ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ಮೋಟಾರ್ ಪಂಪ್ ದುರಸ್ತಿಯೇ ಸವಾಲು

Published 4 ಮಾರ್ಚ್ 2024, 6:51 IST
Last Updated 4 ಮಾರ್ಚ್ 2024, 6:51 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಬೇಸಿಗೆ ಆರಂಭವಾದೊಡನೆ, ರೈತರಿಗೆ ಕಷ್ಟಗಳೂ ಮೊದಲುಗೊಂಡಿವೆ. ಬಿಸಿಲಿನ ತಾಪವು ಬೆಳೆಗಳನ್ನು ಹಿಂಡಿ ಹಿಪ್ಪೆ ಮಾಡುವ ಇದೇ ಸಮಯದಲ್ಲಿ ನೀರಿನ ಕೊರತೆ, ವಿದ್ಯುಚ್ಛಕ್ತಿಯ ಕೊರತೆಯೂ ಎದುರಾಗಿದೆ. ಇವುಗಳೊಂದಿಗೆ ಕೊಳವೆ ಬಾವಿಗಳ ಮೋಟಾರ್ ಪಂಪ್‌ಗಳ ದುರಸ್ತಿ ಕಾರ್ಯವೂ ರೈತರ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತಿವೆ.

ರೈತರು ಇರುವುದ ರಲ್ಲಿಯೇ ಸರಿದೂಗಿಸಿಕೊಂಡು ಹೋಗೋಣವೆಂದರೆ ದುರ್ಭಿಕ್ಷದಲ್ಲಿ ಅಧಿಕಮಾಸ ಎಂಬಂತೆ ಸಬ್-ಮರ್ಸಿಬಲ್ ಮೋಟಾರು-ಪಂಪ್‌ಗಳು ರಿಪೇರಿ ಬರುವುದು ಕೂಡಾ ಹೆಚ್ಚಾಗಿ ಆಗುವುದು ಈ ಬೇಸಿಗೆಯ ಕಾಲದಲ್ಲಿಯೇ.

ಈ ಸಮಸ್ಯೆಯ ಕುರಿತಾಗಿ ಮೋಟಾರ್ ರಿಪೇರಿಗೆಂದು ವಿಜಯಪುರದಿಂದ ಶಿಡ್ಲಘಟ್ಟಕ್ಕೆ ಬಂದಿದ್ದ ರೈತ ಮಂಜುನಾಥ್ ಅವರನ್ನು ಮಾತನಾಡಿಸಿದಾಗ ಹಲವು ಸಂಗತಿಗಳು ತಿಳಿದವು. ಮಂಜುನಾಥ್ ಹೇಳುವಂತೆ ಬೇಸಿಗೆಯಲ್ಲಿ ಅಸಮರ್ಪಕ ವಿದ್ಯುತ್ ಮತ್ತು ಆಳಕ್ಕೆ ಹೋಗುವ ಅಂತರ್ಜಲಮಟ್ಟ ಮೋಟಾರ್ ಕೆಟ್ಟು ಹೋಗಲು ಪ್ರಮುಖ ಕಾರಣ. ಎರಡು ದಿನದ ಹಿಂದೆ ಕೆಟ್ಟುಹೋದ ಮೋಟಾರನ್ನು ರಿಪೇರಿ ಮಾಡಿಸಿ ಕೃಷಿ ಹೊಂಡಕ್ಕೆ ಬಿಟ್ಟು ರಾತ್ರಿ ಪಾಳಿಯಲ್ಲಿ ಬರುವ ಕರೆಂಟಿಗೆ ಕಾದು, ರಾತ್ರಿ ಒಂದು ಗಂಟೆಗೆ ಚಾಲೂ ಮಾಡಿದರೆ ಮೋಟಾರು ನೀರೆತ್ತಲಿಲ್ಲ. ಬೆಳಿಗ್ಗೆ ಮತ್ತೆ ಅದನ್ನೆತ್ತಿ ಶಿಡ್ಲಘಟ್ಟಕ್ಕೆ ತಂದಿದ್ದೇನೆ. ಈಗ ಸರಿಮಾಡಿಸಿ ರಾತ್ರಿ ನೀರಿಗೆ ಬಿಡುತ್ತೇನೆ. ನೀರು ಬರುತ್ತದೋ ಇಲ್ಲವೋ ತಿಳಿಯದು ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು. ನಾಲ್ಕೈದು ದಿನಗಳಿಂದ ಅವರ ಸೀಬೆ ತೋಟ ನೀರಿಲ್ಲದೆ ಒಣಗುತ್ತಿದೆ.

ಕೊಳವೆ ಬಾವಿ ಹೊಂದಿರುವ ರೈತರದ್ದು ನಾನಾ ಸಮಸ್ಯೆಗಳು ಪ್ರಾರಂಭವಾಗಿವೆ. ಕೆಲವರದ್ದು ಕೇಬಲ್ ಸುಟ್ಟರೆ, ಕೆಲವರದ್ದು ಮೋಟಾರ್ ಸುಟ್ಟಿರುತ್ತೆ. ಇನ್ನು ಕೆಲವರದ್ದು ಪ್ಯಾನಲ್ ಬೋರ್ಡ್ ರಿಪೇರಿ. ನೆಲದಾಳದಿಂದ ಪಂಪ್ ಮೋಟಾರ್ ಹೊರತೆಗೆದು ದುರಸ್ತಿ ಮಾಡಿಸುವಷ್ಟರಲ್ಲಿ ಕನಿಷ್ಠ ಎರಡು ದಿನವಾದರೂ ಬೇಕು. ಮತ್ತು ಹಣ ಐದರಿಂದ ಇಪ್ಪತ್ತು ಸಾವಿರ ಬೇಕು. ಒಂದೆಡೆ ಬೆಳೆ ನೀರಿಲ್ಲದೆ ಒಣಗುತ್ತದೆ, ಮತ್ತೊಂದೆಡೆ ರೈತರಿಗೆ ಆರ್ಥಿಕ ಮತ್ತು ಮಾನಸಿಕ ಸಂಕಷ್ಟ.

ವಿದ್ಯುತ್ ಬೆಳಗಿನ ಜಾವ ನಾಲ್ಕು ಗಂಟೆ, ರಾತ್ರಿ ವೇಳೆ ನಾಲ್ಕು ಗಂಟೆ ನೀಡಬೇಕಾಗಿದೆಯಾದರೂ ಲೆಕ್ಕ ಹಾಕಿದರೆ ಎಲ್ಲ ಸೇರಿ ಆರರಿಂದ ಏಳು ಗಂಟೆ ವಿದ್ಯುತ್ ಬರಬಹುದು. ಅದರಲ್ಲಿ ಕಾದಿದ್ದು ನೀರನ್ನು ಪಂಪ್ ಮಾಡಬೇಕು. ಈಗಾಗಲೇ ಅಂತರ್ಜಲ ಕುಸಿದು ಬರುವ ಅರ್ಧ ಅಂಗುಲ ಅಥವಾ ಒಂದು ಅಂಗುಲದಷ್ಟು ನೀರು ಅಲ್ಲಲ್ಲಿ ಗ್ಯಾಪ್ ಇರುವುದರಿಂದಾಗಿ ನೀರಿನ ಕೊರತೆಯೊಂದಿಗೆ ಪಂಪ್ ಮೋಟಾರ್ ರಿಪೇರಿ ಕೂಡ ರೈತರನ್ನು ಹೈರಾಣಾಗಿಸುತ್ತಿವೆ.

ಒಂದು ಅಂಗುಲದಷ್ಟು ನೀರು ಅಂದರೆ ಒಂದು ಗಂಟೆಗೆ 597 ಲೀಟರ್ ಅಂದರೆ ಸುಮಾರು ಆರು ಗಂಟೆ ಕಾಲ ನೀರು ಬಂದರೆ 3,582 ಲೀಟರ್. ರೈತ ಅತ್ಯಂತ ಲೆಕ್ಕಾಚಾರದಿಂದ ನೀರನ್ನು ಬಳಕೆ ಮಾಡಬೇಕಿದೆ.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಿದ್ಯುತ್ ಇಲಾಖೆಯವರು ಈಗಾಗಲೇ ಪ್ರತಿಯೊಂದು ಕೊಳವೆಬಾವಿ ಮತ್ತು ಅದರ ಮಾಲೀಕರ ಆಧಾರ್ ಸಂಖ್ಯೆಯನ್ನು ಪಡೆದು ದಾಖಲೀಕರಣ ಮಾಡಿದ್ದಾರೆ. ಅವರ ಅಂಕಿ ಅಂಶಗಳ ಪ್ರಕಾರ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 15,808 ಕೊಳವೆ ಬಾವಿಗಳಿವೆ. ಮೋಟಾರ್ ಪಂಪ್ ಕೆಡುತ್ತಿರುವುದು ಹೆಚ್ಚುತ್ತಿರುವುದರಿಂದ ದುರಸ್ತಿ ಮಾಡುವವರ ಬಳಿ ರೈತರು ಕಾದು ಕುಳಿತುಕೊಳ್ಳುವಂತಾಗಿದೆ.

ಮುಂದೆ ರೈತರ ಕೊಳವೆಬಾವಿಗಳಿಗೂ ಮೀಟರ್ ಅಳವಡಿಕೆ ಮಾಡಲಾಗುತ್ತದೆ ಎಂಬ ವದಂತಿ ರೈತರ ನಿದ್ದೆ ಕೆಡಿಸಿದೆ. ಸರ್ಕಾರ ಕೃಷಿ ಪಂಪ್‌ ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪೂರೈಸುತ್ತಿದೆ. ಆದರೆ, ಈ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಸಂಬಂಧ ಆಧಾರ್‌ ಕಾರ್ಡ್‌ ಸೇರಿದಂತೆ ಇತರೆ ಮಾಹಿತಿ ಕಲೆ ಹಾಕಲಾಗುತ್ತಿರುವುದು ರೈತ ವಲಯದ ತಲೆಬಿಸಿಗೆ ಕಾರಣವಾಗಿದೆ.

‘ಶ್ರಮ, ವೆಚ್ಚ ಹೆಚ್ಚು’

ಕಳೆದ ಬಾರಿ ಮಳೆ ಬೀಳದ ಕಾರಣ ಕೆರೆ ಒಣಗಿವೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿವೆ. ನೀರು ಸರಿಯಾಗಿ ಬಂದರಷ್ಟೇ ಕೊಳವೆ ಬಾವಿಯ ಮೋಟಾರು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲದಿದ್ದರೆ ರಿಪೇರಿಗೆ ಬರುತ್ತವೆ. ಕೊಳವೆ ಬಾವಿಯ ಮೋಟಾರನ್ನು ಹೊರತೆಗೆದು ಮತ್ತೆ ಬಿಡಲು ಸಾಕಷ್ಟು ಶ್ರಮ ಹಾಗೂ ವೆಚ್ಚ ಆಗುತ್ತದೆ. ಕೆಲವೆಡೆ ಕೇಬಲ್‌ ಕಳ್ಳತನ ಕೂಡ ಆಗುತ್ತಿದೆ. ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆ, ಕಳ್ಳರ ಕಾಟ ಹಾಗೂ ಬಿಸಿಲಿನ ತಾಪ ಎಲ್ಲವೂ ಒಗ್ಗೂಡಿ ರೈತರನ್ನು ಕಾಡುತ್ತಿವೆ – ತಾದೂರು ಮಂಜುನಾಥ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ

‘ಬಂಡವಾಳ ವಾಪಸ್‌ ಯಾವಾಗ?’

ಸುಮಾರು 1,300 ರಿಂದ 1,500 ಅಡಿ ಕೊಳವೆ ಬಾವಿ ಕೊರೆಸಿ, ಸಿಕ್ಕ ಅರ್ಧ ಅಥವಾ ಒಂದು ಅಂಗುಲ ನೀರು ಹೊರ ಬರುವಷ್ಟರಲ್ಲಿ 8 ರಿಂದ 10 ಲಕ್ಷ ಖರ್ಚಾಗಿದೆ. ಒಂದು ಎಕರೆ ಹೊಸದಾಗಿ ದ್ರಾಕ್ಷಿ ಬೆಳೆಗಾಗಿ ನಾಲ್ಕು ಲಕ್ಷ ಖರ್ಚಾಗಿದೆ. ಈ ಬೇಸಿಗೆಯ ಸಮಸ್ಯೆಗಳ ಜತೆಯಲ್ಲಿ ಹಾಕಿರುವ ಹಣವನ್ನು ಹೇಗೆ ಮತ್ತು ಯಾವಾಗ ಸಂಪಾದಿಸುವುದು ಎಂಬ ಚಿಂತೆ ಕಾಡುತ್ತಿದೆ‌– ರಂಜಿತ್, ರೈತ, ಅಪ್ಪೇಗೌಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT