ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಅಕ್ಷರಲೋಕದ ಉಸಿರು ಸಿದ್ದಲಿಂಗಯ್ಯ

ನುಡಿ ನಮನ ಕಾರ್ಯಕ್ರಮ
Last Updated 27 ಜುಲೈ 2021, 3:56 IST
ಅಕ್ಷರ ಗಾತ್ರ

ಚಿಂತಾಮಣಿ: ಕವಿ ಹಾಗೂ ಹೋರಾಟಗಾರ ಡಾ.ಸಿದ್ದಲಿಂಗಯ್ಯ 70ರ ದಶಕದಲ್ಲಿ ಬಂಡಾಯ ಸಾಹಿತ್ಯ ಹಾಗೂ ಅಕ್ಷರಲೋಕದ ಉಸಿರಾಗಿದ್ದರು ಎಂದು ಸಾಹಿತಿ ಹಾಗೂ ಜನಪದ ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್ ಅಭಿಪ್ರಾಯಪಟ್ಟರು.

ನಗರಸಭೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಕವಿ ಹಾಗೂ ಹೋರಾಟಗಾರ ಡಾ.ಸಿದ್ದಲಿಂಗಯ್ಯ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲಾ ಕಾಲೇಜುಗಳಲ್ಲೇ ವ್ಯಾಸಂಗ ಮಾಡಿ, ಚಿಕ್ಕಂದಿನಿಂದಲೇ ಭಾಷಣ ಮಾಡುವ ಹಾಗೂ ಕವಿತೆಗಳನ್ನು ಬರೆಯುವಲ್ಲಿ ಆಸಕ್ತಿ ಹೊಂದಿದ್ದರು. ಕವಿ ಹಾಗೂ ಹೋರಾಟಗಾರರಾಗಿ ಬೆಳೆದ ಪರಿ ಎಂತಹವರಿಗೂ ಆಶ್ಚರ್ಯ ಮೂಡಿಸುತ್ತದೆ. 70ರ ದಶಕದಲ್ಲಿ ದಲಿತ ಚಳವಳಿಯ ತಾಯಿ ಬೇರಾಗಿದ್ದರು. ದಲಿತ ಚಳವಳಿಯ ಸಮಯದಲ್ಲಿ ಹಾಡು, ಕವನ ಸಂಕಲನ ರಚಿಸಿ ಹೋರಾಟಕ್ಕೆ ಶಕ್ತಿ ತುಂಬಿದರು ಎಂದರು.

70ರ ದಶಕದಲ್ಲಿ ಬೂಸಾ ಚಳವಳಿ ಹಾಗೂ ಪೆರಿಯಾರ್ ನಾಸ್ತಿಕವಾದದ ಪ್ರಭಾವಕ್ಕೆ ಒಳಗಾಗಿದ್ದರು. ಉತ್ತಮ ಭಾಷಣಕಾರರಾಗಿ, ಕವಿಯಾಗಿ ಹೋರಾಟದ ಜತೆಗೆ ಕನ್ನಡದ ಇಡೀ ಕನ್ನಡ ಸಾಹಿತ್ಯವನ್ನು ಬದಲಾಯಿಸಿದ್ದರು. ಇಂದಿನ ಯುವಜನತೆ ಸಿದ್ದಲಿಂಗಯ್ಯನವರ ಆದರ್ಶ ಗುಣಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜಮುಖಿಗಳಾಗಬೇಕು ಎಂದು ನುಡಿದರು.

ದಲಿತಸಂಸ್ಥಾಪಕರಲ್ಲಿ ಒಬ್ಬರಾದ ಎನ್.ವೆಂಕಟೇಶ್ ಮಾತನಾಡಿ, ಹೋರಾಟಗಾರ ಸಿದ್ದಲಿಂಗಯ್ಯ ಅವರ ಪ್ರಭಾವ ದಲಿತ ಸಂಘರ್ಷದ ಮೇಲಿತ್ತು. ಸಮಿತಿ ಸಂಘಟನಾತ್ಮಕವಾಗಿ ಮುನ್ನಡೆಯುವ ಸಾಹಿತ್ಯವನ್ನು ರಚಿಸಿದ್ದರು. ಕೇವಲ ರಾಜ್ಯಕ್ಕೆ ಮಾತ್ರ ಸೀಮಿತಗೊಳ್ಳದೆ ಇಡೀ ದೇಶವನ್ನು ಪ್ರತಿನಿಧಿಸುತ್ತಿದ್ದರು ಎಂದರು.

ದಲಿತ ಸಂಘರ್ಷ ಸಮಿತಿಯ ಮತ್ತೊಬ್ಬ ಸಂಸ್ಥಾಪಕ ಎನ್.ವೆಂಕಟೇಶ್ ಮಾತನಾಡಿ, ಶೋಷಣೆಯ ಸಮಾಜವನ್ನು, ಶೋಷಿತರನ್ನು ಸಮಸ್ಯೆಗಳನ್ನು ತಮ್ಮ ಭಾಷಣ, ಹಾಡು, ಕವಿತೆಗಳ ಸಾಹಿತ್ಯದ ಮೂಲಕ ಸರಳವಾಗಿ ಎಳೆ ಎಳೆಯಾಗಿ ಬಿಡಿಸಿಟ್ಟವರು ಸಿದ್ದಲಿಂಗಯ್ಯ. ಅಸ್ಪೃಶ್ಯತೆ, ಜಾತಿ, ಬಡತನ ಸೇರಿದಂತೆ ಹಲವಾರು ಸಮಸ್ಯೆಗಳಿಂದ ತತ್ತರಿಸಿಹೋಗಿದ್ದ ಸಮುದಾಯದ ಅಭಿವೃದ್ಧಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಸಮಾಜವನ್ನು ಶೋಷಣೆ ಮಾಡುವ ಪರಂಪರೆ ಈಗಲೂ ಇದೆ.ಸೂಕ್ಷ್ಮವಾಗಿ ಗಮನಿಸಿದರೆ ಸಮಾಜದಲ್ಲಿ ಇಂದು ಯಾರು ಸುರಕ್ಷಿತವಾಗಿಲ್ಲ, ನೆಮ್ಮದಿಯಾಗಿಲ್ಲ. ರೈತ, ದಲಿತ ಸೇರಿದಂತೆ ಎಲ್ಲ ಪ್ರತಿಪರ ಸಂಘಟನೆಗಳು ಚಳವಳಿಯನ್ನು ಮುಂದುವರೆಸಿಕೊಂಡು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷೆ ರೇಖಾಉಮೇಶ್, ಸಿದ್ದಲಿಂಗಯ್ಯ ಪುತ್ರಿ ಡಾ.ಮಾನಸ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿದರು. ಭೋದಿಸತ್ವ ಟ್ರಸ್ಟ್ ವೆಂಕಟನಾರಾಯಣಮ್ಮ, ತಿಮ್ಮರಾಯಪ್ಪ, ವಿಜಯೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT