ಶುಕ್ರವಾರ, ಆಗಸ್ಟ್ 19, 2022
25 °C

ಅರಸು ಶೋಧಿಸಿದ್ದ ಹೊಸಮುಖ ರೇಣುಕಾ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮಾಜಿ ಸಚಿವೆ ರೇಣುಕಾ ರಾಜೇಂದ್ರನ್ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು.  =ನಗರದ ಕೋಟೆ ಪ್ರದೇಶದಲ್ಲಿ ವಾಸಿಸುತ್ತಿದ್ದ ರೇಣುಕಾ ಅವರಿಗೆ ಮಧ್ಯಾಹ್ನ ಹೃದಯಾಘಾತವಾಗುತ್ತಿದ್ದಂತೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ರಾತ್ರಿ ನಿಧನರಾದರು.

ರೇಣುಕಾ ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಅವರ ಪತಿ ರಾಜೇಂದ್ರನ್ ಅವರು ಏಳು ವರ್ಷಗಳ ಹಿಂದೆ ನಿಧನರಾಗಿದ್ದರು. ರೇಣುಕಾ ಅವರ ಅಂತ್ಯಕ್ರಿಯೆ ಚಿಕ್ಕಬಳ್ಳಾಪುರದ ಸೋಲಾಲಪ್ಪ ದಿನ್ನೆ ಬಳಿ ಇರುವ ಅವರ ತೋಟದಲ್ಲಿ ಬುಧವಾರ ಸಂಜೆ ನೆರವೇರಲಿದೆ.

ರಾಜ್ಯದಲ್ಲಿ 1972 ರಲ್ಲಿ ಮೊದಲ ಬಾರಿಗೆ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಪರಿಪಾಲನೆಗಾಗಿ ರಾಜಕಾರಣದ ಗಂಧ ಗಾಳಿ ಗೊತ್ತಿಲ್ಲದ, ಸಾಮಾಜಿಕ ಶೋಷಣೆಗೊಳಪಟ್ಟ ಸಣ್ಣಪುಟ್ಟ ಜಾತಿಗಳ ಭರವಸೆಯ ಹೊಸ ಮುಖಗಳನ್ನು ರಾಜಕೀಯಕ್ಕೆ ಪರಿಚಯಿಸುವ ಕೆಲಸ ಮಾಡಿದ್ದರು.

ಆ ವೇಳೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಚಿಕ್ಕಬಳ್ಳಾಪುರದ ಪರಿಶಿಷ್ಟ ಕುಟುಂಬಕ್ಕೆ ಸೇರಿದ ರೇಣುಕಾ ರಾಜೇಂದ್ರನ್ ಅವರು ಸಚಿವ ಸ್ಥಾನಕ್ಕೆ ಏರುವ ಮೂಲಕ ಅರಸು ಅವರ ಕನಸು ನನಸು ಮಾಡಿ ರಾಜಕೀಯವಾಗಿ ಭರವಸೆ ಮೂಡಿಸಿದ್ದರು.

ಕೋಲಾರ ಜಿಲ್ಲೆಯಿಂದ ಗೆದ್ದು ವಿಧಾನಸೌಧದ ಮೆಟ್ಟಿಲು ಹತ್ತಿದ್ದ ಮೂರು ದಲಿತರ ಪೈಕಿ ರೇಣುಕಾ ರಾಜೇಂದ್ರನ್ ಕೂಡ ಒಬ್ಬರು. ಆಗ ಅವರು ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಶಾಸಕಿಯಾಗಿ ವಿಧಾನಸೌಧ ಪ್ರವೇಶಿಸಿದ್ದರು.

ಸ್ವಾತಂತ್ರ್ಯ ಹೋರಾಟಗಾರ ಚಿನ್ನಪ್ಪ ಅವರ ಪುತ್ರಿಯಾದ ರೇಣುಕಾ ಪರಿಶಿಷ್ಟ ಜಾತಿ ಮೀಸಲಾಗಿದ್ದ ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 1978ರಲ್ಲಿ ಎರಡನೇ ಬಾರಿ ಚಿಕ್ಕಬಳ್ಳಾಪುರದಲ್ಲಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋದರ ಮಾವ, ಜನತಾಪಕ್ಷದ ಎ.ಮುನಿಯಪ್ಪ ಅವರ ವಿರುದ್ದ ಗೆದ್ದು ಎರಡನೇ ಬಾರಿಗೆ ಶಾಸಕಿಯಾದರು.

1979ರಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಕಾಂಗ್ರೆಸ್ ಅಧಿನಾಯಕಿ ಇಂದಿರಾ ಗಾಂಧಿಗೆ ಸಡ್ಡು ಹೊಡೆದರು. ಈ ವೇಳೆ ಅರಸು ಸಂಪುಟದ ಬಹುಪಾಲು ಸಚಿವರು ಅವರಿಗೆ ನಿಷ್ಠರಾದರೆ, ಬೆರಳೆಣಿಕೆಯ ಮಂದಿ ಇಂದಿರಾ ನೇತೃತ್ವದ ಕಾಂಗ್ರೆಸ್‌ಗೆ ಹೋದರು. ಆ ಪೈಕಿ ರೇಣುಕಾ ರಾಜೇಂದ್ರನ್ ಕೂಡ ಒಬ್ಬರು.

1980ರಲ್ಲಿ ರಾಜ್ಯ ರಾಜಕಾರಣದ ಅನೇಕ ಪಲ್ಲಟಗಳ ನಡುವೆ ಆರ್. ಗುಂಡೂರಾವ್ ಮುಖ್ಯಮಂತ್ರಿ ಗಾದಿಗೇರಿದಾಗ ಅವರ ಸರ್ಕಾರದಲ್ಲಿ ರೇಣುಕಾ ರಾಜೇಂದ್ರನ್ ಅವರಿಗೆ ಸಚಿವರಾಗುವ ಭಾಗ್ಯ ಒದಗಿ ಬರುತ್ತದೆ. ಆದರೆ ಅದು ಕೊನೆವರೆಗೆ ಉಳಿಯುವುದಿಲ್ಲ.

1982ರಲ್ಲಿ ವಕೀಲ ಎ.ಕೆ. ಸುಬ್ಬಯ್ಯ ಅವರು ಇವರ ವಿರುದ್ಧ ‘ಒಬ್ಬ ಪೊಲೀಸ್ ಪೇದೆಯಿಂದ, ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ ₹25 ಸಾವಿರ ಪಡೆದುಕೊಂಡು ಭ್ರಷ್ಟಾಚಾರ ಎಸಗಿದ್ದಾರೆ’ ಎಂದು ಆರೋಪಿಸುತ್ತಾರೆ. ಇದನ್ನು ರೇಣುಕಾ ರಾಜೇಂದ್ರನ್ ಅವರು ಅಲ್ಲಗಳೆದರೂ ಆ ಸಂದರ್ಭದಲ್ಲಿ ಅವರು ರಾಜೀನಾಮೆ ನೀಡಬೇಕಾಯಿತು. ಕಾಲಾಂತರದಲ್ಲಿ ಅವರು ಆರೋಪ ಮುಕ್ತರಾದರೂ ರಾಜಕೀಯ ಜೀವನದಲ್ಲಿ ಆ ಕಳಂಕ ಹಾಗೇ ಉಳಿಯಿತು.

1989ರಲ್ಲಿ ರೇಣುಕಾ ಅವರು ಪುನಃ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದು, ಜನತಾ ಪಕ್ಷದ ಕೆ.ಎಂ. ಮುನಿಯಪ್ಪ ಅವರನ್ನು ಪರಾಭವಗೊಳಿಸಿ ಮೂರನೇ ಬಾರಿಗೆ ಶಾಸಕಿಯಾದರು.

ಜಿಲ್ಲೆಯಲ್ಲಿ ಈವರೆಗೆ ಮೂರು ಮಹಿಳೆಯರು ಶಾಸಕಿಯರಾಗಿದ್ದಾರೆ. ಐದು ಬಾರಿ ಮಹಿಳೆಯರು ಗೆಲುವು ಸಾಧಿಸಿದ್ದರೂ ಅವರಲ್ಲಿ ರೇಣುಕಾ ರಾಜೇಂದ್ರನ್ ಅವರೇ ಮೂರು ಸಲ ಶಾಸಕಿಯಾಗಿದ್ದರು ಎಂಬುದು ವಿಶೇಷ. ಐದು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ರೇಣುಕಾ ಅವರು ಕಳೆದ ಒಂದು ದಶಕದಿಂದ ಈಚೆಗೆ ರಾಜಕೀಯದಿಂದ ನೇಪಥ್ಯಕ್ಕೆ ಸರಿದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು