ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ಗಾದಿಗೆ ನಾಯಕರ ಪೈಪೋಟಿ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅವರ ಅವಧಿ ಮುಕ್ತಾಯ, ಕೇಸರಿ ಪಾಳೆಯದಲ್ಲಿ ಚುರುಕುಗೊಂಡ ತೆರೆಮರೆಯ ಲಾಬಿ
Last Updated 4 ಜನವರಿ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಲೋಕಸಭೆ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುತ್ತಿದ್ದಂತೆ ಕೇಸರಿ ಪಾಳೆಯದಲ್ಲಿ ಸಂಚಲನ ಮೂಡಿದ್ದು, ಶೀಘ್ರದಲ್ಲಿಯೇ ತೆರವಾಗುತ್ತಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ಏರಲು ಮುಖಂಡರ ನಡುವೆ ತೆರೆಮರೆಯ ಪೈಪೋಟಿ ನಡೆದಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಅವರ ಅವಧಿಯು ಒಂದು ವಾರದಲ್ಲಿ ಮುಕ್ತಾಯವಾಗುತ್ತಿದೆ. ಹೀಗಾಗಿ, ಬಿಜೆಪಿ ಪಾಳೆಯದಲ್ಲಿ ಮಂಜುನಾಥ್‌ ಅವರ ಉತ್ತರಾಧಿಕಾರಿಯಾಗಲು ಅನೇಕ ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾರಣ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಿಂದೆಂದಿಗಿಂತಲೂ ಈ ಬಾರಿ ‘ಬೇಡಿಕೆ’ ಹೆಚ್ಚಿದ್ದು, ಅನೇಕರು ತಮ್ಮ ನಾಯಕರ ಮೂಲಕ ರಾಜ್ಯ ಮಟ್ಟದಲ್ಲಿ ‘ಲಾಬಿ’ ನಡೆಸುವ ಕೆಲಸ ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಜ್ಯ ಘಟಕದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಆಯ್ಕೆಗಾಗಿ, ಜಿಲ್ಲೆಗೆ ಒಬ್ಬ ಚುನಾವಣಾಧಿಕಾರಿಯನ್ನು ನೇಮಕ ಮಾಡುವ ಜತೆಗೆ ಪದಾಧಿಕಾರಿಗಳ ಆಯ್ಕೆ ಸಮಿತಿಯನ್ನು ರಚಿಸಿದೆ. ಜಿಲ್ಲೆಯ ಚುನಾವಣಾಧಿಕಾರಿ ಬ್ಯಾಟರಂಗೇಗೌಡ ಅವರಿಗೆ ಈಗಾಗಲೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಸುಮಾರು 20 ಮುಖಂಡರು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಪದಾಧಿಕಾರಿಗಳ ಆಯ್ಕೆ ಸಮಿತಿ ಆಕಾಂಕ್ಷಿಗಳ ಕುರಿತಂತೆ ಜಿಲ್ಲೆಯಲ್ಲಿರುವ ಬಿಜೆಪಿಯ ಮುಖಂಡರ ಬಳಿ ಅಭಿಪ್ರಾಯ ಸಂಗ್ರಹಿಸುವ ಜತೆಗೆ, ಆಕಾಂಕ್ಷಿಗಳ ಪೂರ್ವಾಪರ ಪರಿಶೀಲನೆ ನಡೆಸಿ, ಅಳೆದು ತೂಗಿ ಆರು ಅಭ್ಯರ್ಥಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿ, ಅಂತಿಮ ಆಯ್ಕೆಗಾಗಿ ರಾಜ್ಯಮಟ್ಟದ ವರಿಷ್ಠರಿಗೆ ಕಳುಹಿಸಿಕೊಟ್ಟಿದೆ ಎನ್ನಲಾಗಿದೆ.

ಸದ್ಯ ಪದಾಧಿಕಾರಿಗಳ ಆಯ್ಕೆ ಸಮಿತಿ ಬಿಜೆಪಿ ರಾಜ್ಯ ಹೈಕಮಾಂಡ್‌ಗೆ ಕಳುಹಿಸಿರುವ ಪಟ್ಟಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ, ಬಾಗೇಪಲ್ಲಿಯ ರಾಮಲಿಂಗಪ್ಪ, ಈ ಹಿಂದೊಮ್ಮೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ, ಮೂರು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡ ಚಿಂತಾಮಣಿಯ ಮಹೇಶ್‌, ಕೆಲ ವರ್ಷಗಳ ಹಿಂದೆ ಯುವ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದ, ಸದ್ಯ ಜಿಲ್ಲಾ ಕಾರ್ಯಕಾರಣಿ ಸದಸ್ಯರಾಗಿರುವ ಚಿಂತಾಮಣಿಯ ಪ್ರತಾಪ್, ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಪೇರೇಸಂದ್ರದ ರಾಮರೆಡ್ಡಿ ಮತ್ತು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ ಪೇರೇಸಂದ್ರ
ವಿಜಯಕುಮಾರ್ ಅವರ ಹೆಸರಿವೆ ಎಂದು ತಿಳಿದು ಬಂದಿದೆ.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ಜ್ಯೋತಿ ರೆಡ್ಡಿ, ಚಿಕ್ಕಬಳ್ಳಾಪುರ ಮಂಡಲ್ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಸೇರಿದಂತೆ ಇನ್ನು ಕೆಲ ಪ್ರಭಾವಿ ಮುಖಂಡರು ಅಧ್ಯಕ್ಷ ಗಾದೆ ಏರಲು ತೀವ್ರ ಪೈಪೋಟಿ ನಡೆಸಿ, ಹೈಕಮಾಂಡ್ ನಿಗದಿಪಡಿಸಿದ ವಯೋಮಿತಿ (58 ವರ್ಷ) ದಾಟಿದ ಕಾರಣಕ್ಕೆ ಸ್ಪರ್ಧೆ ಮಾಡಲಾಗದೆ ಒಳಗೊಳಗೆ ಬೇಗುದಿ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಈಗಾಗಲೇ ಬಿಜೆಪಿ ರಾಜ್ಯಮಟ್ಟದ ವರಿಷ್ಠರು ಪದಾಧಿಕಾರಿಗಳ ಆಯ್ಕೆ ಸಮಿತಿ ಸಲ್ಲಿಸಿದ ಪಟ್ಟಿಯಲ್ಲಿನ ಒಂದು ಹೆಸರನ್ನು ಆಯ್ಕೆ ಮಾಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎನ್ನಲಾಗಿದೆ. ಶಾಸಕ ಡಾ.ಕೆ.ಸುಧಾಕರ್ ಅವರು ಸದ್ಯ ವಿದೇಶ ಪ್ರಯಾಣದಲ್ಲಿದ್ದು, ಅವರು ಪ್ರವಾಸದಿಂದ ವಾಪಾಸಾದ ನಂತರ ನೂತನ ಅಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT