ಶನಿವಾರ, ಏಪ್ರಿಲ್ 17, 2021
32 °C
ಮುರಿದು ಬಿದ್ದಿರುವ ಮಕ್ಕಳ ಆಟಿಕೆ, ನೀರು ಜಿನುಗದ ಕಾರಂಜಿ

ಚಿಕ್ಕಬಳ್ಳಾಪುರ: ನಿರ್ವಹಣೆ ಕೊರತೆ; ನಲುಗಿದ ಉದ್ಯಾನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರಕ್ಕೆ ಅಂದವನ್ನು ತರುವಲ್ಲಿ ಉದ್ಯಾನಗಳದ್ದು ಮಹತ್ವದ ಪಾತ್ರ. ಆದರೆ ನಗರದಲ್ಲಿನ ಬಹುತೇಕ ಉದ್ಯಾನಗಳು ನಿರ್ವಹಣೆ ಇಲ್ಲದೆ ನಲುಗಿವೆ. ಇವು ಉದ್ಯಾನಗಳೋ ಕಸದ ತೊಟ್ಟಿಗಳೋ ಎನಿಸುವಷ್ಟರ ಮಟ್ಟಿಗೆ ಅಧ್ವಾನ ಹಿಡಿದಿವೆ. ವಾಯುವಿಹಾರಕ್ಕೆ, ಮಕ್ಕಳ ಆಟಗಳಿಗೆ ಸದ್ಬಳಕೆಯಾಗದೆ ನಿರ್ಜೀವವಾಗಿವೆ.

ನಗರಸಭೆಯ ಲೆಕ್ಕದಲ್ಲಿ ನಗರದಲ್ಲಿ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ 43 ಉದ್ಯಾನಗಳಿವೆ. ಇವುಗಳಲ್ಲಿ ಬಹುಪಾಲು ಉದ್ಯಾನಗಳು ಸರಿಯಾದ ನಿರ್ವಹಣೆ ಇಲ್ಲದೆ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ಎನ್ನುವ ಸ್ಥಿತಿಯಲ್ಲಿವೆ.

ನಗರದ ಶನಿ ಮಹಾತ್ಮ ದೇವಸ್ಥಾನದ ಹಿಂಬದಿಯ ಆಸುಪಾಸಿನಲ್ಲಿಯೇ ಮೂರು ಉದ್ಯಾನಗಳಿವೆ. ಈ ಪುಟ್ಟ ಉದ್ಯಾನಗಳಿಗೆ ತಂತಿಬೇಲಿ ಹಾಕಲಾಗಿದೆ. ಒಂದು ಉದ್ಯಾನಕ್ಕೆ ನಗರಸಭೆಯ ಉದ್ಯಾನ ಎಂದು ಫಲಕವನ್ನೂ ಅಳವಡಿಸಲಾಗಿದೆ. ಆದರೆ, ಈ ಉದ್ಯಾನಗಳ ಸ್ಥಿತಿ ಅಯೋಮಯ. ಇಡೀ ಉದ್ಯಾನದ ತುಂಬಾ ಗಿಡಗಳು ಬೆಳೆದಿವೆ. ಉದ್ಯಾನದೊಳಗೆ ಕಾಲಿಡಲು ಸಹ ಸಾಧ್ಯವಾಗುವುದಿಲ್ಲ.

ಎಪಿಎಂಸಿ ಎದುರಿನ ಎನ್. ನರಸಿಂಹಯ್ಯ ಬಡಾವಣೆಯಲ್ಲಿರುವ ನಗರಸಭೆಯ ಉದ್ಯಾನದಲ್ಲಿ ಗಿಡಗಳನ್ನು ಹಾಕಲಾಗಿದೆ. ಈ ಉದ್ಯಾನದ ತುಂಬಾ ಪಾರ್ಥೇನಿಯಂ ಕಳೆ ಗಿಡ ಬೆಳೆದಿದೆ. ಇಲ್ಲಿರುವ ಮಕ್ಕಳ ಆಟದ ಜಾರುಬಂಡೆ, ಜೋಕಾಲಿಗಳು ತುಕ್ಕು ಹಿಡಿದಿವೆ. ಇದರ ಸ್ಥಿತಿಯೇ ನಿರ್ವಹಣೆ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತದೆ. 2009–10ನೇ ಸಾಲಿನಲ್ಲಿ ಈ ಉದ್ಯಾನವನ್ನು ಮುಖ್ಯಮಂತ್ರಿ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾಗಿದೆ.

ನಗರಸಭೆಯವರು ಯಾವಗಲಾದರೂ ಒಮ್ಮೆ ಒಂದು ಉದ್ಯಾನದ ಸ್ಥಿತಿಗತಿ ನೋಡುವರು. ಇದರ ಬದಲು ಉದ್ಯಾನಗಳ ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಿ ಅವರು ಕನಿಷ್ಠ ಎರಡು ದಿನಕ್ಕೆ ಒಮ್ಮೆ ಬಂದು ಇವುಗಳನ್ನು ಪರಿಶೀಲಿಸಿದರೆ ಉತ್ತಮ ಎಂದು ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡುವರು.

ಟಿ.ಚೆನ್ನಯ್ಯ ಉದ್ಯಾನವೇ ನಗರದಲ್ಲಿರುವ ಪ‍್ರಮುಖ ಉದ್ಯಾನ. ಆದರೆ ಇದರ ಮಧ್ಯದಲ್ಲಿ ನಿರ್ಮಿಸಿದ ಕಾರಂಜಿಯಲ್ಲಿ ಹನಿ ನೀರು ಕಾಣುತ್ತಿಲ್ಲ. 10 ವರ್ಷಗಳಿಂದ ಸರಿಯಾದ ನಿರ್ವಹಣೆ ಕಾಣದೆ ಕೆಟ್ಟು ನಿಂದೆ. ಉದ್ಯಾನದಲ್ಲಿದ್ದ ವಿದ್ಯುತ್ ದೀಪಗಳು ರಸ್ತೆ ಬದಿ ಬಿದ್ದಿವೆ.

ಹೀಗೆ ನಿರ್ವಹಣೆ ಇಲ್ಲದೆ ನಲುಗಿರುವ ಉದ್ಯಾನಗಳು ನಗರಕ್ಕೆ ಕಪ್ಪುಚುಕ್ಕೆಯ ರೀತಿಯಲ್ಲಿವೆ.

ಡಿ.ಎಂ.ಕುರ್ಕೆ ಪ್ರಶಾಂತ್, ಎಂ.ರಾಮಕೃಷ್ಣಪ್ಪ, ಡಿ.ಜಿ.ಮಲ್ಲಿಕಾರ್ಜುನ್, ಎ.ಎಸ್.ಜಗನ್ನಾಥ್, ಜೆ.ವೆಂಕಟರಾಯಪ್ಪ

ನೀರಿಲ್ಲದೆ ಒಣಗಿದ ಗಿಡಗಳು
ಶಿಡ್ಲಘಟ್ಟ:
ನಗರ ಹೊರವಲಯದಲ್ಲಿರುವ ನಗರಸಭೆಯ ಏಕೈಕ ಉದ್ಯಾನ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಕೊರೊನಾ ನೆಪದಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಬೀಗ ಹಾಕಲಾಗಿತ್ತು. ಬೀಗ ತೆರೆದರೂ ಯಾರೂ ಹೋಗಲಾರದಂತೆ ರೋಗಪೀಡಿತ ಸ್ಥಿತಿಯಲ್ಲಿದೆ.

ಚಿಂತಾಮಣಿ ರಸ್ತೆಯಲ್ಲಿ 2002ರಲ್ಲಿ ಆಗಿನ ಪುರಸಭೆ ಆಡಳಿತಾಧಿಕಾರಿ ಜಿ.ಎಸ್. ನಾಯಕ್ ಅಧಿಕಾರಾವಧಿಯಲ್ಲಿ ಆ ಪ್ರದೇಶದಲ್ಲಿ ಬೆಳೆದಿದ್ದ ಹಳೇ ಮರಗಳನ್ನೆಲ್ಲಾ ಸೇರಿಸಿ ಕಾಂಪೌಂಡ್ ನಿರ್ಮಿಸಿ ಉದ್ಯಾನ ರೂಪಿಸಲಾಗಿತ್ತು. ಇಲ್ಲಿನ ಅತ್ಯಂತ ಹಳೆಯದಾದ ಎತ್ತರದ ಮರಗಳಲ್ಲಿ ನೂರಾರು ಬಾವಲಿಗಳು, ಹಲವಾರು ವಿಧದ ಹಕ್ಕಿಗಳು ವಾಸಿಸುತ್ತಿವೆ.

ಪಕ್ಕದಲ್ಲಿಯೇ ನಗರಸಭೆಯ ನೀರು ಶೇಖರಣಾ ಹಾಗೂ ವಿತರಣಾ ಘಟಕ ಇದೆ. ಉದ್ಯಾನದಲ್ಲಿ ನೀರಿನ ಕಾರಂಜಿ, ಗಣೇಶನ ಮೂರ್ತಿ, ಮಕ್ಕಳು ಆಡಲು ಉಯ್ಯಾಲೆ, ಜಾರುಬಂಡೆ, ನಡೆದಾಡಲು ಪಥಗಳನ್ನೆಲ್ಲಾ ನಿರ್ಮಿಸಿದ್ದರು.

ನಗರದ ವಾಸಿಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು, ವಾಯುವಿಹಾರಿಗಳು ನಿತ್ಯ ಉದ್ಯಾನಕ್ಕೆ ಭೇಟಿ ನೀಡುತ್ತಿದ್ದರು. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಮಕ್ಕಳು ಉದ್ಯಾನದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು.

 ಆದರೆ ಇದೀಗ ಉದ್ಯಾನದೊಳಗೆ ಎಲ್ಲೆಡೆ ಒಣ ಎಲೆಗಳು, ಕಸ ಹರಡಿ ನಿಂತಿದೆ. ನೀರು ಹರಿಯಲು ಇರುವ ಚರಂಡಿಯೊಳಗೆಲ್ಲಾ ಕಳೆ ಗಿಡಗಳು ಬೆಳೆದಿವೆ. ಬೆಂಚುಗಳೆಲ್ಲಾ ತುಕ್ಕು ಹಿಡಿದಿವೆ. ಎಲ್ಲೆಡೆ ಹಕ್ಕಿ ಮತ್ತು ಬಾವಲಿಗಳ ತ್ಯಾಜ್ಯ ಹರಡಿವೆ. ನೀರಿಲ್ಲದೆ ಬೇಲಿ ಗಿಡಗಳು ಒಣಗಿವೆ. ನೆಲದಲ್ಲಿ ಒಣ ಎಲೆಗಳು ಹರಡಿವೆ. ಕಿಡಿಗೇಡಿಗಳು ಬೆಂಕಿ ಹಚ್ಚಿದರೆ ಉದ್ಯಾನವೇ ಹೊತ್ತಿ ಉರಿಯುವ ಅಪಾಯದಲ್ಲಿದೆ.

ಸೋಮವಾರ ಸ್ವಚ್ಛತೆ
ಕೊರೊನಾ ಕಾರಣದಿಂದ ಜನಸಂದಣಿ ಸೇರಿ ಅಪಾಯವಾದರೆ ಎಂಬ ಆತಂಕದಿಂದ ಉದ್ಯಾನ ಮುಚ್ಚಲಾಗಿದೆ. ಈಗಾಗಲೇ ಎಲ್ಇಡಿ ದೀಪಗಳನ್ನೆಲ್ಲಾ ಅಲ್ಲಿ ಅಳವಡಿಸಿದ್ದೇವೆ. ಎಲೆ ಉದುರುವ ಕಾಲ ಆದ್ದರಿಂದ ಒಣ ಎಲೆಗಳೆಲ್ಲಾ ಹರಡಿವೆ. ಸೋಮವಾರದಿಂದ ಉದ್ಯಾನ ಸ್ವಚ್ಛಗೊಳಿಸಲಾಗುವುದು. ನಂತರ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು.
- ಶ್ರೀನಿವಾಸ್, ಪೌರಾಯುಕ್ತ, ಶಿಡ್ಲಘಟ್ಟ

ನಿರ್ವಹಣೆ ಕೊರತೆ
ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ನಗರಸಭೆ ಪಕ್ಕದಲ್ಲೇ ಆಂಜನೇಯರೆಡ್ಡಿ ಉದ್ಯಾನವಿದೆ. ಆದರೆ, ನಿರ್ವಹಣೆ ಬಗ್ಗೆ ಪುರಪಿತೃಗಳು ಸೇರಿದಂತೆ ಯಾರೂ ಗಮನವಹಿಸುತ್ತಿಲ್ಲ. ಉದ್ಯಾನದಲ್ಲಿ ಹೊಸದಾಗಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ‌ಟ್ಯಾಂಕ್ ನಿರ್ಮಾಣಕ್ಕೆ ಬೇರೆ ಜಾಗ ಸಿಗಲಿಲ್ಲವೇ.
-ರಾಮಪ್ಪ, ಚಿಂತಾಮಣಿ

ಸೂಕ್ತ ಕ್ರಮಕ್ಕೆ ನಿರ್ಧಾರ
ಗೌರಿಬಿದನೂರಿನಲ್ಲಿ ಈ ಹಿಂದೆ ಉದ್ಯಾನಗಳಿಗಾಗಿ ಮೀಸಲಿಟ್ಟ ಪ್ರತ್ಯೇಕ ನಿವೇಶನಗಳನ್ನು ಕೆಲವರು ರಾಜಕೀಯ ಪ್ರಭಾವ ಹಾಗೂ ಅಧಿಕಾರಿಗಳ ಹೊಂದಾಣಿಕೆಯ ಕಾರಣ ಒತ್ತುವರಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲು ಮುಂದಾಗುತ್ತೇವೆ.
-ಕೆ.ಎಂ. ಗಾಯತ್ರಿ ಬಸವರಾಜು, ನಗರಸಭೆ ಅಧ್ಯಕ್ಷೆ, ಗೌರಿಬಿದನೂರು

ನೌಕರರ ಕೊರತೆ
ಗುಡಿಬಂಡೆಯ 11 ಕಡೆ ಉದ್ಯಾನಗಳು ಇವೆ. ಪಟ್ಟಣ ಪಂಚಾಯಿತಿ‌ ನೌಕರರ ಕೊರತೆಯಿಂದ ನಿರ್ವಹಣೆ ಕಷ್ಟಸಾಧ್ಯವಾಗಿದೆ.
-ರಾಜಶೇಖರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಗುಡಿಬಂಡೆ

ಮಕ್ಕಳನ್ನು ಆಕರ್ಷಿಸುವ ಪಾರ್ಕ್‌ ಇಲ್ಲ
ನಗರಸಭೆಯು ಉದ್ಯಾನಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಉದ್ಯಾನಗಳು ಚೆನ್ನಾಗಿದ್ದರೆ ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಆಟವಾಡಿಸಬಹುದು. ಆದರೆ, ಅಂತಹ ಉದ್ಯಾನಗಳು ನಗರದಲ್ಲಿ ಇಲ್ಲ. ಬೆಂಗಳೂರಿಗೆ ಸಮೀಪವಿದ್ದರೂ ಉತ್ತಮವಾದ ಮಕ್ಕಳನ್ನು ಮತ್ತು ನಾಗರಿಕರನ್ನು ಆಕರ್ಷಿಸುವ ಮಟ್ಟದ ಉದ್ಯಾನಗಳು ಜಿಲ್ಲಾ ಕೇಂದ್ರದಲ್ಲಿ ಇಲ್ಲ.
-ನರಸಿಂಹಯ್ಯ, ಚಿಕ್ಕಬಳ್ಳಾಪುರ

***

ಜನರ ಆಕರ್ಷಿಸದ ಆಂಜನೇಯರೆಡ್ಡಿ ಉದ್ಯಾನ
ಚಿಂತಾಮಣಿ:
ನಗರದ ಜನರಿಗೆ ಮನರಂಜನೆ ಒದಗಿಸುತ್ತಿದ್ದ ಇಲ್ಲಿನ ನಗರಸಭೆಯ‌ ಆಂಜನೇಯರೆಡ್ಡಿ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆ ಬಸವಳಿದಿದೆ. ಉದ್ಯಾನದಲ್ಲಿದ್ದ ಕಾರಂಜಿ ಸಂಪೂರ್ಣ ಬತ್ತಿದೆ.

ನಾಗರಿಕರ ಅನುಕೂಲಕ್ಕಾಗಿ ಹಾಳಾಗಿದ್ದ ಉದ್ಯಾನವನ್ನು ₹ 75 ಲಕ್ಷವೆಚ್ಚದಲ್ಲಿ ನವೀಕರಣಗೊಳಿಸಲಾಗಿತ್ತು. ಹೊಸದಾಗಿ ಹುಲ್ಲುಹಾಸನ್ನು ನಿರ್ಮಿಸಿ, ನೀರಿನ ಕಾರಂಜಿ, ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ‌

ನಗರದ ಪ್ರಮುಖ ರಸ್ತೆಯಾದ ಜೋಡಿ ರಸ್ತೆಗೆ ಹೊಂದಿಕೊಂಡಿರುವುದರಿಂದ‌ ರಸ್ತೆಯಲ್ಲಿ ಹೋಗುವವರಿಗೂ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಲಕ್ಷಾಂತರ ಖರ್ಚು ಮಾಡಿ ನವೀಕರಣಗೊಳಿಸಿರುವ ಉದ್ಯಾನ ಸೂಕ್ತ ನಿರ್ವಹಣೆ ಮಾಡದೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ಉದ್ಯಾನದ ಮಧ್ಯಭಾಗದಲ್ಲಿರುವ ಕಾರಂಜಿಯಲ್ಲಿ ನೀರು ವಸರಿ ವರ್ಷಗಳೇ ಕಳೆದಿವೆ. ಈ ಬಗ್ಗೆ ನಗರಸಭೆಯವರು ಗಮನಹರಿಸುತ್ತಿಲ್ಲ. ಕಾರಂಜಿ ಕೆಟ್ಟು ಕುಳಿತಿರುವುದರಿಂದ ದಿನಕಳೆದಂತೆ ಸಾರ್ವಜನಿಕರ ಆಕರ್ಷಣೆ ಕಡಿಮೆ ಆಗುತ್ತಿದೆ. 

ಸಾಯಂಕಾಲವಾಯಿತು ಎಂದರೆ ಮಕ್ಕಳು ಉದ್ಯಾನಕ್ಕೆ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದರು. ಬಣ್ಣ ಬಣ್ಣದ ವಿದ್ಯುತ್ ದೀಪಗಳ ಆಕರ್ಷಣೆ, ಬಣ್ಣ ಬಣ್ಣದ ನೀರಿನ ಕಾರಂಜಿ ಮಕ್ಕಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು. ವಿದ್ಯುತ್ ದೀಪಗಳು ಹಾಳಾಗಿವೆ.

ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ವಾಯುವಿಹಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬಹಳಷ್ಟು ಮಹಿಳೆಯರು ವಾಯುವಿಹಾರಕ್ಕೆ ಬರುವರು. ಮಧ್ಯಾಹ್ನ ವಿದ್ಯಾರ್ಥಿಗಳು ಹಾಗೂ ಹೊರಗಿನಿಂದ ಬರುವ ವ್ಯಕ್ತಿಗಳು ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಗರದ ಜನರಿಗೆ ಏಕೈಕ ಆಕರ್ಷಣೆಯಾಗಿರುವ ಉದ್ಯಾನವನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ದಶಕಗಳಿಂದ ಅಭಿವೃದ್ಧಿ ಕಾಣದ ಉದ್ಯಾನಗಳು
ಗೌರಿಬಿದನೂರು:
ನಗರದ ಪ್ರತಿ ವಾರ್ಡಿನ ಅಭಿವೃದ್ಧಿ ಆಗುವ ಆರಂಭದಲ್ಲಿ ಸರ್ಕಾರ ಹಾಗೂ ನಗರ ಯೋಜನಾ ಪ್ರಾಧಿಕಾರದ ಆದೇಶದಂತೆ ಉದ್ಯಾನವನಕ್ಕೆ ಜಾಗ ಮೀಸಲಿಟ್ಟು ಅಲ್ಲಿ ಸುಸಜ್ಜಿತವಾದ ಉದ್ಯಾನ ಮತ್ತು ಆಟೋಪಕರಣಗಳನ್ನು ಅಳವಡಿಸಿ ಸ್ಥಳೀಯ ನಾಗರಿಕರ ಬಳಕೆಗೆ ಅವಕಾಶ ಮಾಡಬೇಕಾಗಿದೆ.

ಆದರೆ ನಗರದಲ್ಲಿ ದಶಕಗಳ ಹಿಂದೆಯೇ ನಿರ್ಮಾಣವಾದ ಬಹುತೇಕ ಬಡಾವಣೆಗಳಲ್ಲಿ ಪ್ರತ್ಯೇಕ ಉದ್ಯಾನಗಳಿಲ್ಲ. ಅಲ್ಲದೆ ಮೀಸಲಾದ ಜಾಗಗಳು ಸಹ ಒತ್ತುವರಿಗೆ ಬಲಿಯಾಗಿವೆ.

ನಗರದಲ್ಲಿ ಅಳಿದುಳಿದ ಉದ್ಯಾನಗಳು ನಾಗರಿಕರ ವಾಯುವಿಹಾರ ಹಾಗೂ ವಿಶ್ರಾಂತಿಗೆ ಯೋಗ್ಯವಾಗಿರದೆ ಯುವಕರ ಅಕ್ರಮ ಚಟುವಟಿಕೆಗಳ ತಾಣಗಳಾಗಿವೆ. ಇವುಗಳ ನಿರ್ವಹಣೆಗಾಗಿ ನಗರಸಭೆಯ ಬಜೆಟ್‌ನಲ್ಲಿ ಪ್ರತೀ ವರ್ಷ ಅನುದಾನ ಮೀಸಲಿಡುತ್ತಾರೆ. ಆದರೆ ಅದರ ಬಳಕೆ ಮಾತ್ರ ಮರೀಚಿಕೆಯಾಗಿದೆ.

ಉದ್ಯಾನಗಳ ಅವ್ಯವಸ್ಥೆಯನ್ನು ನೋಡಿರುವ ಜನರು ವಾಯು ವಿಹಾರಕ್ಕಾಗಿ ಹೊರವರ್ತುಲದಲ್ಲಿರುವ ಬೈಪಾಸ್ ರಸ್ತೆಗಳು, ನೂತನ ಬಡಾವಣೆಗಳು, ರೈಲ್ವೆ ಸ್ಟೇಷನ್ ಪ್ಲಾಟ್ ಪಾರಂ, ಕಾಲೇಜು ಆವರಣ ಸೇರಿದಂತೆ ಇನ್ನಿತರ ಪ್ರದೇಶಗಳನ್ನು ಅವಲಂಭಿಸಿದ್ದಾರೆ. ದಶಕಗಳಿಂದಲೂ ನಗರದ ಉದ್ಯಾನಗಳ ಸ್ಥಿತಿ ಮಾತ್ರ ಬದಲಾಗಿಲ್ಲ.

ಬತ್ತಿದ ಕಾರಂಜಿ: ಮಂಕಾದ ಆಕರ್ಷಣೆ
ಚಿಂತಾಮಣಿ:
ನಗರದ ಜನರಿಗೆ ಮನರಂಜನೆ ಒದಗಿಸುತ್ತಿದ್ದ ಇಲ್ಲಿನ ನಗರಸಭೆಯ‌ ಆಂಜನೇಯರೆಡ್ಡಿ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆ ಬಸವಳಿದಿದೆ. ಉದ್ಯಾನದಲ್ಲಿದ್ದ ಕಾರಂಜಿ ಸಂಪೂರ್ಣ ಬತ್ತಿದೆ.

ನಾಗರಿಕರ ಅನುಕೂಲಕ್ಕಾಗಿ ಹಾಳಾಗಿದ್ದ ಉದ್ಯಾನವನ್ನು ₹ 75 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಲಾಗಿತ್ತು. ಹೊಸದಾಗಿ ಹುಲ್ಲುಹಾಸನ್ನು ನಿರ್ಮಿಸಿ, ನೀರಿನ ಕಾರಂಜಿ, ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ‌

ನಗರದ ಪ್ರಮುಖ ರಸ್ತೆಯಾದ ಜೋಡಿರಸ್ತೆಗೆ ಹೊಂದಿಕೊಂಡಿರುವುದರಿಂದ‌ ರಸ್ತೆಯಲ್ಲಿ ಹೋಗುವವರಿಗೂ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಲಕ್ಷಾಂತರ ಖರ್ಚು ಮಾಡಿ ನವೀಕರಣಗೊಳಿಸಿರುವ ಉದ್ಯಾನ ಸೂಕ್ತ ನಿರ್ವಹಣೆ ಮಾಡದೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ಉದ್ಯಾನದ ಮಧ್ಯಭಾಗದಲ್ಲಿರುವ ಕಾರಂಜಿಯಲ್ಲಿ ನೀರು ವಸರಿ ವರ್ಷಗಳೇ ಕಳೆದಿವೆ. ಈ ಬಗ್ಗೆ ನಗರಸಭೆಯವರು ಗಮನಹರಿಸುತ್ತಿಲ್ಲ. ಕಾರಂಜಿ ಕೆಟ್ಟು ಕುಳಿತಿರುವುದರಿಂದ ದಿನಕಳೆದಂತೆ ಸಾರ್ವಜನಿಕರ ಆಕರ್ಷಣೆ ಕಡಿಮೆ ಆಗುತ್ತಿದೆ.

ಸಾಯಂಕಾಲವಾಯಿತು ಎಂದರೆ ಮಕ್ಕಳು ಉದ್ಯಾನಕ್ಕೆ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದರು. ಬಣ್ಣ ಬಣ್ಣದ ವಿದ್ಯುತ್ ದೀಪಗಳ ಆಕರ್ಷಣೆ, ಬಣ್ಣ ಬಣ್ಣದ ನೀರಿನ ಕಾರಂಜಿ ಮಕ್ಕಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದವು. ವಿದ್ಯುತ್ ದೀಪಗಳು ಹಾಳಾಗಿವೆ.

ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ವಾಯುವಿಹಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬಹಳಷ್ಟು ಮಹಿಳೆಯರು ವಾಯುವಿಹಾರಕ್ಕೆ ಬರುವರು. ಮಧ್ಯಾಹ್ನ ವಿದ್ಯಾರ್ಥಿಗಳು ಹಾಗೂ ಹೊರಗಿನಿಂದ ಬರುವ ವ್ಯಕ್ತಿಗಳು ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಗರದ ಜನರಿಗೆ ಏಕೈಕ ಆಕರ್ಷಣೆಯಾಗಿರುವ ಉದ್ಯಾನವನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ದಶಕಗಳಿಂದ ಅಭಿವೃದ್ಧಿ ಕಂಡಿಲ್ಲ
ಗೌರಿಬಿದನೂರು:
ನಗರದ ಪ್ರತಿ ವಾರ್ಡಿನ ಅಭಿವೃದ್ಧಿ ಆಗುವ ಆರಂಭದಲ್ಲಿ ಸರ್ಕಾರ ಹಾಗೂ ನಗರ ಯೋಜನಾ ಪ್ರಾಧಿಕಾರದ ಆದೇಶದಂತೆ ಉದ್ಯಾನಕ್ಕೆ ಜಾಗ ಮೀಸಲಿಟ್ಟು ಅಲ್ಲಿ ಸುಸಜ್ಜಿತವಾದ ಉದ್ಯಾನ ಮತ್ತು ಆಟೋಪಕರಣಗಳನ್ನು ಅಳವಡಿಸಿ ಸ್ಥಳೀಯ ನಾಗರಿಕರ ಬಳಕೆಗೆ ಅವಕಾಶ ಮಾಡಬೇಕಾಗಿದೆ.

ಆದರೆ ನಗರದಲ್ಲಿ ದಶಕಗಳ ಹಿಂದೆಯೇ ನಿರ್ಮಾಣವಾದ ಬಹುತೇಕ ಬಡಾವಣೆಗಳಲ್ಲಿ ಪ್ರತ್ಯೇಕ ಉದ್ಯಾನಗಳಿಲ್ಲ. ಅಲ್ಲದೆ ಮೀಸಲಾದ ಜಾಗಗಳು ಸಹ ಒತ್ತುವರಿಗೆ ಬಲಿಯಾಗಿವೆ.

ನಗರದಲ್ಲಿ ಅಳಿದುಳಿದ ಉದ್ಯಾನಗಳು ನಾಗರಿಕರ ವಾಯುವಿಹಾರ ಹಾಗೂ ವಿಶ್ರಾಂತಿಗೆ ಯೋಗ್ಯವಾಗಿರದೆ ಯುವಕರ ಅಕ್ರಮ ಚಟುವಟಿಕೆಗಳ ತಾಣಗಳಾಗಿವೆ. ಇವುಗಳ ನಿರ್ವಹಣೆಗಾಗಿ ನಗರಸಭೆಯ ಬಜೆಟ್‌ನಲ್ಲಿ ಪ್ರತೀ ವರ್ಷ ಅನುದಾನ ಮೀಸಲಿಡುತ್ತಾರೆ. ಆದರೆ ಅದರ ಬಳಕೆ ಮಾತ್ರ ಮರೀಚಿಕೆಯಾಗಿದೆ.

ಉದ್ಯಾನಗಳ ಅವ್ಯವಸ್ಥೆಯನ್ನು ನೋಡಿರುವ ಜನರು ವಾಯುವಿಹಾರಕ್ಕಾಗಿ ಹೊರವರ್ತುಲದಲ್ಲಿರುವ ಬೈಪಾಸ್ ರಸ್ತೆಗಳು, ನೂತನ ಬಡಾವಣೆಗಳು, ರೈಲ್ವೆ ಸ್ಟೇಷನ್ ಪ್ಲಾಟ್ ಪಾರಂ, ಕಾಲೇಜು ಆವರಣ ಸೇರಿದಂತೆ ಇನ್ನಿತರ ಪ್ರದೇಶಗಳನ್ನು ಅವಲಂಬಿಸಿದ್ದಾರೆ. ದಶಕಗಳಿಂದಲೂ ನಗರದ ಉದ್ಯಾನಗಳ ಸ್ಥಿತಿ ಮಾತ್ರ ಬದಲಾಗಿಲ್ಲ.

ಮದ್ಯ ವ್ಯಸನಿಗಳಿಗೆ ಆಶ್ರಯ ತಾಣ
ಗುಡಿಬಂಡೆ:
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಉದ್ಯಾನಗಳಿವೆ. ಇವು ಜಾನುವಾರುಗಳಿಗೆ ಹಾಗೂ ಮದ್ಯವ್ಯಸನಿಗಳಿಗೆ ಆಶ್ರಯ ತಾಣಗಳಾಗಿವೆ.

ದಶಕಗಳ ಹಿಂದೆ ಬೆಟ್ಟದ ಕೆಳಗಿನಪೇಟೆ ಬಳಿ ಬೃಹತ್ ಕಲ್ಯಾಣಿ ಮುಚ್ಚಿ ಉದ್ಯಾನ ನಿರ್ಮಿಸಲಾಯಿತು. ನಂತರ ಸುರುಸದ್ಮಗಿರಿ ತಪ್ಪಲು, ತಿರುಮಲ ನಗರ, ಬೆಳಗಿರಂಗನಬಾವಿ, ಪೊಲೀಸ್ ಬಡಾವಣೆ ಹಿಂಭಾಗ, ಅಮಾನಿ ಬೈರಸಾಗರ ಕೆರೆಯ ಬಳಿ 2 ಕಡೆ, ನೀರು ಶುದ್ಧೀಕರಣ ಘಟಕದ ಬಳಿ 3 ಉದ್ಯಾನಗಳು ನಿರ್ಮಾಣವಾದವು.

ಬಹುತೇಕ ಉದ್ಯಾನಗಳು ನಿರ್ವಹಣೆ ಇಲ್ಲದೆ ಕಳೆಗಿಡಗಳು ಬೆಳೆದು ವನಗಳಾಗಿವೆ.‌ ಕೆಲವು ಕಡೆ ನೀರಿನ ವ್ಯವಸ್ಥೆ ಇಲ್ಲ. ಗಿಡಗಳು ಒಣಗಿ ಹುಲ್ಲು, ಮುಳ್ಳುಗಳು ಉದ್ಯಾನ ಆವರಿಸಿವೆ. ಜನವಸತಿ ಪ್ರದೇಶದಲ್ಲಿನ ಉದ್ಯಾನಗಳಿಗೆ ಗೇಟಿಗೆ ಬೀಗಹಾಕಿ ಯಾರು ಹೋಗದಂತೆ ಮಾಡಲಾಗಿದೆ.

ಉದ್ಯಾನಗಳಿಗೆ ನೀರಿನ ಅಶ್ರಯ ಇರುವ ಸಂತೆ ಮೈದಾನದಲ್ಲಿನ ಬೆಳಗಿರಿರಂಗನ ಬೃಹತ್ ಕಲ್ಯಾಣಿಯಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ. ಇದು ಯುವಕರಿಗೆ ಈಜುಕೊಳವಾಗಿದೆ. ಆದರೆ ಉದ್ಯಾನಕ್ಕೆ ನೀರು ಕೊರತೆ ಎದುರಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.