ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ‘ಕರುಣೆಯ ಗೋಡೆ’ಗೆ ಕೈ ಜೋಡಿಸಿ

ಸಮಾಜಮುಖಿ ವೈದ್ಯ ಡಾ.ಎಚ್‌.ಎಸ್‌.ಮಧುಕರ್‌ ಅವರಿಂದ ರೂಪು ತಳೆದ ಪರೋಪಕಾರದ ಪರಿಕಲ್ಪನೆ, ಬಡವರ ನೆರವಿಗೆ ವಿನೂತನ ಪ್ರಯೋಗ
Last Updated 30 ಜನವರಿ 2020, 20:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಡವರಿಗೆ ಉಪಕಾರ ಮಾಡಬೇಕು ಎಂಬ ಮನಸು ನಿಮ್ಮಲ್ಲಿದೆಯೇ? ಪರೋಪಕಾರದ ಗುಣವಿದ್ದರೂ ನಮ್ಮಲ್ಲಿ ಪರರಿಗೆ ಕೊಡಲು ಏನಿದೆ ಎಂಬ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಒಂದು ಕ್ಷಣ ನಗರದ ಜಿಲ್ಲಾ ಆಸ್ಪತ್ರೆ ಕಾಂಪೌಂಡ್‌ಗೆ ಹೊಂದಿಕೊಂಡಂತೆ ತಲೆ ಎತ್ತಿರುವ ‘ಕರುಣೆಯ ಗೋಡೆ’ಯನ್ನೊಮ್ಮೆ ಕಣ್ಣಾಡಿಸಿ, ಖಂಡಿತ ನೀವು ಬಡವರಿಗೆ ಕೈಲಾದ ಸಹಾಯ ಮಾಡುತ್ತಿರಿ!

ಅಚ್ಚರಿ ಎನಿಸಿದರೂ ಇದು ಸತ್ಯ. ಆ ಗೋಡೆ ನೋಡಿದೊಡನೆ ನಿಮ್ಮೊಳಗೆ ಅರಿವಿಲ್ಲದೆ ಕರುಣೆ, ಪ್ರೀತಿ, ಬಡಜನರ ಬಗೆಗಿನ ಒಲವಿನ ಜ್ಯೋತಿ ಇಲ್ಲಿ ಮೆಲ್ಲಗೆ ಬೆಳಗುತ್ತದೆ. ಇಲ್ಲಿ ಯಾರು ಯಾರನ್ನೂ ಒತ್ತಾಯಿಸುವುದಿಲ್ಲ; ಪೀಡಿಸುವುದೂ ಇಲ್ಲ. ಸಹಾಯ ಮಾಡಿ ಎಂದು ಯಾರೂ ಅಂಗಲಾಚುತ್ತಲೂ ಇಲ್ಲ. ಆದರೆ ಪಾರಿವಾಳಗಳ ಗೂಡಿನಂತಿರುವ ಕರುಣೆಯ ಗೋಡೆಯ ಮೇಲಿನ ‘ಬೇಡವಾದುದನ್ನು ಇಡಿ..ಬೇಕಾದುದನ್ನು ತೆಗೆದುಕೊಳ್ಳಿ’ ಎಂಬ ಸಾಲು ನಿಮ್ಮೊಳಗಿನ ಕರುಣೆಯನ್ನು ಕ್ಷಣಮಾತ್ರವಾದರೂ ಉಕ್ಕಿಸುತ್ತದೆ.

ವೈದ್ಯ ವೃತ್ತಿಯ ಜತೆಗೆ ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಗರದ ಮಾನಸ ಆಸ್ಪತ್ರೆಯ ಡಾ.ಎಚ್‌.ಎಸ್‌.ಮಧುಕರ್‌ ಅವರ ಪರೋಪಕಾರದ ಪರಿಕಲ್ಪನೆಯೇ ಈ ‘ಕರುಣೆಯ ಗೋಡೆ’. ಈ ಕಾರ್ಯಕ್ಕೆ ಶೆಲ್ಫ್‌ ದಾನ ನೀಡುವ ಮೂಲಕ ‘ರಾಮು ವುಡ್ ವರ್ಕ್ಸ್’ನ ಮಾಲೀಕ ರಾಮು ಅವರು ಸಹ ಈ ಉದಾತ್ತ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಉಳ್ಳವರು ಇಲ್ಲದವರಿಗೆ ಕೈಲಾದ ನೆರವು ನೀಡುವ ಈ ಪರಿಕಲ್ಪನೆಯಲ್ಲಿ ಬಡವರಿಗೆ ನೀವು ಹಣ ನೀಡಬೇಕಿಲ್ಲ. ಬದಲು ನಿಮ್ಮಲ್ಲಿ ಬಳಸಿ ಹಳತಾದ ಸಾಮಾಗ್ರಿಗಳನ್ನು ‘ಕರುಣೆಯ ಗೋಡೆ’ಯ ಗೂಡಿನಲ್ಲಿಟ್ಟು ಧನ್ಯತೆ ಮೆರೆಯಬಹುದು. ಹಾಗಂತ ಹರಿದ ಬಟ್ಟೆ, ಬಳಸಲಾಗದ ಮುರುಕು ಸಾಮಗ್ರಿಗಳನ್ನು ನೀಡಬೇಡಿ. ಏಕೆಂದರೆ, ‘ತೆಗೆದುಕೊಳ್ಳುವವರಿಗೂ ಒಂದು ಆತ್ಮಗೌರವ, ಆತ್ಮಾಭಿಮಾನ ಇರುತ್ತದೆ. ಇಲ್ಲಿ ಯಾರೂ ಯಾರಿಗೂ ಭಿಕ್ಷೆ ನೀಡುತ್ತಿಲ್ಲ. ಹಾಗಾಗಿ ಬಳಸಲು ಯೋಗ್ಯವಾದ ವಸ್ತುಗಳನ್ನು ಮಾತ್ರ ಇಲ್ಲಿಡಿ’ ಎನ್ನುವುದು ಡಾ.ಮಧುಕರ್‌ ಅವರ ಮನವಿ.

ನೀವು ಕೂಡ ನಿಮ್ಮಲ್ಲಿ ಹೆಚ್ಚಿಗೆ ಇರುವ ಅಥವಾ ನಿಮಗೆ ಅಗತ್ಯವಿರದ ವಸ್ತುಗಳಿದ್ದಲ್ಲಿ ಅಂದರೆ ಬಟ್ಟೆ, ಚಪ್ಪಲಿ, ಬೆಡ್‌ಶೀಟ್, ಬುಕ್ಸ್, ಶೂ, ಸ್ಕೂಲ್ ಬ್ಯಾಗ್ಸ್, ಲಂಚ್ ಬ್ಯಾಗ್ಸ್, ಯೂನಿಫಾರ್ಮ, ಪೆನ್, ಪೆನ್ಸಿಲ್, ಛತ್ರಿ ಹೀಗೆ ಯಾವುದೇ ಆಗಿದ್ದರೂ ಅದು ಮತ್ತೊಬ್ಬರಿಗೆ ಅವಶ್ಯಕವಾಗಿರುತ್ತೆ. ಕೆಲವೊಬ್ಬರು ಬಟ್ಟೆ ಸ್ವಲ್ಪ ಹಳೆಯದಾದರೂ ಉಡಲು ಇಷ್ಟಪಡುವುದಿಲ್ಲ. ಪುಸ್ತಕದಲ್ಲಿ ಇನ್ನು ಬರೆಯಲು ಪುಟಗಳಿದ್ದಾಗಲೇ ಮೂಲೆ ಸೇರಿರುತ್ತೆ, ಚಪ್ಪಲಿ, ಶೂಗಳು ಅಗತ್ಯಕ್ಕಿಂತ ಒಂದೆರಡು ಜೋಡಿ ಹೆಚ್ಚಿಗಿಯೇ ಇರುತ್ತವೆ. ಬ್ಯಾಗ್‌ಗಳು ಸ್ಟೋ ರೂಂ ಸೇರಿರುತ್ತವೆ.

ಎಲ್ಲವೂ ಒಂದುದಿನ ತಿಪ್ಪೆಯ ಪಾಲಾಗುತ್ತವೆ. ಅದರ ಬದಲು ನಾಲ್ಕು ಜನರಿಗೆ ಸಹಾಯವಾಗುವುದು ಒಳ್ಳೆಯದಲ್ಲವೇ? ಹಾಗಂತ ತೀರಾ ಹಾಳಾಗಿರುವ ವಸ್ತುಗಳನ್ನು ತಂದೀಡಬೇಡಿ. ಏಕೆಂದರೆ ನಮ್ಮ ಉಪಯೋಗಕ್ಕೆ ಅನರ್ಹವಾಗಿರುವ ವಸ್ತುಗಳು ಇನ್ನೊಬ್ಬರು ಬಳಸಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ ಕನಿಷ್ಠ ಸ್ವಲ್ಪ ಅವಧಿಯವರೆಗಾದರೂ ಉಪಯೋಗವಾಗುವಂತಹ ವಸ್ತುಗಳನ್ನು ತಂದಿಡಿ. ನಿಮಗೆ ಅಗತ್ಯವಿರುವ ವಸ್ತು ಅಲ್ಲಿದ್ದರೆ ತೆಗೆದುಕೊಂಡು ಹೋಗಿ.

ತಮ್ಮಲ್ಲಿ ಹೆಚ್ಚಿಗೆ ಇರುವ ವಸ್ತುಗಳನ್ನು ಅಥವಾ ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಇಲ್ಲಿ ತಂದಿಟ್ಟರೆ, ಆ ವಸ್ತುಗಳ ಅವಶ್ಯಕತೆ ಇರುವವರು ಅವುಗಳನ್ನು ಬಳಸಬಹುದು. ಯಾರೂ ಹಿಂಜರಿಯಬೇಕಿಲ್ಲ. ಯಾರಾದ್ರೂ ಏನಾದ್ರೂ ಅಂದುಕೊಳ್ಳಬಹುದು ಎಂಬ ಅಸಹ್ಯಪಟ್ಟುಕೊಳ್ಳುವ ಮನಸ್ಥಿತಿಯೂ ಬೇಡ. ಏಕೆಂದರೆ ಇದು ಕರುಣೆಯ ಗೋಡೆ. ಕರುಣೆ ಇದ್ದಲ್ಲಿ ಯಾವ ಅವಮಾನ, ಹಿಂಜರಿಕೆಗಳೂ ಅಡ್ಡಬರುವುದಿಲ್ಲ!

ಕೆಲ ದಿನಗಳ ಹಿಂದಷ್ಟೇ ಆರಂಭಗೊಂಡ ಕರುಣೆಯ ಗೋಡೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಮ್ಮೆ ನೀವೂ ಗಮನಿಸಿ. ನಂತರ ಅದುವೇ ನಿಮ್ಮನ್ನು ಸಹಾಯ ಮಾಡುವ ಕೆಲಸಕ್ಕೆ ಪ್ರೇರೆಪಿಸುತ್ತದೆ ಎನ್ನುತ್ತಾರೆ ರಾಮು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT