಗಳಲ್ಲಿ ಬೆಂಗಳೂರಿನಲ್ಲಿಯೇ 350 ಕಾಲೇಜುಗಳಿವೆ ಎಂದರು.

ಪರೀಕ್ಷಾ ಕೇಂದ್ರಗಳನ್ನು ಪಡೆಯಲು ಒಂದು ಕಾಲೇಜಿನವರು ₹ 25 ಲಕ್ಷ ನೀಡಬೇಕಂತೆ. ನಕಲು ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಾ.ಕೆ.ಸುಧಾಕರ್, ಮರು ಪರೀಕ್ಷೆ ಮಾಡಲಾಗುವುದು ಎಂದು ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಕರಣಗಳು ಸಹ ದಾಖಲಾಗಿಲ್ಲ ಎಂದು ಹೇಳಿದರು.

ಈ ವಿಚಾರವಾಗಿ ‘ನನಗೆ ಮೊದಲೇ ಸಂಶಯ ಇತ್ತು’ ಎಂದು ಸುಧಾಕರ್ ಹೇಳುತ್ತಾರೆ. ಸಂಶಯ ಇದ್ದ ಮೇಲೆ ಏಕೆ ಕ್ರಮ ಜರುಗಿಸಿಲ್ಲ. ಈ ಪ್ರಕರಣದ ನೈತಿಕ ಹೊಣೆಯನ್ನು ಯಾರು ಹೊರಬೇಕು? ಇದು ನಿಮ್ಮ ಜವಾಬ್ದಾರಿ ಅಲ್ಲವೇ? ತಮ್ಮ ಮೂಗಿನ ಅಡಿ ಇಷ್ಟೊಂದು ಭ್ರಷ್ಟಾಚಾರ ನಡೆದಿದೆ. ನಿಮಗೆ ಮೌಲ್ಯಗಳು ಮತ್ತು ಜವಾಬ್ದಾರಿ ಇದ್ದರೆ ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕಿತ್ತು ಎಂದರು.

ಸಚಿವ ಡಾ.ಕೆ.ಸುಧಾಕರ್ ಸಕಲಕಲಾವಲ್ಲಭ. ಅರ್ಹತೆ ಇಲ್ಲದಿದ್ದರೂ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದರು. ಇದನ್ನು ಪ್ರಶ್ನಿಸಿದ ನ್ಯಾಯಾಲಯದ ಮೊರೆ ಹೋದ ನೀರಾವರಿ ಹೋರಾಟಗಾರರನ್ನು ನಿಂದಿಸಿದರು. ಈಗ ಸುಧಾಕರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಯಾವ ಮುಖವಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕೋವಿಡ್ ವಿಚಾರದಲ್ಲಿ ₹ 2 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ಆಗಿರುವ ಬಗ್ಗೆ ಸದನದಲ್ಲಿ ಚರ್ಚೆ ಆಯಿತು‌. ಇದಕ್ಕೆ ಕಾರಣ ಸುಧಾಕರ್. ಇವರಿಗೆ ಸಚಿವರಾಗಿ ಮುಂದುವರಿಯುವ ನೈತಿಕತೆ ಇಲ್ಲ. ಆರ್‌ಎಸ್‌ಎಸ್‌ ಮತ್ತು ಬಿಜೆಪಗೆ ಪ್ರಜಾಪ್ರಭುತ್ವದ ಬಗ್ಗೆ ಮತ್ತು ಮೌಲ್ಯಗಳ ಬಗ್ಗೆ ಬದ್ದತೆ ಇದ್ದರೆ ಇವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು ಎಂದು ಆಗ್ರಹಿಸಿದರು.

ಚುನಾವಣೆಯ ಕಾರ್ಮೋಡಗಳು ಕಾಣುತ್ತಿವೆ. ರಾಜ್ಯ ಸರ್ಕಾರ ಎಲ್ಲ ರಂಗದಲ್ಲಿ ವಿಫಲವಾಗಿದೆ. ಹಣದ ಲೂಟಿಗೆ ಇಳಿದಿದೆ. ರಾಜ್ಯದಲ್ಲಿ ‌ಭ್ರಷ್ಟಾಚಾರದ ಗಂಗೋತ್ರಿ ಇದೆ. ಸೇಡಿನ ರಾಜಕಾರಣ ಹೆಚ್ಚಿದೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿ, ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಬಿಜೆಪಿಯವರು ಹಿಟ್ಲರ್ ಪ್ರವೃತ್ತಿಯುಳ್ಳವರು. ನೂರು ಬಾರಿ ಸುಳ್ಳು ಹೇಳಿ ಸತ್ಯ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ ಎಂದು ಟೀಕಿಸಿದರು.

ಯಾರೇ ಆಗಲಿ ಪಕ್ಷದ ನಾಯಕತ್ವ ಮತ್ತು ಪಕ್ಷದ ಕಾರ್ಯಕ್ರಮಗಳಿಗೆ ಬದ್ಧವಾಗಿದ್ದೇವೆ ಎಂದು ಹೇಳಿದರೆ ನಮ್ಮ ಪಕ್ಷದ ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಿ ಹೈಕಮಾಂಡ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ತೀರ್ಮಾನಿಸುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯ್ ಶಂಕರ್, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಶಿವಾನಂದ್, ಮುಖಂಡರಾದ ನಂದಿ ಅಂಜನಪ್ಪ, ಯಲುವಳ್ಳಿ ರಮೇಶ್, ವಿನಯ್ ಶ್ಯಾಮ್, ಗಂಗರೇಕಾಲುವೆ ನಾರಾಯಣ ಸ್ವಾಮಿ, ಭರಣಿ ವೆಂಕಟೇಶ್, ಲಾಯರ್ ನಾರಾಯಣ ಸ್ವಾಮಿ ಇತರರು ಗೋಷ್ಠಿಯಲ್ಲಿ ಇದ್ದರು.

‘ಸಮಯ ಸಾಧಕ ಮಾತು ಬೇಡ’
ಬಿಜೆಪಿ ಸರ್ಕಾರ ರಚನೆಗೆ ಸಿದ್ದರಾಮಯ್ಯ ಕಾರಣ ಎಂದು ದೂರಿರುವ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ‘ಯಾವುದೇ ರಾಜಕಾರಣಿ ಚುನಾವಣೆ ಬಂದಿತು ಎನ್ನುವ ಕಾರಣದಿಂದ ಸಮಯ ಸಾಧಕ ಮಾತುಗಳನ್ನು ಆಡಬಾರದು’ ಎಂದು ಹೇಳಿದರು. 

ಸಮ್ಮಿಶ್ರ ಸರ್ಕಾರ ಪತನಕ್ಕೆ ಬಿಜೆಪಿ ಕಾರಣ ಎಂದು ಸದನದಲ್ಲಿ ಕುಮಾರಸ್ವಾಮಿ ಅವರು ಹೇಳಿದ ಮಾತುಗಳು ದಾಖಲಾಗಿವೆ. ಈಗ ಚುನಾವಣೆಯ ಕಾರಣದಿಂದ ಸಿದ್ದರಾಮಯ್ಯ ಕಾರಣ ಎಂದು ಹೇಳುವುದು ಉತ್ತಮವಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು