ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕುತೂಹಲದ ಘಟ್ಟದಲ್ಲಿ ಬಿಜೆಪಿ ಟಿಕೆಟ್

20 ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯಾದರೂ ಚಿಕ್ಕಬಳ್ಳಾಪುರ ಅಭ್ಯರ್ಥಿ ಘೋಷಣೆಯಿಲ್ಲ
Published 14 ಮಾರ್ಚ್ 2024, 4:28 IST
Last Updated 14 ಮಾರ್ಚ್ 2024, 4:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಿಜೆಪಿಯು ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಈ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗದಿರುವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಿಶೇಷವಾಗಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೌತುಕ ಮೂಡಿಸಿದೆ. 

ಹಾಲಿ ಸಂಸದ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಪಕ್ಷದ ಹೈಕಮಾಂಡ್ ಸಹ ಅವರಿಗೆ ಈ ಬಾರಿ ಟಿಕೆಟ್ ನೀಡುತ್ತಿರಲಿಲ್ಲ. ಸದ್ಯ ಮಾಜಿ ಸಚಿವ ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ಹೆಸರು ಟಿಕೆಟ್‌ಗೆ ಪ್ರಮುಖವಾಗಿ ಕೇಳಿ ಬರುತ್ತಿದೆ. ಈ ಇಬ್ಬರು ನಾಯಕರು ಈಗಾಗಲೇ ಸಂಘಟನೆಯಲ್ಲಿ ತೊಡಗಿದ್ದಾರೆ. 

ವಿಧಾನಸಭೆ ಚುನಾವಣೆಯ ಸೋಲಿನ ತರುವಾಯದಿಂದಲೇ ಡಾ.ಕೆ.ಸುಧಾಕರ್ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವರು ಎನ್ನುವ ಮಾತುಗಳು ಕೇಳಿ ಬಂದಿದ್ದವು. ನಂತರ ದಿನಗಳಲ್ಲಿ ವಿಶ್ವನಾಥ್ ಸಹ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಇಬ್ಬರು ನಾಯಕರು ಸಭೆಗಳನ್ನು ನಡೆಸಿದ್ದಾರೆ. ಮುಖಂಡರನ್ನು ಭೇಟಿ ಆಗುತ್ತಿದ್ದಾರೆ. 

ಅಲೋಕ್ ವಿಶ್ವನಾಥ್ ಮತ್ತು ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್ ದೊರೆಯಲು ಇರುವ ಬಲಾಬಲಗಳ ಬಗ್ಗೆ ಬಿಜೆಪಿ ನಾಯಕರಲ್ಲಿಯೇ ದೊಡ್ಡ ಚರ್ಚೆ ನಡೆದಿದೆ. ಮುಖಂಡರು ಸಹ ‘ಬಣ’ಗಳಲ್ಲಿ ಗುರುತಿಸಿಕೊಂಡಿದ್ದಾರೆ. ಡಾ.ಕೆ.ಸುಧಾಕರ್ ಟಿಕೆಟ್ ನೀಡುವಂತೆ ಆಗಾಗ್ಗೆ ದೆಹಲಿಗೆ ತೆರಳಿ ವರಿಷ್ಠರನ್ನು ಸಹ ಭೇಟಿ ಮಾಡುತ್ತಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿಯ ತರುವಾಯ ಸುಧಾಕರ್ ಹೆಸರು ಹೆಚ್ಚು ಚಾಲ್ತಿಗೆ ಬಂದಿತ್ತು. ಅವರೇ ಅಭ್ಯರ್ಥಿಯಾಗುವರು ಎನ್ನುವ ಮಾತುಗಳು ಪಕ್ಷದ ವೇದಿಕೆಗಳಲ್ಲಿ ಕೇಳಿ ಬಂದಿದ್ದವು. 

ಮತ್ತೊಂದು ಕಡೆ ವಿಶ್ವನಾಥ್ ಸಹ ತಮಗೆ ಇರುವ ‘ಆಪ್ತ’ ಬಳಗದ ಮೂಲಕ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದರು. ಈ ಹಿಂದಿನಿಂದಲೂ ವಿಶ್ವನಾಥ್, ಯಡಿಯೂರಪ್ಪ ಮತ್ತು ವಿಜಯೇಂದ್ರ ಬಳಗಕ್ಕೆ ತೀರಾ ಹತ್ತಿರವಿದ್ದಾರೆ. ಯಡಿಯೂರಪ್ಪ ಅವರ ಸಂಬಂಧಿಯೂ ಆದ ಬೆಂಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಸ್ವಾಮಿ, ಕ್ರೆಡೆಲ್ ಮಾಜಿ ಅಧ್ಯಕ್ಷ ರುದ್ರೇಶ್‌ ಹೀಗೆ ಬಿಎಸ್‌ವೈ ‘ಬಳಗ’ದ ಮುಖಂಡರೂ ಇದಕ್ಕೆ ಸಾಥ್ ನೀಡಿದ್ದಾರೆ ಎನ್ನುತ್ತವೆ ಮೂಲಗಳು.  

ಜೆಡಿಎಸ್ ನಾಯಕರ ಮಾತಿಗೂ ಮನ್ನಣೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ತನ್ನದೇ ಆದ ಮತ ಬ್ಯಾಂಕ್ ಇದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ, ದೇವೇಗೌಡರು ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನೂ  ಸುಧಾಕರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಇತ್ತೀಚೆಗೆ ಬೆಂಗಳೂರಿನ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ನಾಯಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಅಲೋಕ್ ವಿಶ್ವನಾಥ್ ಮತ್ತು ಡಾ.ಕೆ.ಸುಧಾಕರ್ ಅವರ ಬಲಾಬಲದ ಬಗ್ಗೆ ಮುಖಂಡರಿಂದ ಎಚ್‌ಡಿಕೆ ಅಭಿಪ್ರಾಯ ಸಹ ಪಡೆದಿದ್ದರು. ಎನ್‌ಡಿಎ ಅಭ್ಯರ್ಥಿ ಯಾರೇ ಆದರೂ ಅವರ ‍ಪರವಾಗಿ ಕೆಲಸ ಮಾಡುವಂತೆ ಜೆಡಿಎಸ್ ಮುಖಂಡರಿಗೆ ಸೂಚಿಸಿದ್ದಾರೆ. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಉತ್ತಮ ನೆಲೆ ಇರುವ ಕಾರಣ ದಳಪತಿಗಳ ವಿಶ್ವಾಸ ಪಡದೇ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಬೇಕಾಗಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಜೆಡಿಎಸ್ ಮುಖಂಡರು ಸಹ ಪಾತ್ರವಹಿಸುವ ಸಾಧ್ಯತೆ ಇದೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಆಯ್ಕೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. 

ಇಷ್ಟೆಲ್ಲಾ ಕಸರತ್ತು ನಡೆಸಿದರೂ ಬುಧವಾರ ಬಿಡುಗಡೆಯಾದ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗದಿರುವುದು ನಾನಾ ಲೆಕ್ಕಾಚಾರಗಳು, ಚರ್ಚೆಯನ್ನು ಬಿರುಸುಗೊಳಿಸಿದೆ. 

ಡಾ.ಕೆ.ಸುಧಾಕರ್, ಅಲೋಕ್ ವಿಶ್ವನಾಥ್ ಹೊರತುಪಡಿಸಿ ಹೊಸ ಅಭ್ಯರ್ಥಿಯ ಪ್ರವೇಶದ ಸಾಧ್ಯತೆಯ ಬಗ್ಗೆಯೂ ಮುಖಂಡರಲ್ಲಿ ಕುತೂಹಲವಿದೆ. ರಾಜ್ಯದಲ್ಲಿ ಬಿಜೆಪಿ ಟಿಕೆಟ್ ನೀಡಿರುವ 20 ಕ್ಷೇತ್ರಗಳಲ್ಲಿ ಕೆಲವು ಕ್ಷೇತ್ರಗಳ ಲೆಕ್ಕಾಚಾರಗಳನ್ನು ಗಮನಿಸಿದರೆ ರಾಜಕೀಯ ‘ಆಟ’ಗಳು ಏನು ಬೇಕಾದರೂ ಆಗಬಹುದು ಎನಿಸುತ್ತದೆ.

ಕಾದು ನೋಡುವ ತಂತ್ರವೇ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದ ನಂತರ ಬಿಜೆಪಿಯು ಅಭ್ಯರ್ಥಿ ಘೋಷಿಸಲಿದೆಯೇ ಎನ್ನುವ ಕುತೂಹಲವಿದೆ. 

ಆದರೆ ಡಾ.ಕೆ.ಸುಧಾಕರ್ ಆಪ್ತ ಬಳಗದ ಮುಖಂಡರು ಮಾತ್ರ, ‘ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್ ದೊರೆಯುತ್ತದೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್

ಡಾ.ಕೆ.ಸುಧಾಕರ್, ಅಲೋಕ್ ವಿಶ್ವನಾಥ್ ಹೆಸರು ಚರ್ಚೆಯಲ್ಲಿ ದಳಪತಿಗಳ ವಿಶ್ವಾಸ ಪಡದೇ ಅಭ್ಯರ್ಥಿ ಘೋಷಣೆ  ಹೊಸ ಮುಖಕ್ಕೆ ಮುನ್ನಣೆಯೇ ಎನ್ನುವ ಚರ್ಚೆ

‘ಉತ್ತರ’ದ ಚರ್ಚೆಯಿಂದ ವಿಳಂಬವೇ

ಡಾ.ಕೆ.ಸುಧಾಕರ್ ಕಾಂಗ್ರೆಸ್ ಸೇರುತ್ತಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವರು ಎನ್ನುವ ಮಾತುಗಳು ಸಹ ಕೇಳಿ ಬಂದವು. ಈ ಬಗ್ಗೆ ವ್ಯಾಪಕವಾದ ಚರ್ಚೆಗಳೇ ನಡೆದವು. ಈ ಚರ್ಚೆಗಳ ಕಾರಣದಿಂದಲೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸುಧಾಕರ್ ಅಂತಿಮಗೊಳ್ಳುವುದಕ್ಕೆ ತೊಡಕಾಯಿತೇ ಎನ್ನುವ ಮಾತುಗಳು ಬಿಜೆಪಿಯಲ್ಲಿಯೇ ಕೇಳಿ ಬರುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT