ಗುರುವಾರ , ಡಿಸೆಂಬರ್ 5, 2019
22 °C
ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರೇವಣ್ಣ ವಾಗ್ದಾಳಿ

ಈಗ ಸಿದ್ದರಾಮಯ್ಯ ಹೇಗೆ ಕಹಿಯಾದರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಕಳೆದ 6 ವರ್ಷಗಳಲ್ಲಿ ಚಿಕ್ಕಬಳ್ಳಾಪುರದ ಅನೇಕ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದ್ದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ನಾಲಿಗೆಗೆ ಇದೀಗ ಸಿದ್ದರಾಮಯ್ಯ ಹೇಗೆ ಕಹಿಯಾದರು ಎಂದು ಸ್ಪಷ್ಟಪಡಿಸಲಿ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರೇವಣ್ಣ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಮೊಯಿಲಿ ಅವರು ಸುಧಾಕರ್ ಅವರು ಭ್ರಷ್ಟ ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ಹೈಕಮಾಂಡ್‌ಗೆ ಸಲಹೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರು ಸುಧಾಕರ್ ಪರ ವಹಿಸಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರು. ಇವತ್ತು ಸುಧಾಕರ್ ಅವರು ತಾಕತ್ ಇದ್ದರೆ ನಮ್ಮನ್ನು ಸಿದ್ದರಾಮಯ್ಯ ಅವರೇ ಸೋಲಿಸಲಿ ಎನ್ನುತ್ತಿದ್ದಾರೆ. ಇವರೇನು ಆಧುನಿಕ ದುರ್ಯೋಧನನಾ’ ಎಂದು ಕೇಳಿದರು.

‘ಸುಧಾಕರ್ ಅವರು ತಮ್ಮ ಸ್ವಾರ್ಥ ಮತ್ತು ವೈಯಕ್ತಿಕ ಲಾಭಕ್ಕಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅನರ್ಹ ಶಾಸಕರು ಮತ ಕೇಳಲಿ ಆದರೆ ಅವರ ಉದ್ಧಟತನ ನಮಗೆಲ್ಲಾ ಖೇದ ಉಂಟು ಮಾಡಿದೆ. ಸುಧಾಕರ್ ಜಿಲ್ಲೆಗೆ 2015ರಲ್ಲಿಯೇ ಮಂಜೂರಾಗಿದ್ದ ವೈದ್ಯಕೀಯ ಕಾಲೇಜು ಹೆಸರು ಹೇಳಿಕೊಂಡು ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಮತದಾರರು ಜಾಗೃತರಾಗಬೇಕು’ ಎಂದು ಹೇಳಿದರು.

‘ಈ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಬೇಕಾದರೇ ನಾನೇ ಕಾರಣ. ಕಾಂಗ್ರೆಸ್‌ನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಸುಧಾಕರ್ ಅವರು ಸುಳ್ಳು ಪ್ರಚಾರ ಮಾಡುವುದು ಅವರಿಗೆ ಶೋಭೆ ತರುವ ವಿಚಾರವಲ್ಲ. ಕಾಂಗ್ರೆಸ್‌ನ ಭದ್ರಕೋಟೆಯಂತಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಗೆಲುವಿಗೆ ಬೇಕಾದ ಎಲ್ಲಾ ತಂತ್ರಗಳನ್ನು ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಮುಖಂಡರಾದ ಜಿ.ಎಚ್.ನಾಗರಾಜ್, ಕೆ.ವಿ.ನವೀನ್ ಕಿರಣ್, ಗಂಗರೆಕಾಲುವೆ ನಾರಾಯಣಸ್ವಾಮಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)