ಗುರುವಾರ , ಆಗಸ್ಟ್ 18, 2022
24 °C
ನ್ಯಾಯಬೆಲೆ ಅಂಗಡಿ: ರಾಗಿ ಖರೀದಿಯಲ್ಲಿ ಭಾರಿ ಅವ್ಯವಹಾರ ಆರೋಪ

ಗೋದಾಮಿಗೆ ಶಾಸಕ ದಿಢೀರ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಗೂಳೂರು ರಸ್ತೆಯಲ್ಲಿನ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಂಗ್ರಹಿಸಿರುವ ರಾಗಿ, ಅಕ್ಕಿ, ಗೋಧಿಯ ಸಂಗ್ರಹಣಾ ಗೋದಾಮಿಗೆ ಶನಿವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅನಿರೀಕ್ಷಿತವಾಗಿ ದಾಳಿ ಮಾಡಿ, ಸಂಗ್ರಹಣೆ ಹಾಗೂ ಖರೀದಿಯಲ್ಲಿನ ಅವ್ಯವಹಾರ ಬಯಲಿಗೆಳೆದಿದ್ದಾರೆ.

ಜೂನ್ 12ರ ಶನಿವಾರದವರೆಗೆ ರೈತರಿಂದ ರಾಗಿ ಖರೀದಿ, ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆ ಮಾಡಿರುವ, ರಾಗಿ, ಅಕ್ಕಿ, ಗೋಧಿ ಸಂಗ್ರಹಣೆ ಹಾಗೂ ರಾಗಿ ಬೆಳೆದಿರುವ ರೈತರ ಮಾಹಿತಿಯ ಅಂಕಿಅಂಶಗಳ ಪ್ರತಿಗಳನ್ನು ಆಹಾರ ಶಾಖೆಯ ಅಧಿಕಾರಿಗಳಿಂದ ಪಡೆದುಕೊಂಡರು.

ಗೋದಾಮುಗಳಲ್ಲಿ ಇರುವ ರಾಗಿ, ಅಕ್ಕಿ, ಗೋಧಿ ಮೂಟೆಗಳನ್ನು ಎಣಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಮ್ಮ ಆಪ್ತ ಸಹಾಯಕ ಮೋಹನ್‌ಗೆ ಸೂಚಿಸಿದರು. ಸಂಗ್ರಹಣೆ ಮಾಡಿರುವ ವಿವರಗಳನ್ನು ನೀಡಲು ಆಹಾರ ಶಾಖೆಯ ಅಧಿಕಾರಿಗಳು ತಡಬಡಾಯಿಸಿದಾಗ, ಅಂಕಿಅಂಶಗಳ ಮಾಹಿತಿ ಇಲ್ಲದಿದ್ದರೆ ಏನು ಕೆಲಸ ಮಾಡುತ್ತಿದ್ದೀರಿ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಗ್ರಹಣಾ ಮೂಟೆಗಳ ಅಂಕಿಅಂಶಗಳನ್ನು ಪಡೆದುಕೊಂಡರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಕಳೆದ 2 ದಿನಗಳ ಹಿಂದೆ ನ್ಯಾಯಬೆಲೆ ಅಂಗಡಿಯವರು ದಿನಸಿ ವಿತರಣೆಯಲ್ಲಿ 2 ಮೂಟೆ ಕಡಿಮೆ ನೀಡುತ್ತಿದ್ದಾರೆ. ಪಡಿತರದಾರರಿಗೆ ಹಂಚಲು ಆಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಮೌಖಿಕವಾಗಿ ದೂರು ನೀಡಿದ್ದರು. 600 ಕ್ವಿಂಟಲ್‌ನಷ್ಟು ಅಕ್ಕಿ, 840 ಕ್ವಿಂಟಲ್‌ ರಾಗಿ, 400 ಕ್ವಿಂಟಲ್ ಅಕ್ಕಿ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗದೇ ಇರುವ ಮಾಹಿತಿ ಲಭ್ಯವಾಗಿದೆ’ ಎಂದು
ತಿಳಿಸಿದರು.

‘ಕೊರೊನಾ ಸಂಕಷ್ಟ ಕಾಲದಲ್ಲಿ ಬಡವರಿಗೆ ನೀಡುತ್ತಿರುವ ಅಕ್ಕಿ, ಗೋಧಿ, ರಾಗಿ ಮೂಟೆಗಳನ್ನು ದಲ್ಲಾಳಿಗಳು ದುರ್ಬಳಕೆ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಡವರ ಅನ್ನಕ್ಕೆ ಕನ್ನ ಹಾಕಿ, ಸರ್ಕಾರಿ ಹಣ ದುರ್ಬಳಕೆ, ಕರ್ತವ್ಯಲೋಪ ಮಾಡಿರುವ ಅಧಿಕಾರಿಗಳು, ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ರಾಗಿ ಖರೀದಿಯಲ್ಲಿ ಭಾರಿ ಅವ್ಯವಹಾರ ಆಗಿದೆ. ರಾಗಿ ಮಾರಾಟ ಮಾಡದೇ ಇರುವವರ ಖಾತೆಗಳಿಗೆ ಲಕ್ಷಾಂತರ ಹಣ ಜಮಾ ಆಗಿದೆ. ಸರ್ಕಾರಿ ಹಣ ದುರುಪಯೋಗ ಆಗಿದೆ. ಕ್ಷೇತ್ರದಲ್ಲಿ 28 ಸಾವಿರ ಕ್ವಿಂಟಲ್‌ನಷ್ಟು ರಾಗಿ ಬೆಳೆದಿದ್ದಾರೆ. ಆದರೆ 23 ಕ್ವಿಂಟಲ್‌ನಷ್ಟು ಮಾತ್ರ ಸಂಗ್ರಹಣೆ ಆಗಿದೆ. ಉಳಿದ 5 ಸಾವಿರ ಕ್ವಿಂಟಲ್ ರಾಗಿ ಮೂಟೆಗಳು ಪತ್ತೆ ಇಲ್ಲ. ಸೋಮವಾರ ಕೃಷಿ ಅಧಿಕಾರಿಗಳು, ತಹಶೀಲ್ದಾರ್‌ರೊಂದಿಗೆ ಚರ್ಚಿಸಲಾಗುವುದು. ಈ ಸಂಬಂಧ ತನಿಖೆ ಮಾಡಿಸಲಾಗುವುದು’ ಎಂದು ತಿಳಿಸಿದರು.

ತಹಶೀಲ್ದಾರ್ ಡಿ.ವಿ.ದಿವಾಕರ್ ಪ್ರತಿಕ್ರಿಯಿಸಿ, ಕೊರೊನಾ ಸಂದರ್ಭದಲ್ಲಿ ಆಹಾರ ಶಾಖೆಯ ವ್ಯವಹಾರ, ವಿತರಣೆ, ಖರೀದಿ ಮಾಡಿರುವ ಬಗ್ಗೆ ಮಾಹಿತಿ ಪಡೆಯಲು ಆಗಿಲ್ಲ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಮೌಖಿಕ ದೂರಿನಂತೆ ಗೋದಾಮುಗಳಿಗೆ ದಾಳಿ ಮಾಡಿದ್ದಾರೆ. ಅಂಕಿಅಂಶಗಳ ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯ ಲಾಗುವುದು. ಸೋಮವಾರದವರೆಗೂ ಆಹಾರ ಮಳಿಗೆಗಳಿಗೆ ಸೀಲುಮುದ್ರೆ ಹಾಕಲಾಗಿದೆ ಎಂದು
ತಿಳಿಸಿದರು.

ಆಹಾರ ಇಲಾಖೆಯ ಲೆಕ್ಕ ವ್ಯವಸ್ಥಾಪಕ ವಿಜಯ್ ಕುಮಾರ್, ಶಾಖೆಯ ತಾಲ್ಲೂಕು ಶಿರಸ್ತೇದಾರ್ ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನರಸಿಂಹಪ್ಪ, ಮುಖಂಡ ಅಮರನಾಥರೆಡ್ಡಿ, ಕೆಎನ್‌ಎಸ್ ಕೃಷ್ಣಪ್ಪ, ಪುರಸಭೆ ಸದಸ್ಯ ಅಶೋಕ್ ರೆಡ್ಡಿ, ನಾರಾಯಣಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.