ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದಿಂದ ಜಿಲ್ಲೆಗೆ ನುಸುಳುತ್ತಿದೆ ಸೇಂದಿ

ಒಂದು ವರ್ಷದಲ್ಲಿ ಅಬಕಾರಿ ಇಲಾಖೆಯಿಂದ 2,084 ಕಡೆಗಳಲ್ಲಿ ದಾಳಿ
Last Updated 28 ಏಪ್ರಿಲ್ 2021, 3:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ಗಾವಲಿನ ನಡುವೆಯೂ ಅಂಧ್ರಪ್ರದೇಶದ ಸೇಂದಿ ಜಿಲ್ಲೆಯೊಳಗೆ ಪ್ರವೇಶಿಸುತ್ತಿದೆ. ಅದರಲ್ಲಿಯೂ ಗಡಿಭಾಗಗಳಲ್ಲಿಯೇ ಈ ಸೇಂದಿ ಪ್ರಕರಣಗಳು ಕಂಡು ಬರುತ್ತಿವೆ.

ಏಪ್ರಿಲ್ 2020ರಿಂದ ಮಾರ್ಚ್ 2021ರ ನಡುವೆ ಜಿಲ್ಲೆಯ ಅಬಕಾರಿ ಇಲಾಖೆ 223 ಲೀಟರ್ ಸೇಂದಿಯನ್ನು ವಶಪಡಿಸಿಕೊಂಡಿದೆ. ರಾಜ್ಯದ ಗಡಿಭಾಗಗಳಿಗೆ ಹೊಂದಿಕೊಂಡಿರುವ ಆಂಧ್ರ ಗಡಿಯಲ್ಲಿಯೂ ಸೇಂದಿ ಅಂಗಡಿಗಳು ಇವೆ. ಇಲ್ಲಿಂದ ಕದ್ದು ಮುಚ್ಚಿ ಸೇಂದಿಯನ್ನು ಕೆಲವರು ತರುವರು.

ಅಬಕಾರಿ ಇಲಾಖೆಯ ಗೌರಿಬಿದನೂರು ವಲಯದಲ್ಲಿ 72 ಲೀಟರ್, ಬಾಗೇಪಲ್ಲಿ 44 ಲೀಟರ್, ಚಿಕ್ಕಬಳ್ಳಾಪುರ ಉಪವಿಭಾಗ ವ್ಯಾಪ್ತಿಯಲ್ಲಿ 52 ಲೀಟರ್, ಚಿಂತಾಮಣಿ ಉಪವಿಭಾಗ ವ್ಯಾಪ್ತಿಯಲ್ಲಿ 26 ಲೀಟರ್ ಮತ್ತು ಜಂಟಿ ಆಯುಕ್ತರ ಕಚೇರಿ ನಡೆಸಿದ ದಾಳಿಯಲ್ಲಿ 29 ಲೀಟರ್ ಸೇಂದಿಯನ್ನು ವಶಕ್ಕೆ ಪಡೆಯಲಾಗಿದೆ.

3,190 ಕೆ.ಜಿ ಗಾಂಜಾ: ಬಾಗೇಪಲ್ಲಿ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ 3,190 ಕೆ.ಜಿ ಗಾಂಜಾವನ್ನೂ ವಶಕ್ಕೆ ಪಡೆಯಲಾಗಿದೆ. ಏಪ್ರಿಲ್ 2020ರಿಂದ ಮಾರ್ಚ್ 2021ರ ನಡುವೆ ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಒಟ್ಟು 2,084 ದಾಳಿಗಳು ಸಹ ನಡೆದಿವೆ. ಗೌರಿಬಿದನೂರು, ಚಿಂತಾಮಣಿ ಮತ್ತು ಬಾಗೇಪಲ್ಲಿ ವ್ಯಾಪ್ತಿಯಲ್ಲಿಯೇ ಹೆಚ್ಚು ದಾಳಿಗಳು ನಡೆದಿವೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಈ ತಾಲ್ಲೂಕುಗಳಲ್ಲಿ ಅಬಕಾರಿ ಅಕ್ರಮಗಳು ಹೆಚ್ಚಿನದಾಗಿ ನಡೆಯುತ್ತವೆ ಎನ್ನುವುದಕ್ಕೆ ಇದು ಪುಷ್ಟಿ ನೀಡಿದೆ.

ನಕಲಿ ಮದ್ಯ ವಶ: ಅಕ್ರಮ ಮದ್ಯ ಮಾರಾಟವಲ್ಲದೆ ನಕಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆಯೂ ಅಬಕಾರಿ ಇಲಾಖೆ ದಾಳಿ ನಡೆಸಿದೆ. 604.8 ಲೀಟರ್ ನಕಲಿ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. 1,500 ಲೀಟರ್ ಕಳ್ಳಭಟ್ಟಿ ಮದ್ಯ, 200 ಲೀಟರ್ ಕೊಳೆ ವಶಪಡಿಸಿಕೊಳ್ಳಲಾಗಿದೆ. ಈ ನಕಲಿ ಮದ್ಯ ತಯಾರಿಕೆ ವಿಚಾರದಲ್ಲಿಯೂ ಬಾಗೇಪಲ್ಲಿಯೇ ಹಾಟ್‌ಸ್ಪಾಟ್ ಎನಿಸಿದೆ.

1,290 ಲೀಟರ್ ಮದ್ಯಸಾರ, 62 ಲೀಟರ್ ಬ್ಲೆಂಡ್, 32,960 ಕೆ.ಜಿ ವಿವಿಧ ಮದ್ಯ ಮಾದರಿಯ ಕ್ಯಾಪ್‌ಗಳು, 20 ಲೀಟರ್ ಕ್ಯಾರಮಲ್, 4,100 ಖಾಲಿ ಬಾಟಲಿಗಳು ಹೀಗೆ ಅಕ್ರಮ ನಡೆಸಲು ದಾಸ್ತಾನು ಮಾಡಿದ್ದ ವಸ್ತುಗಳನ್ನು ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲು: ಬಾಗೇಪಲ್ಲಿ, ಗೌರಿಬಿದನೂರು ಹೀಗೆ ಗಡಿ ಪ್ರದೇಶಗಳಲ್ಲಿ ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಸೇಂದಿಯನ್ನು ಕೆಲವರು ತರುವರು. ಈ ಬಗ್ಗೆ ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲು ಇದೆ ಎಂದು ಮಾಹಿತಿ ನೀಡುವರು ಅಬಕಾರಿ ಇಲಾಖೆ ಉಪ ಆಯುಕ್ತ ಜಿ.ಪಿ.ನರೇಂದ್ರ ಕುಮಾರ್ ತಿಳಿಸಿದರು.

ಅಕ್ರಮಗಳ ಬಗ್ಗೆ ದೂರುಗಳ ಬಂದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದೇವೆ. ಗಡಿಪ್ರದೇಶಗಳ ಬಗ್ಗೆ ಹೆಚ್ಚು ನಿವಾವಹಿಸಿದ್ದೇವೆ. ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ಗ್ರಾಮಗಳಲ್ಲಿ ಸಭೆ ಸಹ ನಡೆಸಿ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT