ಶುಕ್ರವಾರ, ಜನವರಿ 22, 2021
19 °C
ಬುಡಕಟ್ಟು ಅಲೆಮಾರಿ ಜನಾಂಗಕ್ಕೆ ತಾತ್ಕಾಲಿಕ ಮನೆ ನಿರ್ಮಿಸಿಕೊಟ್ಟ ‘ನಿವಾಸ್’ ಸಂಸ್ಥೆ

ಗೌರಿಬಿದನೂರಿನ ಬಂಡಿರಾಮನಹಳ್ಳಿ ಅಲೆಮಾರಿಗಳಿಗೆ ದೊರಕಿತು ಸೂರು

ಎ.ಎಸ್.ಜಗನ್ನಾಥ್ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಊರೂರು ಸುತ್ತುತ್ತಾ ಕೂಲಿ‌ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತ ಬೆಟ್ಟದ ತಪ್ಪಲಿನಲ್ಲಿ ದಶಕಗಳಿಂದ ಅರೆಬರೆ ಗುಡಿಸಲನ್ನು ನಿರ್ಮಿಸಿಕೊಂಡು ಜೀವಿಸುತ್ತಿದ್ದ ಬುಡಕಟ್ಟು ಅಲೆಮಾರಿಗಳಿಗೆ ಸೂರು ನೀಡಲು ಬೆಂಗಳೂರಿನ ‘ನಿವಾಸ್’ ಸ್ವಯಂ ಸೇವ ಸಂಸ್ಥೆ ಮುಂದಾಗಿದೆ.

ತಾಲ್ಲೂಕಿನ ಮಂಚೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಡಿರಾಮನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಕೋಡಿ ಬ್ರಹ್ಮ ದೇವರ ಬೆಟ್ಟದ ತಪ್ಪಲಿನಲ್ಲಿ ಸುಮಾರು ಒಂದೂವರೆ ದಶಕಕ್ಕೂ ಅಧಿಕ ಕಾಲದಿಂದಲೂ ಅಲೆಮಾರಿಗಳು ಬದುಕುತ್ತಿದ್ದಾರೆ. ಸುಮಾರು 83 ಮಂದಿ ಯುಳ್ಳ 19 ಕುಟುಂಬಗಳು ಇಲ್ಲೇ ನೆಲೆಸಿವೆ. 

ನೆರೆಯ ಗ್ರಾಮಗಳಲ್ಲಿ ಕೂಲಿ ಕೆಲಸ, ಜೇನು ಬಿಡಿಸುವುದು, ಕರಕುಶಲ ವಸ್ತುಗಳ ತಯಾರಿಕೆ, ಗಾರೆ ಕೆಲಸಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಹುತೇಕರು ನೆರೆಯ ಆಂಧ್ರಪ್ರದೇಶ, ತಮಿಳುನಾಡು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಕೂಲಿಯನ್ನರಸಿ‌ ಬಂದಿದ್ದಾರೆ.

ಅವರ ಬದುಕಿನ ಬವಣೆ ಅರಿತ ಬೆಂಗಳೂರಿನ ‌‘ನಿವಾಸ್’ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಮುಖಂಡರ ಸಹಕಾರದೊಂದಿಗೆ ಬೆಟ್ಟದ ತಪ್ಪಲಿನಲ್ಲಿಯೇ ಮಿತವ್ಯಯದಲ್ಲಿ ಆಧುನಿಕ ಶೈಲಿಯ 5 ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.

ಜಿಲ್ಲಾಧಿಕಾರಿ ಗುರುತಿಸಿದ್ದು: ಬುಡಕಟ್ಟು ಅಲೆಮಾರಿ ಜನಾಂಗದವರು ಜೀವಿಸುತ್ತಿರುವ ಬೆಟ್ಟದ ತಪ್ಪಲಿನ ಈ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಗುಡಿಸಲು‌ ಮನೆಯಲ್ಲಿ ಮಗುವೊಂದು ಸಜೀವವಾಗಿ ದಹನವಾದ ಘಟನೆ ನಡೆಯಿತು. ಈ‌ ವೇಳೆ ಅಂದಿನ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಖುದ್ಧು ಸ್ಥಳಕ್ಕೆ ಭೇಟಿ‌ ನೀಡಿ‌ ಇಲ್ಲಿನ ಬುಡಕಟ್ಟು ಜನರ ಬದುಕಿನ ಬವಣೆಯನ್ನು ಪರಿಶೀಲಿಸಿದರು.

ಕೂಡಲೇ ಅವರ ಆಶ್ರಯಕ್ಕಾಗಿ 1.20 ಕುಂಟೆ ಭೂಮಿಯನ್ನು ಮೀಸಲಿಟ್ಟು ಸರ್ವೆ ಮಾಡಿಸಲಾಗಿತ್ತು. ಇಲ್ಲಿನ ಕುಟುಂಬಗಳಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು‌ ಒದಗಿಸುವಂತೆ ತಿಳಿಸಲಾಗಿತ್ತು. ಸ್ಥಳೀಯ ‌ಗ್ರಾಮ ಪಂಚಾಯಿತಿ ಕುಡಿಯುವ ನೀರು ಮತ್ತು‌ ವಿದ್ಯುತ್ ‌ಸೌಲಭ್ಯ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು