ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನಗಳು

ಗೌರಿಬಿದನೂರು ನಗರಸಭೆ ವ್ಯಾಪ್ತಿಯ ಪಾರ್ಕ್‌ಗಳು ಅಕ್ರಮ ಚಟುವಟಿಕೆಗಳ ತಾಣ
Last Updated 16 ಜನವರಿ 2023, 5:19 IST
ಅಕ್ಷರ ಗಾತ್ರ

ಗೌರಿಬಿದನೂರು: ಇಲ್ಲಿನ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ದಶಕಗಳ ಹಿಂದೆ ನಿರ್ಮಾಣವಾಗಿರುವ ಉದ್ಯಾನಗಳು ಸಮರ್ಪಕವಾಗಿ ನಿರ್ವಹಣೆ ಇಲ್ಲದೆ ತ್ಯಾಜ್ಯಗಳ ಕೂಪವಾಗಿವೆ. ಅಕ್ರಮ ಚಟುವಟಿಕೆಗಳಿಗೆ ಆಸರೆಯಾಗಿವೆ. ಉದ್ಯಾನಗಳು ನೆಪ ಮಾತ್ರಕ್ಕೆ ಇದ್ದು ಜನರ ಬಳಕೆಗೆ ದೊರೆಯುತ್ತಿಲ್ಲ.

ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ವಾರ್ಡ್‌ಗಳಲ್ಲಿನ ಬಹುತೇಕ ಕಡೆಗಳಲ್ಲಿ ಉದ್ಯಾನಗಳು ಅಧ್ವಾನ ಎನ್ನುವ ಸ್ಥಿತಿ ಇದೆ. 12ನೇ ವಾರ್ಡ್ ವ್ಯಾಪ್ತಿಯ ವಿವಿ ಪುರಂನಲ್ಲಿರುವ ಮಹಾತ್ಮ ಗಾಂಧೀಜಿ ಉದ್ಯಾನ ಹಸಿರಾಗಿದ್ದರೂ ಸ್ವಚ್ಛತೆ ಇಲ್ಲ. 15ನೇ ವಾರ್ಡ್ ಅಭಿಲಾಷ್ ಲೇಔಟ್ ನಲ್ಲಿರುವ ಉದ್ಯಾನದಲ್ಲಿ ಎರಡು ವಿದ್ಯುತ್ ಪರಿವರ್ತಕಗಳಿವೆ. ಇಲ್ಲಿ ನಾಗರಿಕರ ಅನುಕೂಲಕ್ಕಾಗಿ ಬೆಂಚ್‌ಗಳನ್ನು ಅಳವಡಿಸಿ, ಗಿಡಗಳನ್ನು ನಾಟಿ ಮಾಡಿ ಅನುದಾನವನ್ನು ಬಳಕೆ ಮಾಡಿದ್ದರೂ ಕೂಡ ನಿರ್ವಹಣೆ ಕೊರತೆಯಿಂದ ಜನರು ಸುಳಿಯದಂತಹ ಸ್ಥಿತಿ ‌ಇದೆ.

ಸಂಜೆಯಾದರೆ ಮಾದಕ ವ್ಯಸನಿಗಳ ತಾಣ ಆಗುತ್ತದೆ. ವಿಷಜಂತುಗಳಿಗೆ ಆಸರೆಯಾಗಿದೆ. 21ನೇ ವಾರ್ಡ್‌ ಮುನೇಶ್ವರ ಬಡಾವಣೆಯಲ್ಲಿ 2 ಪ್ರತ್ಯೇಕ ಉದ್ಯಾನಗಳಿದ್ದರೂ ನಿರ್ವಹಣೆ ಕೊರತೆಯಿಂದ ಬಳಕೆಯಾಗುತ್ತಿಲ್ಲ. 2 ನೇ ವಾರ್ಡ್ ಕರೇಕಲಹಳ್ಳಿಯ ವಿದ್ಯಾನಗರದಲ್ಲಿರುವ ಉದ್ಯಾನದಲ್ಲಿ ಗಣೇಶ ದೇವಸ್ಥಾನ
ನಿರ್ಮಾಣವಾಗಿದೆ. ಅದರ ಸುತ್ತಲೂ ವ್ಯವಸ್ಥಿತವಾಗಿ ಪಾರ್ಕ್ ನಿರ್ಮಾಣ ಮಾಡಿದ್ದರೂ ಕೂಡ ನಿರ್ವಹಣೆಯ ಕೊರತೆಯಿಂದಾಗಿ ನಾಗರಿಕರು ಬಳಕೆಗೆ ಮೀನಮೇಷ ಎಣಿಸುತ್ತಿದ್ದಾರೆ. ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಪ್ರಮುಖವಾಗಿ 4 ಉದ್ಯಾನಗಳಿದ್ದರೂ ಅವುಗಳ‌ ನಿರ್ವಹಣೆಗೆ ನೀರಿನ ಸಮಸ್ಯೆ ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

ನಾಗರಿಕರ ವಾಯುವಿಹಾರ, ವಿಶ್ರಾಂತಿ, ಮಕ್ಕಳ ಆಟೋಟಗಳಿಗೆ ಬಡಾವಣೆಯಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂಬ ದೃಷ್ಟಿಯಿಂದ ಸರ್ಕಾರವು ಮೀಸಲಿರಿಸಿದ ಸ್ಥಳದಲ್ಲಿ ವಿಶೇಷ ಅನುದಾನದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿದೆ. ನಗರಸಭೆಯಿಂದ ಆಗಾಗ್ಗೆ ಸೂಕ್ತ ನಿರ್ವಹಣೆ ಮಾಡಿ ಸ್ವಚ್ಛತೆ ಕಾಪಾಡಬೇಕು. ಆದರೆ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಉದ್ಯಾನಗಳು ಕಸದ ಕೂಪಗಳಾಗಿವೆ.

ನಗರದಲ್ಲಿನ ಕೆಲವು ಉದ್ಯಾನಗಳು ಸ್ಥಳೀಯ ಪ್ರಭಾವಿಗಳ ಹಾಗೂ ಜನಪ್ರತಿನಿಧಿಗಳು ಒತ್ತುವರಿ ಸಹ ಮಾಡಿಕೊಂಡಿದ್ದಾರೆ. ಕಟ್ಟಡಗಳನ್ನು ನಿರ್ಮಿಸಿ ವಾಣಿಜ್ಯ ಉದ್ದೇಶದಿಂದ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒತ್ತುವರಿ ತೆರವು ಮಾತ್ರ ಆಗುತ್ತಲೇ
ಇಲ್ಲ.

ಹಂದಿ, ನಾಯಿಗಳ ಆವಾಸ: ನಗರ ವ್ಯಾಪ್ತಿಯ ಉದ್ಯಾನಗಳು ನಿರ್ವಹಣೆಯ ‌ಕೊರತೆಯಿಂದ ಅಧ್ವಾನವಾಗಿವೆ. ಒಂದೆಡೆ ತ್ಯಾಜ್ಯ ‌ಸಂಗ್ರಹಣಾ ಘಟಕಗಳಾಗಿದ್ದರೆ ಮತ್ತೊಂದೆಡೆ ಹಂದಿ ಮತ್ತು ಬೀದಿ ನಾಯಿಗಳ ಆವಾಸ ಸ್ಥಾನವಾಗಿವೆ. ಇದರಿಂದ ನಾಗರಿಕರಿಗೆ ನಿತ್ಯ ಸಂಕಷ್ಟ ತಪ್ಪಿದ್ದಲ್ಲ. ಈ ವಿಚಾರವಾಗಿ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ ಎನ್ನುತ್ತಾರೆ ನಾಗರಿಕರು.

ರೈಲ್ವೆ ಪ್ಲಾಟ್ ಪಾರಂ ಮತ್ತು ಹೊಸ ಬಡಾವಣೆಗಳು ಆಸರೆ: ನಗರದ ವಯೋವೃದ್ಧರು, ಮಹಿಳೆಯರು ಹಾಗೂ ನಾಗರಿಕರು ನಿತ್ಯ ಬೆಳಿಗ್ಗೆ ಹಾಗೂ ಸಂಜೆಯ ‌ವಾಯು‌ವಿಹಾರಕ್ಕೆ ನಗರ ವ್ಯಾಪ್ತಿಯಲ್ಲಿ ಯಾವುದೇ ಉದ್ಯಾನವಿಲ್ಲ. ನಗರ ಸಮೀಪದ ರೈಲ್ವೆ ‌ನಿಲ್ದಾಣದ ಪ್ಲಾಟ್‌ಪಾರಂ, ಹೊಸ ಬಡಾವಣೆಗಳು, ಬೈಪಾಸ್ ರಸ್ತೆಯೇ ವಾಯುವಿಹಾರಿಗಳಿಗೆ ನಡಿಗೆ ಪಥವಾಗಿದೆ.

ನಗರೋತ್ಥಾನದಡಿ ಅಭಿವೃದ್ಧಿ

ನಗರಸಭೆ ವ್ಯಾಪ್ತಿಯ ಉದ್ಯಾನಗಳು ಮತ್ತು ಸಿಎ ನಿವೇಶನಗಳಿರುವ ಸ್ಥಳಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ನಗರೋತ್ಥಾನ ಅನುದಾನದಡಿ ಹಂತ ಹಂತವಾಗಿ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುವುದು. ಪ್ರಸ್ತುತ ನಗರದಲ್ಲಿನ ಪಾರ್ಕ್‌ಗಳನ್ನು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಒತ್ತುವರಿ ಆಗಿರುವ ಸ್ಥಳಗಳನ್ನು ಗುರ್ತಿಸಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು.

ಡಿ.ಎಂ.ಗೀತಾ, ನಗರಸಭೆ ಆಯುಕ್ತೆ, ಗೌರಿಬಿದನೂರು

***

ನಿಖರ ಮಾಹಿತಿ ಇಲ್ಲ

ನಗರದ ವಿವಿಧ ವಾರ್ಡ್‌ಗಳಲ್ಲಿರುವ ಉದ್ಯಾನಗಳ ಸ್ಥಿತಿಗತಿ ಏನು ಎನ್ನುವ ಬಗ್ಗೆ ನಿಖರವಾದ ಮಾಹಿತಿ ತಿಳಿದಿಲ್ಲ. ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ಶುಚಿತ್ವದ ಬಗ್ಗೆ ಕ್ರಮ ವಹಿಸಲಾಗುವುದು. ಸ್ವಚ್ಛತೆ ಕಾಪಾಡುವಂತೆ ಸುತ್ತಲಿನ ನಿವಾಸಿಗಳಿಗೆ ತಿಳಿಸಲಾಗುವುದು.

ಎಂ.ವಿ.ಶಿವಣ್ಣ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ, ಗೌರಿಬಿದನೂರು

***

ನಾಗರಿಕರ ಬಳಕೆಗಿಲ್ಲ

ದಶಕಗಳಿಂದಲೂ ನಗರದಲ್ಲಿನ ಉದ್ಯಾನಗಳು ನಿಷ್ಕ್ರಿಯವಾಗಿವೆ. ನಾಗರಿಕರ ಬಳಕೆಗೆ ದೊರೆಯುತ್ತಿಲ್ಲ. ಒಂದೆಡೆ ಶುಚಿತ್ವದ ಕೊರತೆ ಮತ್ತೊಂದೆಡೆ ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು.

- ಎಚ್.ಪಿ.ನಟರಾಜ್, ನಾಗರಿಕರ, ಗೌರಿಬಿದನೂರು

***

ಇರುವ ಪಾರ್ಕ್‌ಗಳಿಗೆ ಸೌಲಭ್ಯ ಕಲ್ಪಿಸಿ

ನಗರದಲ್ಲಿ ಕನಿಷ್ಠ ಒಂದಾದರೂ ವ್ಯವಸ್ಥಿತವಾದ ಪಾರ್ಕ್ ಇಲ್ಲ. ಮಕ್ಕಳು, ವಯೋವೃದ್ಧರು, ಮಹಿಳೆಯರು ಮನರಂಜನೆ ಮತ್ತು ವಿಶ್ರಾಂತಿಗಾಗಿ ಬಳಕೆ ಆಗುವಂತಹ ಉದ್ಯಾನಗಳು ಅವಶ್ಯವಾಗಿವೆ. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಬೇಕು. ಈಗ ಇರುವ ಉದ್ಯಾನಗಳಿಗೆ ಮೂಲ ಸೌಕರ್ಯಗಳ್ನು ಕಲ್ಪಿಸಬೇಕು.

- ಬಾಬಾಜಾನ್, ಶಿಕ್ಷಕರು ಗೌರಿಬಿದನೂರು.

***
ನಗರದಲ್ಲಿ ಬಡಾವಣೆಗಳ‌ ನಿರ್ಮಾಣದ ವೇಳೆ ವೈಜ್ಞಾನಿಕವಾಗಿ ಪಾರ್ಕ್‌ಗಳಿಗೆ ಅವಶ್ಯವಿರುವ ಸ್ಥಳ ನಿಗದಿಪಡಿಸದಿರುವುದು ಬೇಸರದ ಸಂಗತಿ. ಸ್ಥಳೀಯ ‌ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅವರವರ ಸ್ವಾರ್ಥಕ್ಕೆ ‌ಅವುಗಳನ್ನು ‌ಬಳಕೆ ಮಾಡಿಕೊಂಡಿದ್ದಾರೆ. ನಾಗರಿಕರ ಹಿತದೃಷ್ಟಿಯಿಂದ ಇರುವ ಪಾರ್ಕ್‌‌ಗಳನ್ನು ನಿರ್ವಹಣೆ ಮಾಡದೆ ಮೀನ ಮೇಷ ಎಣಿಸುತ್ತಿದ್ದಾರೆ. ನಗರವು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ನಾಗರಿಕರಿಗೆ ಅವಶ್ಯಕ ಸೌಲಭ್ಯಗಳು ಲಭ್ಯವಾಗುತ್ತಿಲ್ಲ.

- ಗೀತಾಜಯಂಧರ್, ಪುರಸಭೆ ಮಾಜಿ ಅಧ್ಯಕ್ಷೆ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT