ಬುಧವಾರ, ಆಗಸ್ಟ್ 17, 2022
30 °C
ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ

ಕೇಂದ್ರದ ಧೋರಣೆಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ಗಡಿಭಾಗಗಳಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾಳಿರುವ ಧೋರಣೆ ಕುರಿತು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ರೈತರು ರೊಚ್ಚಿಗೆದ್ದು ದೆಹಲಿ ಬಳಿ ರೈತರು ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಅವರ ಬೇಡಿಕೆಗೆ ಸ್ಪಂದಿಸದ ಕೇಂದ್ರದ ನಿಲುವು ರೈತ ಸಂಘಟನೆಗಳ ಮುಖಂಡರಲ್ಲಿ ಆಕ್ರೋಶ ಹೆಚ್ಚಿಸಿದೆ.

‘ಕೇಂದ್ರ ಕೃಷಿ ಸಚಿವರು ರೈತರ ಆದಾಯದಲ್ಲಿ ಹೆಚ್ಚಳವಾಗಿಸಿದ್ದೇವೆ ಎಂದು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ರೈತರು ದೆಹಲಿಗೆ ಬಂದಿದ್ದು, ಸರ್ಕಾರ ಉತ್ತರ ಕೊಡಲಿ. ಸರ್ಕಾರದ ಆಡಳಿತ ಪ್ರಶ್ನಿಸುವವರನ್ನೆಲ್ಲ ದೇಶವಿರೋಧಿಗಳಂತೆ ನಡೆಸಿಕೊಳ್ಳುವ ಪ್ರಭುತ್ವದ ವೈಖರಿ ಪ್ರಜಾಪ್ರಭುತ್ವಕ್ಕೆ ಮಾರಕ’ ಎನ್ನುತ್ತಾರೆ ಅನೇಕ ಮುಖಂಡರು.

‘ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಹೇಳಿದ್ದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ವರದಿ ಜಾರಿಗೆ ತರಲ್ಲ ಎಂದು ಹೇಳಿದೆ. ಆದರೆ, ವರದಿಯಲ್ಲಿನ ಕೆಲವು ಅಂಶಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಜನಪ್ರತಿನಿಧಿಗಳು ಹೇಳುವುದು ಗೊಂದಲ ಮೂಡಿಸಿದೆ’ ಎಂದು ಕೆಲವರು ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸೋಂಕಿನ ಸಮಯದಲ್ಲಿ ಲಾಕ್‌ಡೌನ್‌ ಹೆಸರಿನಲ್ಲಿ ಜನರನ್ನು ಮನೆಯಿಂದ ಹೊರಬರದಂತೆ ತಡೆದು, ಕೃಷಿ ಸಂಬಂಧಿತ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ರೈತ ಸಮುದಾಯಕ್ಕೆ ದ್ರೋಹ ಬಗೆದಿವೆ’ ಎಂದು ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಆರೋಪಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ದುಡಿಯುವ ವರ್ಗದ ಜನರನ್ನು ನೇರವಾಗಿ ಬೀದಿಗೆ ತಳ್ಳುವಂತಹ ಪ್ರಯತ್ನಗಳನ್ನು ಮಾಡುತ್ತಿವೆ. ರೈತರನ್ನು ಶಾಶ್ವತವಾಗಿ ಕೃಷಿಯಿಂದ ದೂರ ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ’ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.