ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ರೈತರ ಬಾಳಿಗೆ ಆಸರೆಯಾದ ರೈತ ಸಂತೆ

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ತಾಲ್ಲೂಕು ಆಡಳಿತದಿಂದ ವಿನೂತನ ಪರಿಕಲ್ಪನೆ
Last Updated 5 ಮೇ 2020, 2:12 IST
ಅಕ್ಷರ ಗಾತ್ರ

ಗೌರಿಬಿದನೂರು: ಕೊರೊನಾ ಸೋಂಕಿನ ಭೀತಿ, ಕೋವಿಡ್ 19 ಪ್ರಕರಣಗಳು, ಅವುಗಳನ್ನು ನಿಯಂತ್ರಿಸಲು ಜಾರಿಗೆ ತಂದ ಲಾಕ್‌ಡೌನ್‌ನಿಂದಾಗಿ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ತಾಲ್ಲೂಕು ಆಡಳಿತ ಪರಿಚಯಿಸಿದ ವಿನೂತನ 'ರೈತ ಸಂತೆ' ಅನ್ನದಾತರ ಪಾಲಿಗೆ ವರದಾನವಾಗಿದೆ.

ಒಂದೆಡೆ ಲಾಕ್‌ಡೌನ್‌ ಕಾರಣಕ್ಕೆ ಮನೆಯಿಂದ ಹೊರ ಹೋಗಲಾಗದೆ ದಿಗ್ಬಂಧನಕ್ಕೆ ಒಳಗಾದ ಜನರು, ಇನ್ನೊಂದೆಡೆ ಅಸ್ತವ್ಯಸ್ತಗೊಂಡ ಮಾರುಕಟ್ಟೆ ವ್ಯವಸ್ಥೆಯಿಂದ ಜಮೀನು, ತೋಟಗಳಲ್ಲಿಯೇ ಕೊಳೆಯುತ್ತಿದ್ದ ತರಕಾರಿ, ಹಣ್ಣುಗಳನ್ನು ಕಂಡು ರೋಸಿ ಹೋಗುತ್ತಿದ್ದ ರೈತರಿಗೆ ರೈತರ ಸಂತೆ ಭರವಸೆಯ ಬೆಳಕಿನಂತೆ ಗೋಚರಿಸಿದೆ.

ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರದಿಂದ ವಿಶೇಷ ಅಧಿಕಾರಿಯಾಗಿ ನಿಯೋಜನೆಗೊಂಡ ಬಿ.ಎನ್‌.ವರಪ್ರಸಾದರೆಡ್ಡಿ ಅವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ರೈತರ ಬವಣೆಗೆ ಪರಿಹಾರ ಹುಡುಕಿದ ವೇಳೆ ಹೊಳೆದದ್ದೇ ರೈತ ಸಂತೆ ಪರಿಕಲ್ಪನೆ.

ತಾವು ಬೆಳೆದ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ರೈತರೇ ನೇರವಾಗಿ ಗ್ರಾಹಕರಿಗೆ ತಲುಪಿಸಿ, ಮಧ್ಯವರ್ತಿಗಳಿಂದ ನಷ್ಟವಾಗುತ್ತಿದ್ದ ಆದಾಯವೂ ರೈತರಿಗೆ ಸೇರುವಂತೆ ರೂಪಿಸಿದ ಸಂತೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಎರಡ್ಮೂರು ವಾರ್ಡ್‌ಗಳ ನಡುವೆ ಒಂದು ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ, ಅನುಕೂಲ ಕಲ್ಪಿಸಲಾಗಿತ್ತು.

ರೈತರು ತಾವು ಬೆಳೆದ ತರಕಾರಿ, ಹಣ್ಣು, ಸೊಪ್ಪು, ಹೂಗಳನ್ನು ಈ ಸಂತೆಗೆ ತಂದು ನೇರವಾಗಿ ಗ್ರಾಹಕರಿಗೆ ಮಾರುವ ಮೂಲಕ, ದಳ್ಳಾಳಿಗಳ ಹಾವಳಿ ಇಲ್ಲದೆ ಮಾರುಕಟ್ಟೆ ಕಂಡುಕೊಳ್ಳುವ ಹೊಸ ಬಗೆಯನ್ನು ಪರಿಚಯಿಸಿಕೊಂಡು ಪುಳಕಗೊಂಡರು.

ತಾಲ್ಲೂಕು ಆಡಳಿತ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ರೈತ ಸಂತೆಗೆ ಬಂದ ಗ್ರಾಹಕರು ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ರೈತರಿಂದಲೇ ಕಡಿಮೆ ಬೆಲೆಗೆ ಸಿಗುವ ತಾಜಾ ಹಣ್ಣು, ತರಕಾರಿ ಖರೀದಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿ ಸುಮಾರು 17 ದಿನಗಳಿಂದ ವಿವಿಧ ಬಡಾವಣೆಗಳಲ್ಲಿ ರೈತ ಸಂತೆ ವಹಿವಾಟು ನಡೆಸಿದೆ. ಇದರಲ್ಲಿ ಅಂದಾಜು 162 ಟನ್ ಹಣ್ಣು ‌ಮತ್ತು ತರಕಾರಿ ನೇರವಾಗಿ ರೈತರಿಂದ ಗ್ರಾಹಕರಿಗೆ ಮಾರಾಟವಾಗಿ, ಸುಮಾರು ₹31.39 ಲಕ್ಷದ ವ್ಯಾಪಾರ ನಡೆದಿದೆ. ಈ ಸಂತೆ ನಿರಂತರವಾಗಿರಬೇಕು ಎನ್ನುವುದು ನಾಗರಿಕರ ಬಯಕೆ.

ಕಳೆದ ವರ್ಷ ಶ್ರವಣಬೆಳಗೊಳದಲ್ಲಿ ‌ನಡೆದ ಮಹಾ ಮಸ್ತಕಾಭಿಷೇಕದ ವಿಶೇಷ ಅಧಿಕಾರಿಯಾಗಿ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಮಸ್ತಾಕಾಭಿಷೇಕ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಬಿ.ಎನ್.ವರಪ್ರಸಾದರೆಡ್ಡಿ ಅವರು ಇದೀಗ ರೈತ ಸಂತೆ ಪರಿಚಯಿಸುವ ಮೂಲಕ ಮತ್ತೊಮ್ಮೆ ಮೆಚ್ಚುಗೆಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT