ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಮಾಡಪ್ಪಲ್ಲಿ ಗ್ರಾಮ

ಕೆರೆಯ ಕೆಮ್ಮಣ್ಣಿನ ನೀರು ಸರಬರಾಜು; ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಗ್ರಾಮಸ್ಥರು
Last Updated 20 ಅಕ್ಟೋಬರ್ 2020, 2:52 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬೆಟ್ಟ-ಗುಡ್ಡಗಳ ಮಧ್ಯದಲ್ಲಿನ ಕುಗ್ರಾಮ. ಓಡಾಡಲು ಗ್ರಾಮದಲ್ಲಿ ರಸ್ತೆಗಳೇ ಇಲ್ಲ. ಗುಂಡಿಗಳದ್ದೇ ಕಾರುಬಾರು. ಬಸ್‌ ಸೌಲಭ್ಯವೂ ಇಲ್ಲ. ಇಲ್ಲಿನ ಜನರಿಗೆ ಪೂರೈಕೆಯಾಗುತ್ತಿರುವುದು ಕೆರೆಯ ಕೆಮ್ಮಣ್ಣು ಮಿಶ್ರಿತ ನೀರು. ಸ್ವಚ್ಛತೆ ಇಲ್ಲಿ ಮರೀಚಿಕೆ. ಶೌಚಾಲಯಗಳೂ ಇಲ್ಲ. ಇದರ ಜೊತೆಗೆ, ಗಣಿಗಾರಿಕೆಯಿಂದ ಗ್ರಾಮಸ್ಥರ ನೆಮ್ಮದಿಯೂ ಭಂಗ ಬಂದಿದೆ...

ಇಂತಹ ಹತ್ತಾರು ಸಮಸ್ಯೆಗಳೊಂದಿಗೆ ಮೂಲ ಸೌಲಭ್ಯಗಳ ಕೊರತೆಯೊಂದಿಗೆ ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಪ್ಪಲ್ಲಿ ಗ್ರಾಮ ಇದೆ. ಮಾರ್ಗಾನುಕುಂಟೆಯಿಂದ ಹೊನ್ನಂಪಲ್ಲಿ ಕ್ರಾಸ್ ಮೂಲಕ 2 ಕಿ.ಮೀ ನಷ್ಟು ದೂರ ಸಂಚರಿಸಿದರೆ ಮಾಡಪ್ಪಲ್ಲಿ ಗ್ರಾಮ ಇದೆ. ಗ್ರಾಮದಲ್ಲಿ 80 ಕುಟುಂಬಗಳ ಪೈಕಿ 550 ಮಂದಿ ಜನರು ಇದ್ದಾರೆ. ಗ್ರಾಮದಲ್ಲಿ ಬಹುತೇಕವಾಗಿ ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿ ವಾಸವಾಗಿದ್ದಾರೆ. ಬೆಟ್ಟ-ಗುಡ್ಡಗಳ ಪಕ್ಕದಲ್ಲಿ ಮಾಡಪ್ಪಲ್ಲಿ ಗ್ರಾಮ, ತಾಲ್ಲೂಕಿನ ಗಡಿ ಗ್ರಾಮವಾಗಿದೆ. ಕೂಗಳತೆಯಲ್ಲಿ ಆಂಧ್ರಪ್ರದೇಶ.

ಕಳೆದ 30 ವರ್ಷಗಳ ಹಿಂದೆ ಬೆಟ್ಟ-ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗ್ರಾಮದಲ್ಲಿ ಕೃಷಿಕರು ಮುಸಕಿನಜೋಳ, ರಾಗಿ, ಭತ್ತ, ನೆಲಗಡಲೆದಂತಹ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಇದೇ ಬೆಟ್ಟ-ಗುಡ್ಡಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದರಿಂದ ಸುಂದರವಾಗಿ ಕಂಗೊಳಿಸುತ್ತಿದ್ದ ಬೆಟ್ಟ-ಗುಡ್ಡಗಳು ಬೋಳಾಗುತ್ತಿವೆ. ಕಲ್ಲುಗಣಿಗಾರಿಕೆಯಿಂದ ಸುತ್ತಮುತ್ತಲಿನ ಬೆಳೆಗಳಿಗೂ ಹಾನಿಯಾಗಿದೆ. ರಸ್ತೆಗಳು ಹಾಳಾಗಿದೆ.

ಬೃಹತ್ ಭಾರದ ಹೊತ್ತ ಲಾರಿಗಳ ಸಂಚಾರದಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ. ಜಲ್ಲಿ-ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ, ಗ್ರಾಮಸ್ಥರು ಕಾಲುದಾರಿಯಲ್ಲಿ ನಡೆದಾಡುವ ಸಂಕಷ್ಟ ಅನುಭವಿಸುವಂತೆ ಮಾಡಿದೆ. ಸುತ್ತಲೂ ಕಲ್ಲುಗಳ ಪುಡಿ ಬೆಳೆಗಳ ಮೇಲೆ ಸುತ್ತುವರಿದು, ಬೆಳೆಗಳು ಬಾರದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

ಡಾಂಬರು ಕಾಣದ ಮಣ್ಣು ರಸ್ತೆಗಳು ಬೃಹತ್‌ ಲಾರಿಗಳ ಸಂಚಾರದಿಂದ ಹಾಳಾಗಿವೆ. ಮಳೆಯ ನೀರು ರಸ್ತೆಯ ಗುಂಡಿಗಳಲ್ಲಿ ಶೇಖರಣೆ ಆಗಿ, ರಸ್ತೆಯೆಲ್ಲ ಕೆಸರುಮಯವಾಗಿದೆ. ಗ್ರಾಮಸ್ಥರು ಕನಿಷ್ಠ ದ್ವಿಚಕ್ರ ವಾಹನಗಳಲ್ಲಿ ಸಹ ಸಂಚರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆಯಲ್ಲಿ ಕೊಳವೆಬಾವಿ: ಗ್ರಾಮಕ್ಕೆ ನೀರು ಸರಬರಾಜು ಮಾಡುವ ಕೊಳವೆಬಾವಿ ಕೆರೆಯಲ್ಲಿ ಮುಳುಗಿದೆ. ಕಳೆದ 10 ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದೀಗ ಕೆರೆಯ ಕೆಮ್ಮಣ್ಣಿನ ನೀರು ಗ್ರಾಮದ ಕೊಳಾಯಿಗಳಲ್ಲಿ ಸರಬರಾಜು ಆಗುತ್ತಿದೆ. ಗ್ರಾಮಸ್ಥರು ಇದೇ ನೀರನ್ನು ಹಿಡಿದುಕೊಳ್ಳುತ್ತಿದ್ದಾರೆ, ಕಾಯಿಸಿಕೊಂಡು ಕುಡಿಯುತ್ತಿದ್ದಾರೆ. ಮತ್ತೆ ಕೆಲವರು ಮಾರ್ಗಾನುಕುಂಟೆ, ಕೊತ್ತಕೋಟೆ ಗ್ರಾಮಗಳಿಗೆ ದ್ವಿಚಕ್ರ ವಾಹನಗಳಿಗೆ ಬಿಂದಿಗೆಗಳನ್ನು ಕಟ್ಟಿಕೊಂಡು ನೀರು ಹೊತ್ತು ತರುತ್ತಿದ್ದಾರೆ. ಇದೀಗ ಪಂಚಾಯಿತಿಯಿಂದ ಗ್ರಾಮಕ್ಕೆ ಪ್ರತ್ಯೇಕವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ಕೆಲವರಿಗೆ ನೀರು ಸಿಗುತ್ತಿಲ್ಲ. ದಿನನಿತ್ಯ ಬಳಕೆಗೂ ನೀರು ಸಿಗದೇ ತೊಂದರೆ ಅನುಭವಿಸುವಂತಾಗಿದೆ.

‘ಕೃಷಿ ಚಟುವಟಿಕೆಗಳನ್ನು ಬಿಟ್ಟು ನೀರು ಸಂಗ್ರಹ ಮಾಡುವುದೇ ಪ್ರತಿನಿತ್ಯ ಕಾಯಕವನ್ನಾಗಿ ಮಾಡಿಕೊಂಡಿದ್ದೇವೆ’ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಫ್ಲೋರೈಡ್ ರಹಿತ ನೀರು ಕೊಡಿ...

‘ಮಾಡಪ್ಪಲ್ಲಿ ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಆಟೊ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಾಗೇಪಲ್ಲಿಗೆ ಬರಬೇಕಾಗಿದೆ. ಗ್ರಾಮದ ಮಹಿಳೆಯರು, ವೃದ್ಧರು, ಮಕ್ಕಳು 2 ಕಿ.ಮೀ ನಷ್ಟು ದೂರ ನಡೆಯಬೇಕು. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಅವೈಜ್ಞಾನಿಕದಿಂದ ಚರಂಡಿಗಳು ಮಾಡಿರುವುದರಿಂದ, ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಪಂಚಾಯಿತಿಯ ಅಧಿಕಾರಿಗಳು ಚರಂಡಿಗಳನ್ನು ಸ್ವಚ್ಛತೆ ಮಾಡಿಸಿಲ್ಲ. ಹೂಳು ತುಂಬಿಕೊಂಡು, ದುರ್ನಾತ ಬೀರುತ್ತಿವೆ. ಕಾಯಿಲೆ ಬರುವ ಆತಂಕವಿದೆ. ತುರ್ತು ಆರೋಗ್ಯ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಆಗುತ್ತಿದೆ’ ಎಂದು ಗ್ರಾಮದ ಪದ್ಮಾವತಮ್ಮ, ರಾಧಮ್ಮ ತಿಳಿಸಿದ್ದಾರೆ.

‘ಗ್ರಾಮದ ಪಕ್ಕದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಇದರಿಂದ ಗ್ರಾಮಸ್ಥರ ನೆಮ್ಮದಿಯ ಬದುಕಿಗೆ ತೊಂದರೆ ಆಗಿದೆ. ಕೆರೆಯ ನೀರು ಕುಡಿದರೆ, ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ ಫ್ಲೋರೈಡ್ ರಹಿತ ಕುಡಿಯುವ ನೀರು ಪೂರೈಸಬೇಕು. ರಸ್ತೆ, ಸ್ವಚ್ಛತೆ ಮಾಡಿಸಬೇಕು. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು’ ಎಂದು ಗ್ರಾಮಸ್ಥ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT