ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಸಂಧ್ಯಾವಂದನೆ ಮಂಟಪ ಮುಳುಗಡೆ

ಮಲೆನಾಡಿನಲ್ಲಿ ಧಾರಾಕಾರ ಮಳೆ– ಹಲವೆಡೆ ರಸ್ತೆ ಸಂಪರ್ಕ ಕಡಿತ
Last Updated 14 ಜೂನ್ 2018, 19:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸದಲ್ಲಿ ಧಾರಾಕಾರ ಮಳೆ ಸುರಿದಿದೆ. ಬುಧವಾರ ರಾತ್ರಿಯಿಂದ ಗುರುವಾರದ ವರೆಗೆ ಎಡೆಬಿಡದೆ ಮಳೆ ಸುರಿದ ಪರಿಣಾಮವಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭದ್ರಾ ನದಿಯ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದೆ.

ತುಂಗಾನದಿ ಉಕ್ಕಿ ಹರಿದು ಶೃಂಗೇರಿಯ ಶಾರದಾ ಪೀಠದ ಗುರುಗಳಾದ ಭಾರತೀ ತೀರ್ಥ ಸ್ವಾಮೀಜಿ ಅವರ ಸ್ನಾನ ಘಟ್ಟ, ಸಂಧ್ಯಾವಂದನೆ ಮಂಟಪ ಹಾಗೂ ಕಪ್ಪೆ ಶಂಕರ ದೇವಾಲಯ ಮುಳುಗಿದೆ.

ತುಂಗೆ ಉಕ್ಕಿ ಹರಿದು ಕೇವಲ 4 ಅಡಿ ನೀರು ಎತ್ತರಕ್ಕೆ ಬಂದಿದ್ದರೆ ದೇವಸ್ಥಾನ ಅಂಗಳಕ್ಕೆ ನೀರು ಬಂದು, ಇಡೀ ಶೃಂಗೇರಿಯ ಮುಖ್ಯ ಬೀದಿಗಳಲ್ಲಿ ಪ್ರವಾಹ ಉಂಟಾಗುತ್ತಿತ್ತು. ನದಿ ಉಕ್ಕಿ ಹರಿಯುವಾಗಕಾಳಿಂಗ ಸರ್ಪದಂತಹ ಜೀವ ಜಂತುಗಳು, ಮರದ ದಿಮ್ಮಿಗಳು ತೇಲಾಡುತ್ತಿದ್ದವು.

ಬಾರಿ ಮಳೆಯಿಂದ ಕುರಬಕೇರಿಯ ಕೆಲವು ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವನ್ನುಂಟು ಮಾಡಿದ್ದು, ಅಲ್ಲಿನ ಜನರನ್ನು ಮತ್ತೊಂದು ಜಾಗಕ್ಕೆ ವರ್ಗಾಯಿಸಲಾಗಿದೆ. ಅವರಿಗೆ ತಾಲ್ಲೂಕು ಆಡಳಿತದ ವತಿಯಿಂದ ತಾತ್ಕಾಲಿಕ ವಸತಿ ಮತ್ತು ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ. ಗೌರಿಶಂಕರ ಸಭಾಂಗಣದಲ್ಲಿ ಪ್ರವಾಹದಿಂದ ನೊಂದ ಸಂತ್ರಸ್ತರಿಗೆ ಗಂಜಿಕೇಂದ್ರ ಸ್ಥಾಪಿಸಲಾಗಿದೆ.

ಮೂಡಿಗೆರೆ ತಾಲ್ಲೂಕಿನಾದ್ಯಂತ ಗುರುವಾರ ಮಧ್ಯಾಹ್ನದ ವರೆಗೂ ಧಾರಾಕಾರ ಮಳೆ ಸುರಿದಿದ್ದು, ಮಲೆನಾಡು ಅಕ್ಷರಶಃ ಜಲಾವೃತಗೊಂಡಿದೆ. ಹೇಮಾವತಿ, ಚಿಕ್ಕಳ್ಳ, ರಾಮಕ್ಕನಹಳ್ಳ, ಊರುಬಗೆಹಳ್ಳ, ಜಪಾವತಿನದಿ, ದೊಡ್ಡಳ್ಳ ಸೇರಿದಂತೆ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ನದಿಯ ಇಕ್ಕೆಲದ ಪ್ರದೇಶಗಳು ಅಪಾಯದಂಚಿನಲ್ಲಿವೆ.

**

ರೈಲು ಹಳೆಯ ಮೇಲೆ ಕುಸಿದ ಗುಡ್ಡ

ಮಂಗಳೂರು: ಸುಬ್ರಹ್ಮಣ್ಯ–ಸಿರಿಬಾಗಿಲು ನಿಲ್ದಾಣಗಳ ಮಧ್ಯೆ ಭೂ ಕುಸಿತ ಉಂಟಾಗಿದ್ದರಿಂದ ಗುರುವಾರ ಮಂಗಳೂರು–ಬೆಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ.

ಹಾಸನದಿಂದ 86 ಕಿ.ಮೀ. ದೂರದ ಸಿರಿಬಾಗಿಲು ಮತ್ತು ಸುಬ್ರಹ್ಮಣ್ಯ ನಿಲ್ದಾಣಗಳ ಮಧ್ಯೆ ಹಠಾತ್ತಾಗಿ ರೈಲು ಹಳಿಯ ಮೇಲೆ ಗುಡ್ಡ ಕುಸಿದಿದೆ. ಗುರುವಾರ ಬೆಳಿಗ್ಗೆ 10.50ಕ್ಕೆ ಮಂಗಳೂರಿನಿಂದ ಹೊರಟಿದ್ದ ಕಾರವಾರ –ಬೆಂಗಳೂರು ರೈಲು ಸುಬ್ರಹ್ಮಣ್ಯದವರೆಗೆ ಮಾತ್ರ ಸಂಚರಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲು ಸಕಲೇಶಪುರದಲ್ಲಿಯೇ ಪ್ರಯಾಣ ಮೊಟಕುಗೊಳಿಸಿದೆ.

**

ಇಂದು ರಜೆ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಶುಕ್ರವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT