ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೊದಲ ಬಾರಿ ಗರಿಷ್ಠ ಅಭ್ಯರ್ಥಿಗಳು

Published 22 ಏಪ್ರಿಲ್ 2024, 7:07 IST
Last Updated 22 ಏಪ್ರಿಲ್ 2024, 7:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ 29 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.  

ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ನಡುವೆ ಪ್ರಚಾರದ ಅಬ್ಬರ ಎದ್ದು ಕಾಣುತ್ತಿದೆ. ಈ ಇಬ್ಬರಿಗೂ ಮತ್ತು ಪಕ್ಷಗಳಿಗೆ ಸಾಂಕೇತಿಕ ಪ್ರತಿರೋಧ ಎನ್ನುವ ಮಟ್ಟಿಗಾದರೂ ಇತರೆ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿಲ್ಲ.  ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವ ಸ್ಥಿತಿಗೆ ಕಾರಣವಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ 18,648 ಮತಗಳು ಮತ್ತು ಬಿಸ್‌ಪಿಯಿಂದ ಸ್ಪರ್ಧಿಸಿದ್ದ ಸಿ.ಎಸ್. ದ್ವಾರಕಾನಾಥ್ 23,446 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ. ವೀರಪ್ಪ ಮೊಯಿಲಿ ಮತ್ತು ಬಿಜೆಪಿಯ ಬಿ.ಎನ್. ಬಚ್ಚೇಗೌಡ ಅವರ ತರುವಾಯ ಗರಿಷ್ಠ ಮತಗಳನ್ನು ಈ ಇಬ್ಬರು ಅಭ್ಯರ್ಥಿಗಳು ಪಡೆದಿದ್ದರು. ಈ ಇಬ್ಬರು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಉತ್ತಮವಾಗಿ ಪ್ರಚಾರ ಸಹ ನಡೆಸಿದ್ದರು. 

ಈ ಬಾರಿ ಬಿಎಸ್‌ಪಿಯಿಂದ ಮಹದೇವ್ ಪಿ, ಸಿಪಿಎಂನಿಂದ ಎಂ.ಪಿ. ಮುನಿವೆಂಕಟಪ್ಪ, ‌ಎಸ್‌ಯುಸಿಐನಿಂದ ಕಲಾವತಿ ಎನ್., ದಿಗ್ವಿಜಯ ಭಾರತ ಪಾರ್ಟಿಯಿಂದ ನಾಗೇಶ್ ಎಸ್., ಇಂಡಿಯನ್ ಲೇಬರ್ ಪಕ್ಷದಿಂದ ಟಿ.ಆರ್. ನಾರಾಯಣರಾವ್, ಉತ್ತಮ ಪ್ರಜಾಕೀಯ ಪಕ್ಷದಿಂದ ವೆಂಕಟೇಶ ಮೂರ್ತಿ.ವಿ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಜಿ.ಸುಬ್ರಮಣಿ ಶೆಟ್ಟಿ ಸ್ಪರ್ಧಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಜಿ.ಎನ್. ಕೋದಂಡರೆಡ್ಡಿ, ಚಂದ್ರಶೇಖರ ಎಚ್.ಸಿ, ಡಿ.ಚಿನ್ನಪ್ಪ, ದೇವರಾಜ್ ಕೊರೋನ ವಾರಿಯರ್, ವಿ.ಎನ್. ನರಸಿಂಹಮೂರ್ತಿ ವಡಿಗೆರೆ, ನಸರುಲ್ಲಾ, ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ, ಮೋಹಿತ್ ನರಸಿಂಹಮೂರ್ತಿ, ಜಿ.ಎನ್. ರವಿ, ರಾಜಣ್ಣ, ರಾಜರೆಡ್ಡಿ, ಎಂ.ಆರ್. ರಂಗನಾಥ, ಸಿ.ವಿ. ಲೋಕೇಶ್ ಗೌಡ, ವಲಸಪಲ್ಲಿ ಉತ್ತಪ್ಪ, ಟಿ.ವೆಂಕಟಶಿವುಡು, ಕೆ.ವೆಂಕಟೇಶ್, ಜಿ.ಎನ್. ವೆಂಕಟೇಶ್, ಸುಧಾಕರ್ ಎನ್., ಡಿ.ಸುಧಾಕರ, ಸಂದೇಶ್ ಜಿ. ಸ್ಪರ್ಧೆಯಲ್ಲಿ ಇದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹೆಜ್ಜೆ ಗುರುತುಗಳನ್ನು ನೋಡಿದರೆ ಸಿಪಿಎಂ ಮತ್ತು ಬಿಎಸ್‌ಪಿ ಪ್ರತಿ ಚುನಾವಣೆಯಲ್ಲಿ ‘ಪ್ರತಿರೋಧ’ಕ್ಕಾಗಿ ಮತ್ತು ತಮ್ಮ ವಿಚಾರಗಳನ್ನು ಜನರಿಗೆ ಸ್ಪಷ್ಟಪಡಿಸುವ ಉದ್ದೇಶದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿವೆ.  

ಕ್ಷೇತ್ರದಲ್ಲಿ ಜನತಾದಳ, ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಯಾವ ಪಕ್ಷಗಳೂ ಗೆಲುವು ಸಾಧಿಸಿಲ್ಲ. ಆದರೆ ಈ ಮೂರು ಪಕ್ಷಗಳ ಅಭ್ಯರ್ಥಿಗಳ ನಂತರ ಗರಿಷ್ಠ ಮತಗಳನ್ನು ಪಡೆಯುತ್ತಿರುವುದು ಸಿಪಿಎಂ ಮತ್ತು ಬಿಎಸ್‌ಪಿ ಅಭ್ಯರ್ಥಿಗಳು. 

ತೃತೀಯ ಶಕ್ತಿಗಳ ಸ್ಪರ್ಧೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ವಿಚಲಿತಗೊಳಿಸುವುದು ಸತ್ಯ. ಯಾರ ಮತ ಬುಟ್ಟಿಗೆ ಸಣ್ಣ ಪ್ರಮಾಣದಲ್ಲಿಯಾದರೂ ಕೈ ಹಾಕುವರು ಎನ್ನುವ ಚರ್ಚೆಗಳು ಚುನಾವಣೆ ಸಮಯದಲ್ಲಿ ಆರಂಭವಾಗುತ್ತದೆ. 

ಆದರೆ ಈ ಚುನಾವಣೆಯಲ್ಲಿ ತೃತೀಯ ಶಕ್ತಿಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಇವೆ. 

2014ರ ಲೋಕಸಭೆ ಚುನಾವಣೆಯಲ್ಲಿ ಸಿಪಿಎಂನಿಂದ ಸ್ಪರ್ಧಿಸಿದ್ದ ಬಾಗೇಪಲ್ಲಿಯ ಜಿ.ವಿ.ಶ್ರೀರಾಮರೆಡ್ಡಿ ಅವರು 26,071 ಮತ್ತು ಬಿಎಸ್‌ಪಿಯಿಂದ ಕಣಕ್ಕೆ ಇಳಿದಿದ್ದ ಚೈತ್ರಾ ಪ್ರಸಾದ್ 6,279 ಮತಗಳನ್ನು ಪಡೆದಿದ್ದರು.  

1999ರ ಚುನಾವಣೆಯಲ್ಲಿ ಸಿಪಿಎಂನಿಂದ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಕಣಕ್ಕೆ ಇಳಿದಿದ್ದರು. ಅಂತಿಮವಾಗಿ ಜೆಡಿಎಸ್ ಮತ್ತು ಸಿಪಿಎಂ ಹೊಂದಾಣಿಕೆ ಆಯಿತು. ಆದರೆ ನಾಮಪತ್ರ ವಾಪಸ್ ಪಡೆಯುವ ಅವಧಿ ಅಷ್ಟರಲ್ಲಿ ಪೂರ್ಣವಾಗಿತ್ತು. ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೂ ಸಿಪಿಎಂ, ಜೆಡಿಎಸ್ ಬೆಂಬಲಿಸುವಂತೆ ಕೋರಿತು. ಆದರೂ ಜಿ.ಸಿ.ಬಯ್ಯಾರೆಡ್ಡಿ 17,434 ಮತಗಳನ್ನು ಪಡೆದರು.

2009ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಕಣಕ್ಕೆ ಇಳಿದಿದ್ದ ಹೆಣ್ಣೂರು ಲಕ್ಷ್ಮಿನಾರಾಯಣ್ 14,629, 1998ರ ಚುನಾವಣೆಯಲ್ಲಿ ಬಿಎಸ್‌ಪಿಯ ಎನ್‌.ಶಿವಣ್ಣ 6,037 ಮತಗಳನ್ನು ಪಡೆದಿದ್ದರು. ಸಿಪಿಎಂ ನಾಲ್ಕು ಚುನಾವಣೆಗಳಲ್ಲಿ ಮತ್ತು ಬಿಎಸ್‌ಪಿ ಐದು ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಸಿಪಿಎಂನಿಂದ ಕಣಕ್ಕೆ ಇಳಿದಿರುವ ಎಂ.ಪಿ.ಮುನಿವೆಂಕಟಪ್ಪ ಅವರ ಪ್ರಚಾರ ಬಾಗೇಪಲ್ಲಿಗೆ ಮಾತ್ರ ಸೀಮಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT