ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಆಧುನಿಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ

ಕುರುಬೂರು–ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ನಿರ್ಮಾಣ: ₹ 15 ಲಕ್ಷ ವೆಚ್ಚ
Last Updated 13 ಆಗಸ್ಟ್ 2021, 5:13 IST
ಅಕ್ಷರ ಗಾತ್ರ

ಚಿಂತಾಮಣಿ: ನಗರ, ಪಟ್ಟಣದಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಯದ್ದೇ ಸಮಸ್ಯೆ. ನಿಧಾನವಾಗಿ ಗ್ರಾಮೀಣ ಪ್ರದೇಶದಲ್ಲೂ ಈ ಸಮಸ್ಯೆ ಎದುರಾಗುತ್ತಿದೆ. ಮುಂಜಾಗ್ರತೆಯಾಗಿ ಕೆಲವು ಗ್ರಾಮ ಪಂಚಾಯಿತಿ ಆಡಳಿತಗಳು ತ್ಯಾಜ್ಯ ವಿಲೇವಾರಿಗಾಗಿ ಕ್ರಮಕೈಗೊಳ್ಳುತ್ತಿವೆ.

ತಾಲ್ಲೂಕಿನ ಕುರುಬೂರು ಮತ್ತು ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯಿತಿ ಒಳಗೊಂಡಂತೆ ಆಧುನಿಕ ತಂತ್ರಜ್ಞಾನ ಅಳವಡಿಸಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಲಾಗಿದೆ. ಕುರುಬೂರಿನ ಗುಡ್ಡದ ಮೇಲೆ ₹ 15 ಲಕ್ಷ ವೆಚ್ಚದಲ್ಲಿ ಘಟಕದ ಕಟ್ಟಡ ನಿರ್ಮಾಣವಾಗಿದೆ.

ಒಂದು ಗ್ರಾಮ ಪಂಚಾಯಿತಿಗೆ ಒಂದೊಂದು ಕಸ ಸಂಗ್ರಹಣೆ ವಾಹನ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಯಂತ್ರಗಳು, ಮನೆ ಮನೆಗೂ ನೀಡಿರುವ ಡಸ್ಟ್ ಬಿನ್‌ಗಳು ಒಳಗೊಂಡು ಒಟ್ಟು ₹ 33 ಲಕ್ಷ ವೆಚ್ಚ ಮಾಡಲಾಗಿದೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಈ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಕುರುಬೂರು ಪಂಚಾಯಿತಿ ವ್ಯಾಪ್ತಿಯಲ್ಲಿ 9 ಗ್ರಾಮಗಳು ಬರುತ್ತವೆ. ಎರಡು ಪಂಚಾಯಿತಿಗಳ ಮನೆ ಮನೆಗೂ ಒಣಕಸ ಮತ್ತು ಹಸಿಕಸ ಸಂಗ್ರಹಣೆಗಾಗಿ 2 ಡಸ್ಟ್‌ಬಿನ್‌ ನೀಡಲಾಗಿದೆ. ಕಸ ಸಂಗ್ರಹಣೆಯ ವಾಹನ 2 ದಿನಕ್ಕೊಮ್ಮೆ ಗ್ರಾಮಗಳಿಗೆ ಸಂಗ್ರಹಣೆಗಾಗಿ ತೆರಳುತ್ತದೆ. ಕಸ ಸಂಗ್ರಹ ಹೆಚ್ಚಾಗಿದ್ದರೆ ಹೆಚ್ಚಿನ ಟ್ರಿಪ್‌ಗಳನ್ನು ಕಳುಹಿಸಲಾಗುತ್ತದೆ.

ಸಂಗ್ರಹಣೆಯಾದ ಕಸವನ್ನು ಘಟಕದಲ್ಲಿ ಒಣಕಸ ಮತ್ತು ಹಸಿಕಸವನ್ನಾಗಿ ಬೇರ್ಪಡಿಸಲಾಗುತ್ತದೆ. ಹಸಿ ಕಸ ಬಳಸಿ ಗೊಬ್ಬರ ತಯಾರಿಸಲಾಗುತ್ತದೆ. ಒಣ ಕಸವನ್ನು (ಇದರಲ್ಲಿ ಪ್ಲಾಸ್ಟಿಕ್ ಹೆಚ್ಚು) ಮಾರಾಟ ಮಾಡಲಾಗುತ್ತದೆ.

ಗ್ರಾಮಗಳಲ್ಲಿ ರೈತರು ಹಸಿ ಕಸ ನೀಡುವುದಿಲ್ಲ. ಅಂಗಡಿಗಳು, ರಸ್ತೆ, ಚರಂಡಿ, ಶಾಲೆಯ ಕಸ ಸಂಗ್ರಹಿಸಲಾಗುತ್ತದೆ. ಹಸಿಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಕೊಡುವಂತೆ ಸಾಕಷ್ಟು ಪ್ರಚಾರ ನಡೆಸಿ ಜಾಗೃತಿ ಮೂಡಿಸಿದ್ದರೂ ಸಮರ್ಪಕವಾಗಿ ಬೇರ್ಪಡಿಸುವುದಿಲ್ಲ ಎಂದು ಪಂಚಾಯಿತಿ ಸಿಬ್ಬಂದಿಹೇಳುತ್ತಾರೆ.

ತ್ಯಾಜ್ಯ ಸಂಗ್ರಹಣೆ ಘಟಕ ಸ್ಥಾಪಿಸಲು ನಿವೇಶನ ಇರಲಿಲ್ಲ. ಗ್ರಾಮದ ಸಮೀಪವಿರುವ ಗುಡ್ಡದ ಮೇಲೆ ಸಮತಟ್ಟು ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗಿದೆ. ವಾಹನ ತೆರಳಲು ರಸ್ತೆ ನಿರ್ಮಿಸಲಾಗಿದೆ. ಘಟಕದಲ್ಲಿ ನಾಲ್ಕು ಜನರು ಕೆಲಸ ಮಾಡುತ್ತಾರೆ. ನಿರ್ವಹಣೆಯನ್ನು ಸ್ವಸಹಾಯ ಸಂಘಕ್ಕೆ ವಹಿಸಲಾಗಿದೆ. 6 ತಿಂಗಳ ಕಾಲ ಗ್ರಾಮ ಪಂಚಾಯಿತಿ ಹಣಕಾಸಿನ ನೆರವು ನೀಡಲಿದೆ. ನಂತರ ಸಂಪೂರ್ಣವಾಗಿ ಸ್ವಸಹಾಯ ಸಂಘ ಘಟಕದ ನಿರ್ವಹಣೆ ಮಾಡುತ್ತದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ ತಿಳಿಸಿದರು.

ಗ್ರಾಮ ಪಂಚಾಯಿತಿಗಳು ದೂರದೃಷ್ಟಿಯಿಂದ ಆಧುನಿಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯೂ ಇಂತಹ ಘಟಕ ಸ್ಥಾಪಿಸಿಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯಿತಿಗೆ ಪ್ರತಿ ಹಂತದಲ್ಲೂ ತ್ಯಾಜ್ಯ ವಿಲೇವಾರಿ ತಲೆನೋವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಮುಖಂಡ ರಾಮಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT