ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

7
ಗುಂತಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಮನುಷ್ಯನ ಅತಿಯಾದ ದುರಾಸೆಯಿಂದ ಪರಿಸರ ನಾಶವಾಗಿ ಪ್ರಕೃತಿ ಏರುಪೇರಾಗುತ್ತಿದೆ. ಮುಂಬರುವ ದಿನಗಳಲ್ಲಿ ಜನರು ಹೆಚ್ಚೆಚ್ಚು ಗಿಡ ಬೆಳೆಸಿ ಪರಿಸರದಲ್ಲಿ ಸಮತೋಲನ ಕಾಯ್ದುಕೊಂಡು ವಿಶ್ವವನ್ನು ರಕ್ಷಿಸಬೇಕಾಗಿದೆ’ ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಹೇಳಿದರು.

ತಾಲ್ಲೂಕಿನ ಗುಂತಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ‘ಬ್ಯಾಗ್ ರಹಿತ ದಿನ’ದ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಕೃತಿ ಮನುಷ್ಯನ ಜೀವನಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೇದುರೆ ನಡೆಯಲಿದೆ. ಇದು ನಡೆಯಬಾರದೆಂದರೆ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ’ ಎಂದು ತಿಳಿಸಿದರು.

‘ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ' ಎಂದು ಹೇಳಿದರು.

'ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ನಮಗೆಲ್ಲರಿಗೂ ಈಗ ಚೆನ್ನಾಗಿ ಗೊತ್ತಾಗಿರುವ ಸತ್ಯ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು’ ಎಂದು ತಿಳಿಸಿದರು.

ಪರಿಸರವಾದಿ ಸುಭಾನ್ ಮಾತನಾಡಿ, ‘ಈಗಾಗಲೇ ಪರಿಸರ ಅಸಮತೋಲನದಿಂದ ಮಳೆ ಕೊರತೆ, ಬರಗಾಲ, ಅಂತರ್ಜಲ ಕುಸಿತ, ಫ್ಲೋರೈಡ್ ಹಾವಳಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇವು ನಮ್ಮ ಮುಂದಿನ ಪೀಳಿಗೆಗೆ ಮುಂದುವರಿಯುವುದು ತಡೆಯುವ ಉದ್ದೇಶದಿಂದ ಪರಿಸರ ರಕ್ಷಿಸಬೇಕಾಗಿದೆ’ ಎಂದರು.

ಹಾರೋಬಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವೆಂಕಟ ರತ್ನಮ್ಮ, ಮುಖ್ಯಶಿಕ್ಷಕಿ ಎಸ್‌.ಸುಬ್ಬಲಕ್ಷ್ಮೀ, ಶಿಕ್ಷಕರಾದ ಕೆ.ಎಂ.ನರಸಿಂಹಮೂರ್ತಿ, ಎನ್.ವನಜಾ, ಎಂ.ಬಿ.ಅರುಣಕುಮಾರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !