ಹೊಸ್ತಿಲು ದಾಟಿ ಬಂದ ‘ಮಮತೆಯ ತೊಟ್ಟಿಲು’

7
ಕೊನೆಗೂ ಎಚ್ಚೆತ್ತುಕೊಂಡ ಅಧಿಕಾರಿಗಳು, ಸರ್ಕಾರಿ ಬಾಲಕಿಯರ ಬಾಲ ಮಂದಿರದ ಆವರಣದಲ್ಲಿ ವಿನೂತನ ತೊಟ್ಟಿಲು ಅಳವಡಿಕೆಗೆ ಸಿದ್ಧತೆ

ಹೊಸ್ತಿಲು ದಾಟಿ ಬಂದ ‘ಮಮತೆಯ ತೊಟ್ಟಿಲು’

Published:
Updated:
ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಆವರಣದಲ್ಲಿ ಇಡಲಾದ ‘ಮಮತೆಯ ತೊಟ್ಟಿಲು’

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ, ಅತ್ಯಾಚಾರ, ಲಿಂಗ ತಾರತಮ್ಯ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ತಾಯಿಗೆ ಬೇಡವಾದ ನವಜಾತ ಶಿಶುಗಳಿಗೆ ಸುರಕ್ಷಿತ ನೆಲೆ ಕಲ್ಪಿಸುವ ‘ಮಮತೆಯ ತೊಟ್ಟಿಲು’ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಹೊಸ್ತಿಲ ದಾಟಿ ಹೊರಗೆ ಬಂದಿದೆ!

ಜಿಲ್ಲಾ ಆಸ್ಪತ್ರೆ, ಪ್ರತಿ ತಾಲ್ಲೂಕು ಆಸ್ಪತ್ರೆ, ಸಾಂತ್ವನ ಕೇಂದ್ರ, ಸರ್ಕಾರಿ ಬಾಲಕಿಯರ ಬಾಲ ಮಂದಿರ ಮತ್ತು ಸ್ವಾಧಾರ ಕೇಂದ್ರದಲ್ಲಿ ಈವರೆಗೆ ಮೂಲೆ ಸೇರಿ ಧೂಳು ತಿನ್ನುತ್ತ ಈ ತೊಟ್ಟಿಲುಗಳು ಜನಸಾಮಾನ್ಯರಿಗೆ ಕಣ್ಣಿಗೆ ಗೋಚರಿಸದಂತಿದ್ದವು. ಪರಿಣಾಮ, ಪರಿತ್ಯಕ್ತ ಶಿಶುಗಳನ್ನು ಬೇಲಿ ಪೊದೆ, ಖಾಲಿ ನಿವೇಶನ, ಬಾವಿ, ಚರಂಡಿ ಮುಂತಾದ ಕಡೆಗಳಲ್ಲಿ ಎಸೆದು ಹೋಗುವ ಅಮಾನವೀಯ ಪ್ರಕರಣಗಳು ಪದೇ ಪದೇ ವರದಿಯಾಗುತ್ತಲೇ ಇದ್ದವು.

ಈ ಬಗ್ಗೆ ‘ಪ್ರಜಾವಾಣಿ’ ಮೇಲಿಂದ ಮೇಲೆ ವಿಶೇಷ ವರದಿಗಳನ್ನು ಪ್ರಕಟಿಸುತ್ತಲೇ ಬಂದಿತ್ತು. ವರದಿಗಳಿಂದ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಇದೀಗ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಆವರಣದಲ್ಲಿ ‘ಮಮತೆಯ ತೊಟ್ಟಿಲು’ ಪ್ರತಿಷ್ಠಾಪನೆಗೆ ಮುಂದಾಗಿದ್ದಾರೆ.

ಏನೀ ತೊಟ್ಟಿಲು ವಿಶೇಷತೆ?

ತಮಗೆ ಬೇಡವಾದ ಶಿಶುವನ್ನು ಪೋಷಕರು ಎಲ್ಲೆಂದರಲ್ಲಿ ಎಸೆದು ಹೋಗುವ ಬದಲು ಈ ತೊಟ್ಟಿಲಲ್ಲಿ ಹಾಕಿ ಹೋದರೆ ಸಾಕು. ಅವರನ್ನು ಯಾರೊಬ್ಬರೂ ಪ್ರಶ್ನಿಸುವುದಿಲ್ಲ. ಬದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಯೇ ಆ ಮಗುವನ್ನು ಆರೈಕೆ ಮಾಡುವ ಜತೆಗೆ ನಾಮಕರಣ ಕೂಡ ಮಾಡುತ್ತಾರೆ. ಮಕ್ಕಳಿಲ್ಲದ ದಂಪತಿಗೆ ಮಗುವನ್ನು ದತ್ತು ನೀಡಿ, ಆಸ್ತಿ ಹಕ್ಕಿನ ಜತೆಗೆ ಕುಟುಂಬದ ವಾತಾವರಣ ಕಲ್ಪಿಸುವ ಕೆಲಸ ಮಾಡುತ್ತಾರೆ.

ಪರಿತ್ಯಕ್ತ ಶಿಶುಗಳಿಗೆ ನೆಲೆ ಒದಗಿಸುವ ಜತೆಗೆ ಬದುಕು ಕಲ್ಪಿಸಿಕೊಡುವ ಉದಾತ್ತ ಆಶಯದಿಂದ ರಾಜ್ಯ ಸರ್ಕಾರ 2013ರಲ್ಲಿ ‘ದೇವರ ತೊಟ್ಟಿಲು’ ಯೋಜನೆ ಜಾರಿಗೆ ತಂದಿತು. ಕಳೆದ ನವೆಂಬರ್‌ನಲ್ಲಿ ಈ ಯೋಜನೆಯ ಹೆಸರನ್ನು ‘ಮಮತೆಯ ತೊಟ್ಟಿಲು’ ಎಂದು ಮರುನಾಮಕರಣ ಮಾಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಈವರೆಗೆ ಇದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಅಷ್ಟಾಗಿ ನಡೆದಿಲ್ಲ ಎನ್ನುವುದು ಪ್ರಜ್ಞಾವಂತರ ದೂರಾಗಿತ್ತು.

ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಪರಿತ್ಯಕ್ತ ಶಿಶುಗಳು ಎಲ್ಲೆಂದರಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇದ್ದವು. ಅನೇಕ ಶಿಶುಗಳಿಗೆ ಇರುವೆ, ಇಲಿ, ಹೆಗ್ಗಣ, ಹಂದಿ, ನಾಯಿ ಕಚ್ಚಿ ಗಾಯಗೊಳಿಸಿದ ಹೃದಯ ವಿದ್ರಾವಕ ಉದಾಹರಣೆಗಳು ಉಂಟು.

ಐದು ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಸುಮಾರು 60ಕ್ಕೂ ಅಧಿಕ ಶಿಶುಗಳು ಬೀದಿ, ಬೇಲಿ, ಪೊದೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಪತ್ತೆಯಾಗಿವೆ. ಕಳೆದ ವರ್ಷವೊಂದರಲ್ಲೇ ಜಿಲ್ಲೆಯಲ್ಲಿ ಇಂತಹ 8 ಪ್ರಕರಣಗಳು ವರದಿಯಾಗಿದ್ದವು. ಇದೇ ವರ್ಷದಲ್ಲಿ ಈವರೆಗೆ 4 ಶಿಶುಗಳು ಬೀದಿ ಬದಿ ಎಸೆದು ಹೋಗಲಾಗಿದೆ.

13 ಶಿಶುಗಳು ಸಾವು

ಈ ‘ತೊಟ್ಟಿಲು’ ಯೋಜನೆ ಜಾರಿಗೆ ಬಂದ ನಂತರದಲ್ಲಿ ಈವರೆಗೆ ಜಿಲ್ಲೆಯಲ್ಲಿ ಸುಮಾರು 13 ಪ್ರಕರಣಗಳಲ್ಲಿ ಶಿಶುಗಳು ನಾಯಿ, ವಿವಿಧ ಪ್ರಾಣಿಗಳು ದಾಳಿಗೆ ನಲುಗಿ ಜೀವ ತೆತ್ತಿವೆ. ಕೆಲ ತಿಂಗಳ ಹಿಂದಷ್ಟೇ ಚಿಕ್ಕಬಳ್ಳಾಪುರದ ಮುನ್ಸಿಫಲ್ ಕಾಲೇಜಿನ ಹಿಂಭಾಗದಲ್ಲಿ ಎಸೆದು ಹೋದ ಶಿಶು ಚಳಿಯ ಥರಗುಟ್ಟಿ ಹೋಗಿ, ಜಿಲ್ಲಾ ಆಸ್ಪತ್ರೆಗೆ ತಂದು ಆರೈಕೆ ಮಾಡಿದರೂ ಚಿಕಿತ್ಸೆ ಸ್ಪಂದಿಸದೆ ಅಸುನೀಗಿತ್ತು. ಇತ್ತೀಚೆಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಜೀವಂತ ಶಿಶುವನ್ನು ಮಣ್ಣಿನಲ್ಲಿ ಹೂತು ಹಾಕಿದ್ದನ್ನು ಸ್ಥಳೀಯರು ನೋಡಿ ರಕ್ಷಣೆ ಮಾಡಿದ್ದರು. ಗೌರಿಬಿದನೂರು ತಾಲ್ಲೂಕಿನ ಹುದಗೂರಿನಲ್ಲಿ ತಿಪ್ಪೆಯಲ್ಲಿ ಎಸೆದ ಶಿಶುವೊಂದನ್ನು ಬೀದಿ ನಾಯಿಗಳು ಮುಕ್ಕಾಲು ಭಾಗ ತಿಂದು ಹಾಕಿದ್ದವು.

ದಯವಿಟ್ಟು ಶಿಶು ತೊಟ್ಟಿಲಲ್ಲಿ ಹಾಕಿ

‘ವಿವಿಧ ಕಾರಣಗಳಿಗಾಗಿ ಬೇಡವಾದ ಶಿಶುಗಳನ್ನು ಪೋಷಕರು ಪ್ರಾಣಿಗಳಿಗಿಂತ ಕಡೆಯಾಗಿ, ನಿರ್ದಯವಾಗಿ ಎಲ್ಲೆಂದರಲ್ಲಿ ಎಸೆದು ನಾಯಿ, ನರಿಗಳಿಗೆ ಆಹಾರ ಮಾಡುವ ಬದಲು ಸುರಕ್ಷಿತವಾಗಿ ಈ ತೊಟ್ಟಿಲಲ್ಲಿ ಹಾಕಲಿ. ಆ ಶಿಶುಗಳನ್ನು ನಾವು ಚೆನ್ನಾಗಿ ಪೋಷಣೆ ಮಾಡುತ್ತೇವೆ. ಮಕ್ಕಳಿಲ್ಲದ ಸಾಕಷ್ಟು ದಂಪತಿಗಳು ದತ್ತು ಮಕ್ಕಳಿಗಾಗಿ ನಮ್ಮಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಂತಹವರಿಗೆ ಈ ಮಕ್ಕಳನ್ನು ದತ್ತು ನೀಡಿ ಉತ್ತಮ ಬದುಕು ಕಲ್ಪಿಸಿ ಕೊಡುತ್ತೇವೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್.ಪಿ.ರಾಜೇಂದ್ರ ಪ್ರಸಾದ್.

ಬೇಡವಾದ ಶಿಶುವನ್ನು ತ್ಯಜಿಸುವ ಪೋಷಕರ ಗಮನ ಸೆಳೆಯಲು ವಿನೂತನ ಬಗೆಯ ತೊಟ್ಟಿಲು ನಿರ್ಮಾಣ ಮಾಡಿಸಿದ್ದೇವೆ. ಶೀಘ್ರದಲ್ಲೇ ಅದನ್ನು ಉದ್ಘಾಟಿಸಲಾಗುವುದು
ಎನ್.ಪಿ.ರಾಜೇಂದ್ರ ಪ್ರಸಾದ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !