ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈಚಾರಿಕ ಪ್ರಜ್ಞೆ ಮೂಡಿಸಿದ ಕುವೆಂಪು: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮ
Published 29 ಡಿಸೆಂಬರ್ 2023, 13:52 IST
Last Updated 29 ಡಿಸೆಂಬರ್ 2023, 13:52 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕುವೆಂಪು ಅವರು ಅಸ್ಪೃಶ್ಯತೆ ಮತ್ತು ಜಾತೀಯತೆ ಹೋಗಲಾಡಿಸಲು ಸಾಹಿತ್ಯದ ಮೂಲಕ ಶ್ರಮಿಸಿದರು.  ಅವರ ವೈಚಾರಿಕತೆಯನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. 

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಡೆದ ‘ವಿಶ್ವಮಾನವ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರ ಸಾಹಿತ್ಯ ಕೃತಿಗಳು, ಕಾದಂಬರಿಗಳನ್ನು  ಹೆಚ್ಚು ಅಧ್ಯಯನ ಮಾಡುವ ಮೂಲಕ ವಿಶ್ವಮಾನವರಾಗಲು ಸಾಧ್ಯ. ವಿಶ್ವಮಾನವತ್ವ, ಮನುಜ ಮತ-ವಿಶ್ವ ಪಥ ಎಂಬ ಸಂದೇಶ ಸಾರಿರುವ ಕುವೆಂಪು ಅವರ ಜನ್ಮದಿನವನ್ನು ಸರ್ಕಾರದ ಆಶಯದಂತೆ  ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಿರುವುದು ಸಂತೋಷವಾದುದು ಎಂದು ಹೇಳಿದರು.

ಕನ್ನಡ ಸಾಹಿತ್ಯವನ್ನು  ಶ್ರೀಮಂತಗೊಳಿಸಿದ ಕೀರ್ತಿ ಕವೆಂಪು ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಕುವೆಂಪು ಅವರ ಕೊಡುಗೆ ಮೇಲ್ಪಂಕ್ತಿಯಲ್ಲಿದೆ ಎಂದರೆ ತಪ್ಪಾಗಲಾರದು. ಪ್ರಕೃತಿಯನ್ನು ಆರಾಧಿಸುವ ಸಾಹಿತ್ಯ ರಚಿಸಿ ಪರಿಸರ ಪ್ರಜ್ಞೆಯನ್ನು ಜನರಲ್ಲಿ ಬೆಳೆಸಿ ಕನ್ನಡ ನಾಡು ನುಡಿಗೆ ಅಹರ್ನಿಶಿ ದುಡಿದಿದ್ದಾರೆ. ಮಳೆ, ಅರಣ್ಯ, ನದಿಗಳ ಹಾಗೂ ಸಮ ಸಮಾಜದ ರಕ್ಷಣೆಯ ವಿಚಾರವನ್ನು ಅವರ ಕಾದಂಬರಿಗಳಲ್ಲಿ ಕಾಣಬಹುದು. ‘ಮಲೆಗಳಲ್ಲಿ ಮದುಮಗಳು’ ಕೃತಿ ಇದಕ್ಕೆ ಉತ್ತಮ ನಿದರ್ಶನ. ಆದ್ದರಿಂದ ಭೂಮಿ ಇರುವವರೆಗೂ ಕುವೆಂಪು ಜೀವಂತವಾಗಿ ಇರುತ್ತಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿ, ಕುವೆಂಪು ಅವರು ಹೇಳಿರುವ ಅನೇಕ ವಿಚಾರಗಳು ಕ್ರಾಂತಿಕಾರಿ ವಿಚಾರಗಳಾಗಿವೆ. ಅವರು ಅಧ್ಯಾತ್ಮದಲ್ಲಿ ಆಳವಾದ ಅನುಭೂತಿ ಮತ್ತು ವೈಚಾರಿಕತೆಯಲ್ಲಿ ಶಿಖರಪ್ರಯರಾಗಿದ್ದಾರೆ. ಕಾವ್ಯ ಮೀಮಾಂಸೆಯಲ್ಲಿ ಜ್ಞಾನಸಂಪನ್ನರಾಗಿದ್ದಾರೆ ಎಂದು ವಿಶ್ಲೇಷಿಸಿದರು. 

ಅವರ ಸಾಹಿತ್ಯದಲ್ಲಿ ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮ ಎಲ್ಲವನ್ನು ಸಮನ್ವಯವಾಗಿ ಕಾಣಬಹುದು. ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸಿದ ಧೀಮಂತ ಕವಿ ಕುವೆಂಪು ಎಂದರು.  

ವಿಶ್ವಮಾನವ ದಿನದ ಪ್ರಯುಕ್ತ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

‌ತಹಶೀಲ್ದಾರ್ ಅನಿಲ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ‌ಜಿ.ಡಿ.ಚಂದ್ರಯ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಸೊಣ್ಣೇಗೌಡ, ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಮನೀಷ್, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಅಮೃತ್ ಕುಮಾರ್, ಮಂಚನಬಲೆ ಶ್ರೀನಿವಾಸ್, ಶಂಕರ್, ಅಂತೋಣಿ ಸ್ವಾಮಿ, ಪ್ರೇಮಲೀಲಾ, ಸರಸಮ್ಮ,ಕಾವ್ಯ, ಸೊ.ಸು ನಾಗೇಂದ್ರ ನಾಥ್, ಕನ್ನಡ ಸಂಘಟನೆಗಳ ಪದಾಧಿಕಾರಿಗಳಾದ ರವಿ ಕುಮಾರ್, ಶ್ರೀನಿವಾಸ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT