ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮೂರ ತಿಂಡಿ | ಚಿಕ್ಕಬಳ್ಳಾಪುರ: ಗರಿಗರಿ ತುಪ್ಪದ ಮಸಾಲೆ ದೋಸೆ ಘಮ

Published 9 ಜೂನ್ 2024, 7:13 IST
Last Updated 9 ಜೂನ್ 2024, 7:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಯಾವ ಹೋಟೆಲ್‌ನಲ್ಲಿ ದೋಸೆ ಚೆನ್ನಾಗಿ ಇರುತ್ತದೆ ಅಥವಾ ಯಾವ ಹೋಟೆಲ್‌ನಲ್ಲಿ ಆಹಾರ ಚೆನ್ನಾಗಿರುತ್ತದೆ’–ಹೀಗೆ ನಗರಕ್ಕೆ ಬರುವ ಹೊಸಬರು ಚಿಕ್ಕಬಳ್ಳಾಪುರ ನಾಗರಿಕರನ್ನು ಕೇಳಿದರೆ, ಪುಟ್ಟೂರಾವ್ (ಅಭಿಷೇಕ್) ಹೋಟೆಲ್‌ನತ್ತ ಬೆರಳು ತೋರುವರು. 

ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿರುವ ಪುಟ್ಟೂರಾವ್ ಹೋಟೆಲ್‌ಗೆ 60 ವರ್ಷಗಳ ಇತಿಹಾಸವಿದೆ. 30 ವರ್ಷಗಳ ಕಾಲ ಬಜಾರ್ ರಸ್ತೆಯಲ್ಲಿದ್ದ ಹೋಟೆಲ್ ಕಳೆದ 30 ವರ್ಷಗಳಿಂದ ವಿಶ್ವೇಶ್ವರಯ್ಯ ವೃತ್ತದಲ್ಲಿದೆ.

ಯುಟ್ಯೂಬ್‌ಗಳಲ್ಲಿ ಮತ್ತು ರೀಲ್ಸ್‌ಗಳಲ್ಲಿಯೂ ಸಹ ಪುಟ್ಟೂರಾವ್ ಹೋಟೆಲ್‌ನ ದೋಸೆಯ ಬಗ್ಗೆ ಮಾಹಿತಿಗಳಿವೆ. ಆಹಾರಕ್ಕೆ ಸಂಬಂಧಿಸಿದಂತೆ ವರದಿಗಳನ್ನು ಮಾಡುವ ಯೂಟ್ಯೂಬರ್‌ಗಳು ಪುಟ್ಟೂರಾವ್ ಹೋಟೆಲ್‌ನ ದೋಸೆಯನ್ನು ಮತ್ತಷ್ಟು ಪ್ರಸಿದ್ಧಗೊಳಿಸಿದ್ದಾರೆ. ಇದು ದೋಸೆ ಪ್ರಿಯರ ನೆಚ್ಚಿನ ಹೋಟೆಲ್ ಎನಿಸಿದೆ.  

ಪುಟ್ಟೂರಾವ್ ಮತ್ತು ವೆಂಕಟರಾಮ್ ಸಹೋದರರು 60 ವರ್ಷಗಳ ಹಿಂದೆ ಹೋಟೆಲ್ ಆರಂಭಿಸಿದರು. ಈಗ ಅವರ ಕುಟುಂಬದ ಸೀತಾರಾಮ್ ‌ ಮುನ್ನಡೆಸುತ್ತಿದ್ದಾರೆ. 

ತಪ್ಪದ ಮಸಾಲೆ, ಖಾಲಿ ತುಪ್ಪ, ಖಾಲಿ ದೋಸೆ, ರವೆ ಇಡ್ಲಿ, ಮದ್ದೂರು ವಡೆ, ಇಡ್ಲಿ ವಡೆ, ಚಿತ್ರಾನ್ನ, ಚೌಚೌ ಬಾತ್–ಪುಟ್ಟೂರಾವ್ ಹೋಟೆಲ್‌ನ ಮೆನುವಿನಲ್ಲಿರುವ ತಿಂಡಿ ತಿನಿಸುಗಳಾಗಿವೆ. ತುಪ್ಪದ ಮಸಾಲೆ ದೋಸೆ, ಕಟ್ ಮಸಾಲೆ ಮತ್ತು ಬೆರಕೆ ಮಸಾಲೆ ದೋಸೆ, ಚಿತ್ರಾನ್ನ ಪ್ರಸಿದ್ಧವೇ ಆಗಿವೆ.

ಈರುಳ್ಳಿ ವಡೆಯೂ ಪ್ರಸಿದ್ಧಿ: ಪುಟ್ಟೂರಾವ್ ಹೋಟೆಲ್‌ನ ಈರುಳ್ಳಿ ಉದ್ದಿನವಡೆಯ ರುಚಿ ಬೆಂಗಳೂರಿನವರೆಗೂ ಹಬ್ಬಿದೆ. ಬೆರಕೆ ಮಸಾಲೆ ದೋಸೆ ಹೊರ ಜಿಲ್ಲೆಗಳಲ್ಲಿಯೂ ಪ್ರಸಿದ್ಧಿ. ಈ ತಿನಿಸು ಚಿಕ್ಕಬಳ್ಳಾಪುರ ಜಿಲ್ಲೆಯ ವಿಶೇಷಗಳಲ್ಲೊಂದು. ಮಸಾಲೆ ದೋಸೆಯನ್ನು ಚಿತ್ರಾನ್ನದೊಂದಿಗೆ ತಿನ್ನುವುದಕ್ಕೆ ಬೆರಕೆ ಮಸಾಲೆ ಎನ್ನುವರು. 

‘ನಾವು ಆರಂಭದಲ್ಲಿ ಬೇರೆ ಬೇರೆ ತಿಂಡಿಗಳನ್ನು ಮಾಡಿದೆವು. ಆದರೆ ನಮ್ಮಲ್ಲಿನ ದೋಸೆಗೆ ಹೆಚ್ಚು ಮನ್ನಣೆಯನ್ನು ಜನರು ನೀಡಿದರು. ಚಿಕ್ಕಬಳ್ಳಾಪುರದಲ್ಲಿ ಒಂದೊಂದು ಸಿಹಿ ತಿಂಡಿಗಳಿಗೆ ಒಂದೊಂದು ಅಂಗಡಿಗಳು ಪ್ರಸಿದ್ಧಿ. ಅದೇ ರೀತಿ ನಮ್ಮ ಹೋಟೆಲ್ ದೋಸೆ ಮತ್ತು ಚಿತ್ರಾನ್ನಕ್ಕೆ ಪ್ರಸಿದ್ಧವಾಗಿದೆ’ ಎಂದು ಸೀತಾರಾಮ್ ತಿಳಿಸುವರು.

‘ನಮ್ಮ ಹಿರಿಯರು ಬ್ರಾಂಡ್ ಸೃಷ್ಟಿ ಮಾಡಿದ್ದಾರೆ. ನಾವು ಸಹ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಅಡುಗೆಗೆ ಗುಣಮಟ್ಟದ ಎಣ್ಣೆ, ನಂದಿನಿ ತುಪ್ಪ ಬಳಸುತ್ತೇವೆ. ದೋಸೆಗೆ ಹಿಟ್ಟು ರೆಡಿ ಮಾಡಲು ನಮ್ಮದೇ ವಿಧಾನವಿದೆ. ದೋಸೆಯಲ್ಲಿ ಸ್ವಲ್ಪವೂ ಹುಳಿ ಬರುವುದಿಲ್ಲ. ಈ ಕಾರಣದಿಂದಲೇ ದೋಸೆಗಾಗಿ ಇಲ್ಲಿಗೆ ಗ್ರಾಹಕರು ಹೆಚ್ಚು ಬರುವರು’ ಎಂದು ವಿವರಿಸುವರು. 

ವಿದೇಶಿಯರಿಗೂ ಅಚ್ಚುಮೆಚ್ಚು

ಚಿಕ್ಕಬಳ್ಳಾಪುರಕ್ಕೆ ಬರುವ ಹೊರ ಜಿಲ್ಲೆಯ ಜನರಷ್ಟೇ ಇಲ್ಲಿನ ದೋಸೆಗೆ ಅಭಿಮಾನಿಗಳಲ್ಲ ವಿದೇಶಿಯರೂ ಸಹ ಪುಟ್ಟೂರಾವ್ ಹೋಟೆಲ್‌ನ ದೋಸೆಗೆ ಮನಸೋತಿದ್ದಾರೆ. 

ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮಕ್ಕೆ ಬರುವ ವಿದೇಶಿಗರು ಖರೀದಿ ಮತ್ತಿತರ ಕಾರಣಕ್ಕೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವರು. ಹೀಗೆ ಬರುವ ವಿದೇಶಿಗರಿಗೆ ಪುಟ್ಟೂರಾವ್ ಹೋಟೆಲ್ ದೋಸೆ ಇಷ್ಟ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ವಿದೇಶಿಯರು ಪುಟ್ಟೂರಾವ್ ಹೋಟೆಲ್‌ನ ಚಿತ್ರಾನ್ನ ಮತ್ತು ಮಸಾಲೆ ತುಪ್ಪದ ದೋಸೆ ಸವಿಯುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT