ಶನಿವಾರ, ಜುಲೈ 24, 2021
28 °C
ಬಾಗೇಪಲ್ಲಿಯ ತಾಲ್ಲೂಕಿನ ಕುಗ್ರಾಮ ಅಡವಿಕೊತ್ತೂರಿನ 77 ವರ್ಷದ ವೃದ್ಧೆ ಹುಸೇನ್‌ ಬೀ ಅವರಿಗೆ ಅಧಿಕಾರಿಗಳ ನೆರವು

ಪ್ರಜಾವಾಣಿ ಫಲಶ್ರುತಿ: ದೊರೆಯಿತು ಅಕ್ಕಿ, ಕಾರ್ಡ್‌ಗೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪಡಿತರ ಚೀಟಿಗಾಗಿ ಕಳೆದ ಮೂರು ವರ್ಷಗಳಿಂದ ಪರದಾಡುತ್ತಿದ್ದ ಬಾಗೇಪಲ್ಲಿ ತಾಲ್ಲೂಕಿನ ಕುಗ್ರಾಮ ಅಡವಿಕೊತ್ತೂರಿನ 77 ವರ್ಷದ ವೃದ್ಧೆ ಹುಸೇನ್‌ ಬೀ ಅವರಿಗೆ ಅಕ್ಕಿಯನ್ನು ತಲುಪಿಸಿರುವ ಅಧಿಕಾರಿಗಳು, ಪಡಿತರ ಚೀಟಿ ಒದಗಿಸುವ ಭರವಸೆ ನೀಡಿದ್ದಾರೆ.

ಕುಟುಂಬದವರಿಂದ ಅನಾದರಕ್ಕೆ ಒಳಗಾಗಿ ಮುಪ್ಪಿನ ಕಾಲದಲ್ಲಿ ಹೊತ್ತಿನ ಊಟಕ್ಕೂ ಪರದಾಡುತ್ತಿರುವ ವಿಧವೆ ಹುಸೇನ್‌ ಬೀ ಅವರ ಸಂಕಷ್ಟ ಕುರಿತು ಜೂನ್ 11 ರಂದು ‘ಪ್ರಜಾವಾಣಿ’ ‘ಕಾರ್ಡ್‌ಗೆ ಅಲೆದಾಡಿ ನೊಂದ ಬಡಜೀವ’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಎಚ್.ಸೋಮಶೇಖರಪ್ಪ ಅವರು ತಮ್ಮ ಅಧಿಕಾರಿಗಳ ಮೂಲಕ ಹುಸೇನ್‌ ಬೀ ಅವರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ನೆರವು ಒದಗಿಸಿದ್ದಾರೆ.

ಬಾಗೇಪಲ್ಲಿಯ ಆಹಾರ ನಿರೀಕ್ಷಕ ಸೂರ್ಯನಾರಾಯಣ,  ಕಂಪ್ಯೂಟರ್‌ ಆಪರೇಟರ್‌ ಬಾಬು ಮತ್ತು ಪಾತಪಾಳ್ಯದ ನ್ಯಾಯ ಬೆಲೆ ಅಂಗಡಿಯ ಮಾಲೀಕ ಸೀತಾರೆಡ್ಡಿ ಅವರು ಬಾಗೇಪಲ್ಲಿಯಿಂದ 35 ಕಿ.ಮೀ ದೂರದಲ್ಲಿ ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಅಡವಿಕೊತ್ತೂರಿಗೆ ಭೇಟಿ ನೀಡಿ ಹುಸೇನ್‌ ಬೀ ಅವರ ಕಷ್ಟ ಆಲಿಸುವ ಕೆಲಸ ಮಾಡಿದ್ದಾರೆ.

ಜತೆಗೆ, 10 ಕೆ.ಜಿ ಅಕ್ಕಿಯನ್ನು ತಲುಪಿಸಿ, ಸರ್ಕಾರದಿಂದ ಬಿಪಿಎಲ್ ಕಾರ್ಡ್‌ ನೋಂದಣಿ ಆರಂಭವಾದ ಕೂಡಲೇ ಹೊಸದಾಗಿ ಕಾರ್ಡ್‌ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಎಚ್.ಸೋಮಶೇಖರಪ್ಪ ಅವರು, ‘2017ರಲ್ಲಿ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಣೆಯಾಗದ ಕಾರಣಕ್ಕೆ ಹುಸೇನ್‌ ಬೀ ಅವರ ಪಡಿತರ ಚೀಟಿ ರದ್ದಾಗಿದೆ. ಅದಕ್ಕಾಗಿ ಅವರು ಕಳೆದ ಮೂರು ವರ್ಷಗಳಿಂದ ಅಲೆದಾಡುತ್ತಿರುವ ವಿಚಾರ ಪತ್ರಿಕೆ ಮೂಲಕ ಗಮನಕ್ಕೆ ಬಂದಿದೆ’ ಎಂದು ಹೇಳಿದರು.

‘ಇನ್ನು ಮುಂದೆ ಹುಸೇನ್‌ ಬೀ ಅವರು ಪಡಿತಕ್ಕಾಗಿ ಪಾತಪಾಳ್ಯಕ್ಕೆ ಅಲೆದಾಡುವುದು ಬೇಡ. ಪ್ರತಿ ತಿಂಗಳು ನ್ಯಾಯ ಬೆಲೆ ಅಂಗಡಿಯವರ ಮೂಲಕ ಅಕ್ಕಿ ತಲುಪಿಸುವ ಕೆಲಸ ಮಾಡುತ್ತೇವೆ. ಸರ್ಕಾರ ಹೊಸ ಪಡಿತರ ಚೀಟಿ ಮಾಡಲು ಅವಕಾಶ ನೀಡಿದಾಗ ಆದ್ಯತೆ ಮೆರೆಗೆ ಅವರಿಗೆ ಕಾರ್ಡ್‌ ತಲುಪಿಸಲು ಕ್ರಮಕೈಗೊಳ್ಳುತ್ತೇನೆ. ಪತ್ರಿಕೆಯ ಕಾಳಜಿಗೆ ಧನ್ಯವಾದ ಹೇಳುವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.