ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು | ಮಳೆ ಬಾರದೆ ಬತ್ತಿದ ಬೆಳೆ; ರೈತ ಕಂಗಾಲು

Published 15 ಆಗಸ್ಟ್ 2023, 6:43 IST
Last Updated 15 ಆಗಸ್ಟ್ 2023, 6:43 IST
ಅಕ್ಷರ ಗಾತ್ರ

ಎ.ಎಸ್.ಜಗನ್ನಾಥ್

ಗೌರಿಬಿದನೂರು: ಮುಂಗಾರು ಅವಧಿ ಮುಗಿದರೂ ತಾಲ್ಲೂಕಿನಲ್ಲಿ ನಿರೀಕ್ಷಿತ ಮಟ್ಟದ ಮಳೆ ಬೀಳದ ಕಾರಣ ಬಿತ್ತಿದ ಬೀಜ ಮೊಳಕೆಯೊಡೆಯದೆ, ನೆಟ್ಟ ಪೈರು ಕಮರಿ ಹೋಗಿದೆ. ಬೆಳೆಗಳು‌ ಬಾಡಿದ್ದು, ರೈತರ ಬದುಕು ಕಂಗಾಲಾಗಿದೆ.

ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಸಾಲ–ಸೋಲ ಮಾಡಿ ಹೊಲವನ್ನು ಹದಗೊಳಿಸಿಕೊಂಡು ಆರಂಭದಲ್ಲಿ ಬಿದ್ದ ಅತ್ಯಲ್ಪ‌ ಮಳೆಯಲ್ಲೇ ಬಿತ್ತನೆ ಮಾಡಿದ್ದರು. ಬಳಿಕ ಅದಕ್ಕೆ ಪೂರಕವಾದ ಹಸನು ಕಾರ್ಯವನ್ನು ಮಾಡಿದ್ದಾರೆ. ಆದರೆ ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ರೈತರ ಜಮೀನಿನಲ್ಲಿನ ಬೆಳೆಗಳು ಕಮರಿವೆ. ಬೇಸಾಯವನ್ನೇ ನಂಬಿಕೊಂಡಿರುವ ರೈತರು ಪರ್ಯಾಯ ಮಾರ್ಗವಿಲ್ಲದೆ ಚಿಂತಿಸುವಂತಾಗಿದೆ. ಸಂಕಷ್ಟದಲ್ಲಿ ಸರ್ಕಾರ ಕೈ ಹಿಡಿಯುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನ ‌ವಿವಿಧೆಡೆ ರೈತರು ಈ ಬಾರಿ ಮುಸಕಿನ ಜೋಳ (19125 ಹೆಕ್ಟೇರ್), ರಾಗಿ (2184 ಹೆಕ್ಟೇರ್), ನೆಲಗಡನೆ (687 ಹೆಕ್ಟೇರ್), ತೊಗರಿ (745 ಹೆಕ್ಟೇರ್), ಅವರೆ (630 ಹೆಕ್ಟೇರ್), ಅಲಸಂದೆ (60 ಹೆಕ್ಟೇರ್), ಹರಳು (46 ಹೆಕ್ಟೇರ್), ಕಬ್ಬು (130 ಹೆಕ್ಟೇರ್) ಸೇರಿದಂತೆ ಒಟ್ಟು 23,612 ಹೆಕ್ಟೇರ್ ಭೂ ಪ್ರದೇಶದಲ್ಲಿ ಶೇ 66.45 ರಷ್ಟು ಬೆಳೆಗಳನ್ನು ನಾಟಿ ಮಾಡಿದ್ದು, ಬೀಜಗಳು ಪೈರುಗಳಾಗಿವೆ.

ಆದರೆ ಪೈರುಗಳು ಬೆಳೆಯಲು ನೀರಿನ ಆಸರೆಯೇ ಇಲ್ಲದಂತಾಗಿದೆ. ಮಳೆಯನ್ನೇ ‌ನಂಬಿ ಬಿತ್ತನೆ ಮಾಡಿರುವ ರೈತರು ಕಮರಿರುವ ಪೈರುಗಳನ್ನು ನೋಡಿ ಕಂಗಾಲಾಗಿದ್ದಾರೆ. ವಿದ್ಯುತ್ ಲೋಡ್ ಶೆಡ್ಡಿಂಗ್ ನಡುವೆ ನೀರಾವರಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸುವುದು ರೈತರಿಗೆ ದೊಡ್ಡ ಸವಾಲಾಗಿದೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಈ ಬಾರಿ ತಾಲ್ಲೂಕಿನಲ್ಲಿ ನೀರಾವರಿ ಮತ್ತು ಖುಷ್ಕಿ ಎರಡೂ ಸೇರಿ ಒಟ್ಟು 35,532 ಹೆಕ್ಟೇರ್ ಭೂಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಮಳೆ ಅಭಾವದಿಂದಾಗಿ ಈ ಬಾರಿ 23,612 ಹೆಕ್ಟೇರ್ ಗುರಿ ಸಾಧಿಸಲಾಗಿದೆ. ಆದರೆ, ಆ ಬೆಳೆಯು ಸಹ ಇದೀಗ ನೀರಿಲ್ಲದೆ ಬಾಡುವ ಸ್ಥಿತಿ ತಲುಪಿದೆ. 

ಮಳೆಯಿಲ್ಲದ ಕಾರಣ ಗ್ರಾಮೀಣ ‌ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ರೈತಾಪಿ ವರ್ಗದವರು ಜಾನುವಾರುಗಳ ಪೋಷಣೆಗೆ ಚಿಂತಿಸುವಂತಾಗಿದೆ. ಮುಂಬರುವ ಕಷ್ಟದ ದಿನಗಳನ್ನು ಎದುರಿಸಲು ಸನ್ನದ್ಧರಾಗಬೇಕಾಗಿದೆ. ಜಲಮೂಲಗಳು ಬತ್ತುತ್ತಿದ್ದು ನೀರಿಗೆ ಹಾಹಾಕಾರ ಎದುರಾಗುವ ಆತಂಕದಲ್ಲಿದ್ದಾರೆ ಜನತೆ.

' ಕಳೆದ ಒಂದೂವರೆ ತಿಂಗಳ ಹಿಂದೆ ಜಮೀನಿನಲ್ಲಿ ಜೋಳ ಮತ್ತು‌ ನೆಲಗಡಲೆಯನ್ನು‌ ಬಿತ್ತನೆ ಮಾಡಿದ್ದೇನೆ. ಬೀಜಗಳು ಮೊಳಕೆಯೊಡೆದು ಪೈರುಗಳಾಗಿವೆ, ಇತ್ತೀಚೆಗೆ ರಸಗೊಬ್ಬರವನ್ನು ಹಾಕಲಾಗಿದೆ. ಆದರೆ ಮಳೆಯ ಕಣ್ಣಾ ಮುಚ್ಚಾಲೆಯಿಂದಾಗಿ ಬೆಳೆ ಕೈ ಸೇರುವ ಕನಸುಗಳು ಕಮರಿವೆ. ಸಾಲ ಮಾಡಿ ಹಾಕಿದ ಬಂಡವಾಳ ಕೈ ಕಚ್ಚುವ ಪರಿಸ್ಥಿತಿಯಲ್ಲಿದೆ. ಎರಡು ಮೂರು ದಿನಗಳಲ್ಲಿ ಮಳೆ ಬಾರದಿದ್ದರೆ ರೈತರ ಬದುಕು ದುಸ್ತರವಾಗಲಿದೆ ' ಎಂದು ರೈತ ಗಂಗಪ್ಪ ಹೇಳಿದ್ದಾರೆ.

'ಒಂದೆಡೆ ಮಳೆಯ ಅಭಾವ ಮತ್ತೊಂದೆಡೆ ವಿದ್ಯುತ್ ಸರಬರಾಜಿನಲ್ಲಿ ಲೋಡ್ ಶೆಡ್ಡಿಂಗ್ ಅವ್ಯವಸ್ಥೆ, ಇದರಿಂದಾಗಿ ರೈತಾಪಿ ವರ್ಗದವರು ಈ ಬಾರಿ ಕಣ್ಣಿರಿನಲ್ಲಿ ಕೈ ತೊಳೆತುವ ಪರಿಸ್ಥಿತಿ ‌ನಿರ್ಮಾಣವಾಗಿದೆ' ಎಂದು ರೈತ ಮಹಿಳೆ ಲಕ್ಷ್ಮಿದೇವಮ್ಮ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಕೇವಲ 260 ಮಿ.ಮೀ ಮಳೆ

2023ರ ಜನವರಿ ಮೊದಲ ವಾರದಿಂದ ಆಗಸ್ಟ್ ತಿಂಗಳ ಎರಡನೇ ವಾರದವರೆಗೆ ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಬಿದ್ದಿರುವ ಮಳೆಯ ಸರಾಸರಿ ಪ್ರಮಾಣವು ಕಸಬಾ 244 ಮಿ.ಮೀ ಡಿ.ಪಾಳ್ಯ 293 ಮಿ.ಮೀ ಹೊಸೂರು 197 ಮಿ.ಮೀ ಮಂಚೇನಹಳ್ಳಿ 284 ಮಿ.ಮೀ ನಗರಗೆರೆ 246 ಮಿ.ಮೀ ಮತ್ತು ತೊಂಡೇಬಾವಿ 295 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯ ನಿರ್ದೇಶಕ ಎಸ್.ಎಂ. ಮೋಹನ್ ಮಾಹಿತಿ ನೀಡಿದ್ದಾರೆ. ತಾಲ್ಲೂಕಿನಲ್ಲಿ ಸರಾಸರಿ 296ರಷ್ಟು ಮಿ.ಮೀಟರ್ ಮಳೆಯಾಗಬೇಕಿತ್ತು. ಆದರೆ ಕೇವಲ 260 ಮಿ.ಮೀ ಮಳೆಯಾಗಿದೆ.  ಮುಂದಿನ ನಾಲ್ಕೈದು ದಿನಗಳಲ್ಲಿ ಮಳೆ ಬೀಳುವ ಯಾವುದೇ ಮುನ್ಸೂಚನೆಗಳಿಲ್ಲ ಎಂದರು. 

ಗೌರಿಬಿದನೂರು ತಾಲ್ಲೂಕಿನ ರೈತರ ಭೂಮಿಯಲ್ಲಿ ಮಳೆಯಿಲ್ಲದೆ ಬಾಡಿರುವ ಬೆಳೆ
ಗೌರಿಬಿದನೂರು ತಾಲ್ಲೂಕಿನ ರೈತರ ಭೂಮಿಯಲ್ಲಿ ಮಳೆಯಿಲ್ಲದೆ ಬಾಡಿರುವ ಬೆಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT