ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹರಂ: ಹಿಂದೂ–ಮುಸ್ಲಿಮರ ಭಾವೈಕ್ಯತೆ ಸಂಕೇತ

Published 2 ಆಗಸ್ಟ್ 2023, 13:27 IST
Last Updated 2 ಆಗಸ್ಟ್ 2023, 13:27 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಬೈಲಾಂಜನೇಯಸ್ವಾಮಿ ದೇವಾಲಯದ ಚಾವಡಿಯಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಸೇರಿ ಮೊಹರಂನ ಬಾಬಯ್ಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಮೆರೆದರು. 

ಪಟ್ಟಣದಲ್ಲಿರುವ ಪುರಾತನ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಹಿಂದೂಗಳು ಪೂಜಿಸಿದರೆ, ದೇವಾಲಯದ ಕಟ್ಟಡದಲ್ಲೇ ಇರುವ ಬಾಬಯ್ಯನ ಪೀರುಗಳ ಚಾವಡಿಯಲ್ಲಿ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ. ಬೈಲಾಂಜನೇಯ ಮತ್ತು ಪೀರುಗಳಿಗೆ ಪತೇಹಾ(ಪ್ರಾರ್ಥನೆ) ಏಕಕಾಲದಲ್ಲಿ ಸಲ್ಲುತ್ತದೆ. ಇದು ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಸೌಹಾರ್ದ ಮೂಡಿಸುವ ಬಾಂಧವ್ಯದ ಕೊಂಡಿಗಳಾಗಿವೆ ಎಂಬ ಅಭಿಪ್ರಾಯವಿದೆ. 

ಮೊಹರಂ ಹಬ್ಬದ ಪ್ರಯುಕ್ತ ಚಾವಡಿಗೆ ಸುಣ್ಣ-ಬಣ್ಣ ಬಳಿದು, ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಪೀರುಗಳ ಚಾವಡಿಯಲ್ಲಿ ಪಂಜಗಳನ್ನು ಇಟ್ಟು ಪೂಜಿಸಲಾಯಿತು. ಬಳಿಕ ಪಟ್ಟಣದ ಮುಖ್ಯರಸ್ತೆ, ಗೂಳೂರು ರಸ್ತೆಯಲ್ಲಿ ಹಸ್ತಗಳು ಹಾಗೂ ಪಂಜಗಳನ್ನು ಮೆರವಣಿಗೆ ಮಾಡಲಾಯಿತು.

ಹಿಂದೂ ಮತ್ತು ಮುಸ್ಲಿಮರು ಪಂಜಗಳು ಮತ್ತು ಹಸ್ತಗಳಿಗೆ ತಂಬಿಗೆಯಲ್ಲಿ ಪಾನಕ, ಸಿಹಿ ಬೂಂದಿ, ಸಕ್ಕರೆ ಹಾಗೂ ಕಡಲೆಪೊಪ್ಪು ತಂದು ವಿಶೇಷ ಪ್ರಾರ್ಥನೆ ಮಾಡಿದರು. ಪಟ್ಟಣದ ಗೂಳೂರು ರಸ್ತೆಯ ಇಸ್ಮಾಯಿಲ್ ಖಾದ್ರಿ ಅವರು ಭಕ್ತರಿಗೆ ನವಿಲುಗರಿಯ ಗುಚ್ಛದಿಂದ ತಲೆಯ ಮೇಲೆ ಇಟ್ಟು ಆರ್ಶೀವಾದ ಮಾಡಿದರು. ಚಾವಡಿಯ ಮುಂದೆ ಅಗ್ನಿಕುಂಡ ಮಾಡಲಾಗಿತ್ತು. ತಮಟೆಗಳ ಶಬ್ದಕ್ಕೆ ಹಿರಿಯರು, ಕಿರಿಯರು ಶಿಳ್ಳೆ ಹೊಡೆದು ಅಗ್ನಿಕುಂಡದ ಸುತ್ತಲೂ ಹೆಜ್ಜೆ(ಹಲಾವು) ಹಾಕಿ ಸಂಭ್ರಮಿಸಿದರು.

ಮೊಹರಂ ಹಬ್ಬದಲ್ಲಿ ಮುಸ್ಲಿಮರ ಜತೆ ಹಿಂದೂ ಸಮುದಾಯವರು ಸೇರಿ ವಿಜೃಂಭಣಿಯಿಂದ ಆಚರಿಸಿದ್ದೇವೆ. ಬಾಬಯ್ಯ ಹಬ್ಬ ಹಿಂದೂ ಹಾಗೂ ಮುಸ್ಲಿಮರು ಸರಿ ಆಚರಿಸುವುದು ಸಹೋದರತೆ ಮತ್ತು ಸೌಹಾರ್ದತೆಗೆ ಪ್ರತೀಕ ಆಗಿದೆ
ಮೆಕಾನಿಕ್ ಬಾಬು ಸ್ಥಳೀಯ ನಿವಾಸಿ
ಕಳೆದ 30 ವರ್ಷಗಳಿಂದ ಪುರಾತನ ಬೈಲಾಂಜನೇಯ ದೇವಾಲಯದ ಬಲಭಾಗದ ಚಿಕ್ಕ ಕೊಠಡಿಯಲ್ಲಿ ಬಾಬಯ್ಯ ಹಬ್ಬ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಹಿಂದೂ ಮತ್ತು ಮುಸ್ಲಿಮರು ಸೇರಿ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ.
ಜಿ.ಎಂ.ರಾಮಕೃಷ್ಣಪ್ಪ ಮೊಹರಂ ಆಚರಣಾ ಸಮಿತಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT